ಹೈದರಾಬಾದ್: ಕೆಲ ತಿಂಗಳ ಹಿಂದಷ್ಟೇ ಪಾಕಿಸ್ತಾನ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರಿಂದ ವಿಚ್ಛೇದನ ಪಡೆದಿದ್ದ ಭಾರತೀಯ ಟೆನಿಸ್ ತಾರೆ ಸಾನಿಯಾ ಮಿರ್ಜಾ(Sania Mirza) ಅವರು ಇದೀಗ ಮತ್ತೆ ಸುದ್ದಿಯಾಗಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ(lok sabha elections 2024) ಕಣಕ್ಕಿಳಿಯಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.
ಹೌದು, ಸಾನಿಯಾ ಮಿರ್ಜಾ ಅವರನ್ನು ತೆಲಂಗಾಣದ ಪ್ರಮುಖ ಲೋಕಸಭಾ ಕ್ಷೇತ್ರದಲ್ಲಿ ಕಣಕ್ಕಿಳಿಯಲು ಆಹ್ವಾನ ನೀಡಲಾಗಿದೆ ಎನ್ನಲಾಗಿದೆ. ಕಾಂಗ್ರೆಸ್ ಪಕ್ಷ ಅವರಿಗೆ ಟಿಕೆಟ್ ನೀಡಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ. ತೆಲಂಗಾಣದಲ್ಲಿ ಎಐಎಂಐಎಂ ಪಕ್ಷದ ಅಸಾದುದ್ದೀನ್ ಓವೈಸಿ ವಿರುದ್ಧ ಸಾನಿಯಾ ಮಿರ್ಜಾ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಯೋಚನೆ ಹಾಕಿಕೊಂಡಿದ್ದು ಈಗಾಗಲೇ ಪಕ್ಷ ಸೇರುವಂತೆ ಆಹ್ವಾನ ಕೂಡ ನೀಡಲಾಗಿದೆ ಎಂದು ವರದಿಯಾಗಿದೆ. ಆದರೆ ಸಾನಿಯಾ ಅವರು ಇದುವರೆಗೂ ಈ ವಿಚಾರದಲ್ಲಿ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.
BIG NEWS:
— Chikku (@imChikku_) March 27, 2024
Owaisi receives a shock, while Congress workers get a surprise.
Indian star tennis player #SaniaMirza is rumored to be contesting for the Hyderabad LokSabha on Congress ticket.! #Telangana#LokSabhaElections2024 pic.twitter.com/9zVar6prQI
ಮೂಲಗಳ ಪ್ರಕಾರ ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ಧೀನ್ ಅವರು ಸಾನಿಯಾ ಮಿರ್ಜಾ ಹೆಸರನ್ನು ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ. ಅಜರುದ್ದೀನ್ ಅವರು ಮಿರ್ಜಾ ಕುಟುಂಬದೊಂದಿಗೆ ನಿಕಟ ಕೌಟುಂಬಿಕ ಸಂಬಂಧವನ್ನು ಹೊಂದಿದ್ದಾರೆ. 