Site icon Vistara News

Sanju Samson: ಅರ್ಧಶತಕ ಬಾರಿಸಿ ಐಪಿಎಲ್​ನಲ್ಲಿ ವಿಶೇಷ ದಾಖಲೆ ಬರೆದ ಸ್ಯಾಮ್ಸನ್​

Sanju Samson smashed an unbeaten 82

ಜೈಪುರ: ಲಕ್ನೋ ಸೂಪರ್​ ಜೈಂಟ್ಸ್(Lucknow Super Giants)​ ವಿರುದ್ಧದ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್​ ನಡೆಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ರಾಜಸ್ಥಾನ್​ ರಾಯಲ್ಸ್​(Rajasthan Royals) ತಂಡದ ನಾಯಕ ಸಂಜು ಸ್ಯಾಮ್ಸನ್(Sanju Samson)​ ಈ ಪಂದ್ಯದಲ್ಲಿ ಹಲವು ದಾಖಲೆಗಳನ್ನು ಕೂಡ ತಮ್ಮ ಹೆಸರಿಗೆ ಬರೆದಿದ್ದಾರೆ.

ಸಂಜು ಸ್ಯಾಮ್ಸನ್ ಅವರು ಅರ್ಧಶತಕ ಬಾರಿಸುತ್ತಿದ್ದಂತೆ, ಐಪಿಎಲ್​ನಲ್ಲಿ(IPL 2024) 2020ರಿಂದ 2024ರ ಆವೃತ್ತಿ ವರೆಗೆ ತಾನಾಡಿದ ಎಲ್ಲ ಮೊದಲ ಐಪಿಎಲ್​ ಪಂದ್ಯದಲ್ಲಿಯೂ 50ಕ್ಕಿಂತ ಹೆಚ್ಚು ರನ್ ಗಳಿಸಿದ ದಾಖಲೆ ಬರೆದರು. ಈ ಸಾಧನೆ ಮಾಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಯೂ ಸಂಜೂ ಹೆಸರಿನಲ್ಲಿದೆ.

ಸಂಜು ದಾಖಲೆ


2020ರಲ್ಲಿ ಚೆನ್ನೈ ವಿರುದ್ಧ 74 ರನ್​.

2021ರಲ್ಲಿ ಪಂಜಾಬ್​ ಕಿಂಗ್ಸ್​ ವಿರುದ್ಧ 119.

2022ರಲ್ಲಿ ಸನ್​ರೈಸರ್ಸ್​ ಹೈದರಾಬಾದ್​ ವಿರುದ್ಧ 55.

2023ರಲ್ಲಿ ಸನ್​ರೈಸರ್ಸ್​ ಹೈದರಾಬಾದ್​ ವಿರುದ್ಧ 55.

