ದುಬೈ: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರ ಶೋಯೆಬ್ ಮಲಿಕ್(Shoaib Malik) ಅವರಿಗೆ ವಿಚ್ಚೇದನ ನೀಡಿದ ಬಳಿಕ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ(Sania Mirza) ಅವರು ಮೊದಲ ಬಾರಿಗೆ ಕನ್ನಡಿ ಮುಂದೆ ನಿಂತಿರುವ ಫೋಟೊ ಹಂಚಿಕೊಂಡು ‘ಪ್ರತಿಬಿಂಬ’ ಎಂದು ಬರೆದುಕೊಂಡು ಪೋಸ್ಟ್ ಮಾಡಿದ್ದರು. ಈ ಪೋಸ್ಟ್ ಮಾಡಿದ 3 ತಿಂಗಳ ಬಳಿಕ ಇದೀಗ ಮತ್ತೊಂದು ಪೋಸ್ಟ್ ಮಾಡಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿರುವ ಸಾನಿಯಾ, ‘ನಾನು ಇದನ್ನು ಮೊದಲೇ ಹೇಳಲು ಬಯಸಲಿಲ್ಲ. ನಾನು ಹೇಳಿದ್ದು ಬಹಳ ಕಡಿಮೆ. ಹೇಳಲು ಬಹಳಷ್ಟಿದೆ. ಆದರೂ ನಾನು ಮೌನವಾಗಿದ್ದೇನೆ’ ಎಂದು ಬರೆದಿರುವ ಇಮೇಜ್ ಕಾರ್ಡ್ ಒಂದನ್ನು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಕಂಡು ನೆಟ್ಟಿಗರು ಸಾನಿಯಾ ಅವರ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಪೋಸ್ಟ್ ಇದಾಗಿದೆ ಎಂದು ಕಮೆಂಟ್ ಮಾಡಿದ್ದಾರೆ.
ಸಾನಿಯಾ ತಂದೆ ಇಮ್ರಾನ್ ಮಿರ್ಜಾ ಕೂಡ ಪಿಟಿಐಗೆ ಪ್ರತಿಕ್ರಿಕೆ ನೀಡುವ ವೇಳೆ, “ನನ್ನ ಮಗಳು ಮಲಿಕ್ಗೆ ಖುಲಾ ನೀಡಿದ್ದಾಳೆ. ಖುಲಾ ಎಂದರೆ ಸ್ತ್ರೀ ತನ್ನ ಪತಿಯಿಂದ ಬಿಡುಗಡೆ ಕೇಳುವ ಸ್ವಾತಂತ್ರ್ಯ. ಇದು ಸಮ್ಮತಿಯ ವಿಚ್ಛೇದನವಾಗಿದ್ದು, ಗಂಡನೊಂದಿಗೆ ತನಗೆ ಬಾಳ್ವೆ ಮಾಡಲು ಇಷ್ಟವಿಲ್ಲ ಎಂದಾದಲ್ಲಿ ಆಕೆ ಖುಲಾ ನೀಡಿ ಬೇರೆ ಆಗಬಹುದಾಗಿದೆ” ಎಂದು ಹೇಳಿದ್ದರು.
ಶೋಯೆಬ್ ಮಲಿಕ್ ಸನಾ ಜಾವೇದ್ ಅವರನ್ನು ವಿವಾಹವಾಗುವ ಮೂಲಕ ಸಾನಿಯಾ ಮಿರ್ಜಾ(Sania Mirza) ಜತೆಗಿನ 13 ವರ್ಷದ ದಾಂಪತ್ಯವು ಕೊನೆಗೊಂಡಿತ್ತು. ಇದೇ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಹಲವು ಊಹಾಪೋಹದ ಸುದ್ದಿಗಳು ಹರಿದಾಡುತ್ತಿತ್ತು. ಕೆಲವರು ವಿಚ್ಚೇದನ ನೀಡದೆ ಶೋಯೆಬ್ ವಿವಾಹವಾಗಿದ್ದಾರೆ ಎಂದರೆ, ಇನ್ನು ಕೆಲವರು ಕಳೆದ ವರ್ಷವೇ ಈ ಜೋಡಿ ವಿಚ್ಚೇದನ ಪಡೆದಿತ್ತು ಎಂದು ಚರ್ಚಿಸುತ್ತಿದ್ದರು. ಈ ಎಲ್ಲ ವಿದ್ಯಮಾನಗಳನ್ನು ಕಂಡು ಸಾನಿಯಾ ಮಿರ್ಜಾ ಅವರ ಕುಟುಂಬವೇ ಅಧಿಕೃತ ಪ್ರಕಟನೆಯ ಮೂಲಕ ಸ್ಪಷ್ಟನೆ ನೀಡಿತ್ತು.
ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ಮಲಿಕ್ ಅವರು 2010ರಲ್ಲಿ ಮದುವೆಯಾಗಿದ್ದರು. ಹೈದರಾಬಾದ್‌ನ ತಾಜ್ ಕೃಷ್ಣಾ ಹೋಟೆಲ್‌ನಲ್ಲಿ ಹೈದರಾಬಾದ್ ಮುಸ್ಲಿಂ ಸಮುದಾಯದ ಸಂಪ್ರದಾಯದಂತೆ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇವರಿಗೆ ಇಜಾನ್ ಎಂಬ ಪುತ್ರನಿದ್ದಾನೆ. ಮಲಿಕ್ಗೆ ವಿಚ್ಚೇದನ ನೀಡಿದ ಬಳಿಕ ಸಾನಿಯಾ ದುಬೈನಲ್ಲಿ ನೆಲೆಸಿದ್ದಾರೆ. 2023ರ ಆಸ್ಟ್ರೇಲಿಯನ್ ಓಪನ್ಲ್ಲಿ ಆಡುವ ಮೂಲಕ ಸಾನಿಯಾ ಟೆನಿಸ್ಗೆ ವಿದಾಯ ಹೇಳಿದ್ದರು. ರೋಹನ್ ಬೋಪಣ್ಣ ಜತೆ ಮಿಶ್ರ ಡಬಲ್ಸ್ ಆಡಿದ್ದ ಅವರು ಈ ಟೂರ್ನಿಯಲ್ಲಿ ರನ್ನರ್ ಅಪ್ ಆಗಿದ್ದರು.
ಇದನ್ನೂ ಓದಿ Sania Mirza: ಪಾಕಿಸ್ತಾನಿ ಸಿಂಗರ್ ಜತೆ ಕಾಣಿಸಿಕೊಂಡ ಸಾನಿಯಾ ಮಿರ್ಜಾ; ಫೋಟೊ ವೈರಲ್
2004ರ ವರ್ಷದಲ್ಲಿ ಸಾನಿಯಾ ಮಿರ್ಜಾ ವೃತ್ತಿಪರವಾದ ಟೆನಿಸ್ ಆಡಲು ಆರಂಭ ಮಾಡಿದಾಗ, ಶಾರ್ಟ್ಸ್ ಮತ್ತು ಟೀ ಶರ್ಟ್ ಹಾಕಿ ಕೋರ್ಟಿಗೆ ಇಳಿದಾಗ ಆಕೆಯ ಮೇಲೆ ಕಾಮಾಲೆ ಕಣ್ಣಿನ ಸಂಪ್ರದಾಯವಾದಿಗಳು ಫತ್ವಾ ಹೊರಡಿಸಿ ಮುಗಿಬಿದಿತ್ತು. ಅವರು ಪರ್ದಾ ಹಾಕಲು ನಿರಾಕರಣೆ ಮಾಡಿದಾಗ, ಪಾಕಿಸ್ತಾನದ ಕ್ರಿಕೆಟ್ ಆಟಗಾರ ಶೋಯಬ್ ಮಲಿಕ್ ಅವರನ್ನು ಮದುವೆಯಾದಾಗ ಹಲವರು ಅವರನ್ನು ʻಪಾಕಿಸ್ಥಾನದ ಸೊಸೆ’ ಎಂದು ಮೂಗು ಮುರಿದದ್ದೂ ಇದೆ!