ಕೊಚ್ಚಿ: ಟೀಮ್ ಇಂಡಿಯಾದಲ್ಲಿ ಪದೇಪದೆ ಅವಕಾಶ ವಂಚಿತವಾಗುತ್ತಿರುವ ಕೇರಳದ ಕ್ರಿಕೆಟಿಗ ಸಂಜು ಸ್ಯಾಮ್ಸನ್(Sanju Samson)ಗೆ ಐರ್ಲೆಂಡ್ ಕ್ರಿಕೆಟ್ ಮಂಡಳಿಯು ತಮ್ಮ ತಂಡದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುವಂತೆ ಆಹ್ವಾನ ನೀಡಿದೆ.
ಸಂಜು ಸ್ಯಾಮ್ಸನ್ ಭಾರತ ಪರ ಉತ್ತಮ ಪ್ರದರ್ಶನ ತೋರಿದರೂ ಕೇವಲ ಬೆರಳೆಣಿಕೆಯ ಪಂದ್ಯಗಳಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಕೆಲವೊಮ್ಮೆ ತಂಡದಲ್ಲಿ ಸ್ಥಾನ ಸಿಕ್ಕರೂ ಆಡುವ ಬಳಗದಿಂದ ದೂರವೇ ಉಳಿದಿದ್ದು ಹೆಚ್ಚು. ಇದೀಗ ಸಂಜು ಸ್ಯಾಮ್ಸನ್ ಅವರ ಪ್ರತಿಭೆಯನ್ನು ಗಮನಿಸಿದ ಐರ್ಲೆಂಡ್ ಕ್ರಿಕೆಟ್ ಮಂಡಳಿ ತಮ್ಮ ತಂಡದಲ್ಲಿ ಆಡುವಂತೆ ಆಫರ್ ನೀಡಿದೆ.
ಸಂಜುಗೆ ಅವಕಾಶ ನೀಡದ ಕುರಿತು ಹಲವು ಬಾರಿ ಸಾಮಾಜಿಕ ಜಾಲತಾಣದಲ್ಲಿ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ವಿರುದ್ಧ ಟೀಕೆಗಳ ಸುರಿಮಳೆಯೂ ಹರಿದಿತ್ತು. ಇದರ ಬೆನ್ನಲ್ಲೇ ಐರ್ಲೆಂಡ್ ಕ್ರಿಕೆಟ್‌ನಿಂದ ಆಹ್ವಾನ ಬಂದಿದೆ. ವರದಿಗಳ ಪ್ರಕಾರ, ಐರ್ಲೆಂಡ್ ಕ್ರಿಕೆಟ್ ಮಂಡಳಿಯು ಸಂಜು ಸ್ಯಾಮ್ಸನ್ ಅವರನ್ನು ಈ ವಿಚಾರವಾಗಿ ಸಂಪರ್ಕಿಸಿದೆ. ಐರ್ಲೆಂಡ್ ತಂಡದಲ್ಲಿ ಸಂಜುಗೆ ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಆಡುವ ಅವಕಾಶ ಕೊಡುವ ಬಗ್ಗೆ ಭರವಸೆ ಕೂಡ ನೀಡಲಾಗಿದೆ ಎನ್ನಲಾಗಿದೆ. ಆದರೆ ಸಂಜು ಸ್ಯಾಮ್ಸನ್ ಈ ಆಹ್ವಾನವನ್ನು ನಿರಾಕರಿಸಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೆ ಆಹ್ವಾನ ನೀಡಿದಕ್ಕೆ ಐರ್ಲೆಂಡ್ ಕ್ರಿಕೆಟ್ ಮಂಡಳಿಗೆ ಅವರು ಕೃತಜ್ಞತೆ ಕೂಡ ಸಲ್ಲಿಸಿದ್ದಾರೆ ಎಂದು ವರದಿಯೊಂದು ಹೇಳಿದೆ. ಆದರೆ ಈ ಬಗ್ಗೆ ಸಂಜು ಅಥವಾ ಐರ್ಲೆಂಡ್ ಕ್ರಿಕೆಟ್ ಮಂಡಳಿಯಿಂದ ಅಧಿಕೃತ ಮಾಹಿತಿ ಬಂದಿಲ್ಲ.
ಏಳು ವರ್ಷಗಳಲ್ಲಿ ಆಡಿದ್ದು ಕೇವಲ 27 ಪಂದ್ಯ
2015ರಲ್ಲೇ ಭಾರತ ತಂಡದ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಸಂಜು ಸುಮಾರು 7 ವರ್ಷಗಳ ವೃತ್ತಿ ಜೀವನದಲ್ಲಿ ಆಡಿದ್ದು ಕೇವಲ 27(11 ಏಕದಿನ, 16 ಟಿ20) ಪಂದ್ಯಗಳು ಮಾತ್ರ. ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿದ್ದ ಸಂದರ್ಭಗಳಲ್ಲಿ ಮಾತ್ರವೇ ಸಂಜುಗೆ ಅಲ್ಪ ಅವಕಾಶಗಳು ಬಂದಿವೆ. ಇತ್ತೀಚಿನ ಕಿವೀಸ್ ಸರಣಿಯಲ್ಲಿ ಅವಕಾಶ ಪಡೆದರೂ ಆಡಿದ್ದು ಮಾತ್ರ ಒಂದು ಪಂದ್ಯ. ಒಟ್ಟಾರೆ ಅವರನ್ನು ಟೀಮ್ ಇಂಡಿಯಾದಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬತ್ತೆ ಬಳಸಿಕೊಳ್ಳುವಂತೆ ಕಾಣುತ್ತಿದೆ ಎಂದರೂ ತಪ್ಪಾಗಲಾರದು.
ಇದನ್ನೂ ಓದಿ | Sanju Samson | ಸಂಜು ಸ್ಯಾಮ್ಸನ್ಗೆ ಅವಕಾಶ ನೀಡದಕ್ಕೆ ಬೇಸರ ವ್ಯಕ್ತಪಡಿಸಿದ ಪಾಕ್ ಕ್ರಿಕೆಟಿಗ ಕನೇರಿಯಾ