2024ರಲ್ಲಿ ಲಕ್ನೋ ಸೂಪರ್​ ಜೈಂಟ್ಸ್​ ವಿರುದ್ಧ 82*

ಇದು ಮಾತ್ರವಲ್ಲದೆ ರಾಜಸ್ಥಾನ್​ ರಾಯಲ್ಸ್​ ಪರ ಅತ್ಯಧಿಕ 50 ಪ್ಲಸ್​ ಮೊತ್ತ ಪೇರಿಸಿದವರ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದರು. ಜಾಸ್​ ಬಟ್ಲರ್​ ಮತ್ತು ಅಜಿಂಕ್ಯಾ ರಹಾನೆ ಕ್ರಮವಾಗಿ ಮೊದಲೆರಡು ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಉಭಯ ಆಟಗಾರರು ಕೂಡ 23 ಬಾರಿ ಅರ್ಧಶತಕ ಬಾರಿಸಿದ್ದಾರೆ. ಆದರೆ ಕಡಿಮೆ ಇನಿಂಗ್ಸ್​ ಲೆಕ್ಕಾಚಾರದಲ್ಲಿ ಇವರು ಸಂಜುಗಿಂತ ಮೇಲಿನ ಸ್ಥಾನ ಪಡೆದಿದ್ದಾರೆ. ಸಂಜು(127 ಇನಿಂಗ್ಸ್​) ಕೂಡ 23 ಬಾರಿ ಈ ಸಾಧನೆ ಮಾಡಿದ್ದಾರೆ. ಮೊದಲ ಸ್ಥಾನದಲ್ಲಿರುವ ಬಟ್ಲರ್ ಈಗಲೂ​ ರಾಜಸ್ಥಾನ ಪರವೇ ಆಡುತ್ತಿದ್ದಾರೆ. ರಹಾನೆ ಚೆನ್ನೈ ತಂಡದಲ್ಲಿದ್ದಾರೆ. ಶೇನ್​ ವ್ಯಾಟ್ಸನ್(16 ಬಾರಿ)​ 4ನೇ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ IPL 2024: ಪಂದ್ಯದ ವೇಳೆ ತುಂಡಾಗಿ ಬಿದ್ದ ಸ್ಪೈಡರ್‌ಕ್ಯಾಮ್ ಕೇಬಲ್​; ತಪ್ಪಿದ ಭಾರಿ ಅನಾಹುತ

ಲಕ್ನೋ ವಿರುದ್ಧ ಭರ್ಜರಿ ಬ್ಯಾಟಿಂಗ್​ ನಡೆಸಿದ ಸಂಜು ಸ್ಯಾಮ್ಸನ್​, ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್​ಗೆ ಒತ್ತು ಕೊಟ್ಟು ಪಂದ್ಯದ ಕೊನೆಯ ಎಸೆತದವರೆಗೂ ಲಕ್ನೋ ಬೌಲರ್​ಗಳ ಮೇಲೆ ಸವಾರಿ ಮಾಡಿದರು. 52 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ 6 ಸಿಕ್ಸರ್ ನೆರವಿನಿಂದ ಅಜೇಯ 82 ರನ್ ಬಾರಿಸಿದರು. ಮೂರನೇ ವಿಕೆಟ್‌ಗೆ ರಿಯಾನ್ ಪರಾಗ್ ಜತೆ ಸೇರಿ ಕೇವಲ 59 ಎಸೆತಗಳಲ್ಲಿ 93 ರನ್‌ಗಳ ಜತೆಯಾಟವಾಡಿ ತಂಡಕ್ಕೆ ನೆರವಾದರು.

ರಾಜಸ್ಥಾನ್​ಗೆ 20 ರನ್​ ಗೆಲುವು


ಇಲ್ಲಿನ ಸವಾಯ್ ಮಾನ್​ಸಿಂಗ್​ ಕ್ರಿಕೆಟ್​ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಐಪಿಎಲ್​ನ ಡಬಲ್​ ಹೆಡರ್​ನ ಮೊದಲ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ನಡೆಸಿದ ರಾಜಸ್ಥಾನ್,​ ನಾಯಕ ಸಂಜು ಸ್ಯಾಮ್ಸನ್​ ಅವರ ಆಕರ್ಷಕ ಅರ್ಧಶತಕ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್​ಗೆ 193 ರನ್​ಗಳ ಭರ್ಜರಿ ಮೊತ್ತ ಪೇರಿಸಿತು. ಈ ಸವಾಲನ್ನು ಲಕ್ನೋ ದಿಟ್ಟ ರೀತಿಯಿಂದ ಬೆನ್ನಟ್ಟಿಕೊಂಡು ಹೋದರೂ ಕೂಡ ಅಂತಿಮವಾಗಿ 6 ವಿಕೆಟ್​ಗೆ 173 ರನ್​ ಮಾತ್ರ ಗಳಿಸಲಷ್ಟೇ ಶಕ್ತವಾಗಿ ಶರಣಾಯಿತು.

Exit mobile version