2019ರಲ್ಲಿ ಸಾನಿಯಾ ಸಹೋದರಿ ಅನಮ್ ಮಿರ್ಜಾ ಅವರನ್ನು ಅಜರುದ್ಧೀನ್ ಮಗ ಮೊಹಮ್ಮದ್ ಅಸಾದುದ್ದೀನ್ ವಿವಾಹವಾಗಿದ್ದರು. ಹೀಗಾಗಿ ಸಾನಿಯಾ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳಿಸಲು ಅಜರುದ್ಧೀನ್ ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಇನ್ನೊಂದು ಮೂಲಗಳ ಪ್ರಕಾರ ಸಾನಿಯಾ ಮಿರ್ಜಾ ಕೂಡ ಈ ಆಫರ್ಗೆ ಒಪ್ಪಿಕೊಂಡಿದ್ದು ತಮ್ಮ ನಿರ್ಧಾರವನ್ನು ಶೀಘ್ರದಲ್ಲೇ ಅಧಿಕೃತವಾಗಿ ಘೋಷಿಸಲಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ Sania Mirza: ಪಾಕಿಸ್ತಾನಿ ಸಿಂಗರ್ ಜತೆ ಕಾಣಿಸಿಕೊಂಡ ಸಾನಿಯಾ ಮಿರ್ಜಾ; ಫೋಟೊ ವೈರಲ್
ಶೋಯೆಬ್ ಮಲಿಕ್ ಸನಾ ಜಾವೇದ್ ಅವರನ್ನು ವಿವಾಹವಾಗುವ ಮೂಲಕ ಸಾನಿಯಾ ಮಿರ್ಜಾ(Sania Mirza) ಜತೆಗಿನ 13 ವರ್ಷದ ದಾಂಪತ್ಯವು ಕೊನೆಗೊಂಡಿತ್ತು. ಇದೇ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಹಲವು ಊಹಾಪೋಹದ ಸುದ್ದಿಗಳು ಹರಿದಾಡುತ್ತಿತ್ತು. ಕೆಲವರು ವಿಚ್ಚೇದನ ನೀಡದೆ ಶೋಯೆಬ್ ವಿವಾಹವಾಗಿದ್ದಾರೆ ಎಂದರೆ, ಇನ್ನು ಕೆಲವರು ಕಳೆದ ವರ್ಷವೇ ಈ ಜೋಡಿ ವಿಚ್ಚೇದನ ಪಡೆದಿತ್ತು ಎಂದು ಚರ್ಚಿಸುತ್ತಿದ್ದರು. ಈ ಎಲ್ಲ ವಿದ್ಯಮಾನಗಳನ್ನು ಕಂಡು ಸಾನಿಯಾ ಮಿರ್ಜಾ ಅವರ ಕುಟುಂಬವೇ ಅಧಿಕೃತ ಪ್ರಕಟನೆಯ ಮೂಲಕ ಸ್ಪಷ್ಟನೆ ನೀಡಿತ್ತು. ಶೋಯೆಬ್ – ಸಾನಿಯಾ ವಿಚ್ಛೇದನ ಪಡೆದು ಕೆಲವು ತಿಂಗಳುಗಳಾಗಿವೆ ಎಂದು ಕುಟುಂಬ ಮೂಲಗಳು ತಿಳಿಸಿತ್ತು.
ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ಮಲಿಕ್ ಅವರು 2010ರಲ್ಲಿ ಮದುವೆಯಾಗಿದ್ದರು. ಹೈದರಾಬಾದ್‌ನ ತಾಜ್ ಕೃಷ್ಣಾ ಹೋಟೆಲ್‌ನಲ್ಲಿ ಹೈದರಾಬಾದ್ ಮುಸ್ಲಿಂ ಸಮುದಾಯದ ಸಂಪ್ರದಾಯದಂತೆ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇವರಿಗೆ ಇಜಾನ್ ಎಂಬ ಪುತ್ರನಿದ್ದಾನೆ. ಮಲಿಕ್ಗೆ ವಿಚ್ಚೇದನ ನೀಡಿದ ಬಳಿಕ ಸಾನಿಯಾ ಅವರು ದುಬೈನಲ್ಲಿ ನೆಲೆಸಿದ್ದಾರೆ. 2023ರ ಆಸ್ಟ್ರೇಲಿಯನ್ ಓಪನ್ಲ್ಲಿ ಆಡುವ ಮೂಲಕ ಸಾನಿಯಾ ಟೆನಿಸ್ಗೆ ವಿದಾಯ ಹೇಳಿದ್ದರು. ರೋಹನ್ ಬೋಪಣ್ಣ ಜತೆ ಮಿಶ್ರ ಡಬಲ್ಸ್ ಆಡಿದ್ದ ಅವರು ಈ ಟೂರ್ನಿಯಲ್ಲಿ ರನ್ನರ್ ಅಪ್ ಆಗಿದ್ದರು.