ಗುವಾಹಟಿ: ಪಂಜಾಬ್ ಕಿಂಗ್ಸ್(Punjab Kings) ವಿರುದ್ಧದ ಪಂದ್ಯದಲ್ಲಿ 5 ವಿಕೆಟ್ಗಳ ಸೋಲು ಕಾಣುವ ಮೂಲಕ ರಾಜಸ್ಥಾನ್ ರಾಯಲ್ಸ್(Rajasthan Royals) ಸತತ 4ನೇ ಸೋಲಿಗೆ ತುತ್ತಾಯಿತು. ತಂಡದ ಈ ಕಳಪೆ ಪ್ರದರ್ಶನದ ಬಗ್ಗೆ ನಾಯಕ ಸಂಜು ಸ್ಯಾಮ್ಸನ್(sanju samson) ಬಹಿರಂಗವಾಗಿಯೇ ಬೇಸರ ಹೊರಹಾಕಿದ್ದಾರೆ.
ಸೋಲಿನ ಬಳಿಕ ಮಾತನಾಡಿದ ಸಂಜು ಸ್ಯಾಮ್ಸನ್, ಕಳೆದ ನಾಲ್ಕು ಪಂದ್ಯಗಳಿಂದ ನಾವು ವೈಫಲ್ಯಗಳನ್ನು ಅನುಭವಿಸುತ್ತಿದ್ದೇವೆ. ಇದಕ್ಕೆ ಮುಖ್ಯ ಕಾರಣ ಸಂಘಟಿತ ಪ್ರದರ್ಶನ ತೋರದೇ ಇರುವುದು. ನಮ್ಮಲ್ಲಿ ಹಲವು ಮ್ಯಾಚ್ ವಿನ್ನರ್ಗಳಿದ್ದಾರೆ. ಆದರೆ ಯಾರೂ ಕೂಡ ಪಂದ್ಯ ಗೆಲ್ಲಿಸಿಕೊಡುವಂತಹ ಪ್ರದರ್ಶನ ನೀಡುತ್ತಿಲ್ಲ ಎಂದು ಹೇಳಿದರು.
ಈ ಹಿಂದೆ ನಾವು 200 ಪ್ಲಸ್ ರನ್ಗಳನ್ನು ಸುಲಭವಾಗಿ ಕಲೆಹಾಕಿದ್ದೇವೆ ಮತ್ತು ಚೇಸಿಂಗ್ ಕೂಡ ಮಾಡಿದ್ದೇವೆ. ಆದರೆ ಈಗ ಕನಿಷ್ಠ 150ರ ಗಡಿ ದಾಡಲೂ ಕೂಡ ಪರದಾಡುವ ಸ್ಥಿತಿಯಲ್ಲಿದ್ದೇವೆ. ಮುಂದಿನ ಪಂದ್ಯಗಳಲ್ಲಿ ಸಂಘಟಿತ ಪ್ರದರ್ಶನ ತೋರುವ ತುರ್ತು ಅಗತ್ಯವಿದೆ. ಪ್ಲೇ ಆಫ್ಗೆ ಪ್ರವೇಶ ಪಡೆದಿದ್ದರೂ ಕೂಡ ಮುಂದಿನ ಪಂದ್ಯದಲ್ಲಿ ಗೆಲ್ಲಲೇ ಬೇಕು. ಈ ಮೂಲಕ ಹಿಂದಿನ ಫಾರ್ಮ್ ಕಂಡುಕೊಳ್ಳಬೇಕಿದೆ ಎಂದು ಸಂಜು ಸಹ ಆಟಗಾರರಿಗೆ ಎಚ್ಚರಿಕೆ ಸಂದೇಶ ನೀಡಿದ್ದಾರೆ. ಬೌಲಿಂಗ್ ವಿಭಾಗದಲ್ಲಿಯೂ ಸುಧಾರಣೆ ಕಂಡುಕೊಳ್ಳುವ ಅನಿವಾರ್ಯತೆಯೂ ಇದೆ ಎಂದು ಇದೇ ಸಂದರ್ಭದಲ್ಲಿ ಸಂಜು ಹೇಳಿದರು.
ಇದನ್ನೂ ಓದಿ IPL 2024 Points Table: ಪಂಜಾಬ್ಗೆ ಗೆಲುವು; ಅಂಕಪಟ್ಟಿಯಲ್ಲಿ ಪಾತಾಳಕ್ಕೆ ಕುಸಿದ ಮುಂಬೈ
ರಾಜಸ್ಥಾನ್ ತಂಡಕ್ಕೆ 2ನೇ ತವರಾದ ಗುವಾಹಟಿಯ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ 65ನೇ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ರಾಜಸ್ಥಾನ್ ರಾಯಲ್ಸ್ ಬ್ಯಾಟಿಂಗ್ ವೈಫಲ್ಯ ಕಂಡು ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು ಕೇವಲ 144 ರನ್ ಗಳಿಸಿತು. ಸಣ್ಣ ಮೊತ್ತವನ್ನು ಬೆನ್ನಟ್ಟಿದ ಪಂಜಾಬ್(Punjab Kings) ಕೂಡ ಒಂದು ಹಂತದಲ್ಲಿ ಆಘಾತ ಎದುರಿಸಿ ಬಳಿಕ ಚೇತರಿಕೆ ಹಾದಿ ಹಿಡಿದು 18.5 ಓವರ್ನಲ್ಲಿ 5 ವಿಕೆಟ್ ನಷ್ಟಕ್ಕೆ 145 ರನ್ ಬಾರಿಸಿ ಗೆಲುವಿನ ನಗೆ ಬೀರಿತು.
ರಾಜಸ್ಥಾನ್ ಪರ ಯಶಸ್ವಿ ಜೈಸ್ವಾಲ್(4) ಜಾಸ್ ಬಟ್ಲರ್ ಅನುಪಸ್ಥಿತಿಯಲ್ಲಿ ಆಡಲಿಳಿದ ಕೊಹ್ಲರ್-ಕಾಡ್ಮೋರ್(18), ನಾಯಕ ಸಂಜು ಸ್ಯಾಮ್ಸನ್(18), ಧೃವ್ ಜುರೇಲ್(0), ರೋಮನ್ ಪೋವೆಲ್(4) ಬ್ಯಾಟಿಂಗ್ ವೈಫಲ್ಯ ಕಂಡು ಪೆವಿಲಿಯನ್ ಪರೇಡ್ ನಡೆಸಿದರು. ರಿಯಾನ್ ಪರಾಗ್(48) ಮತ್ತು ಆರ್.ಅಶ್ವಿನ್(28) ಅವರ ಅಸಾಮಾನ್ಯ ಬ್ಯಾಟಿಂಗ್ನಿಂದಾಗಿ ತಂಡ 100 ಗಡಿ ದಾಟಿ ಸ್ಪರ್ಧಾತ್ಮಕ ಮೊತ್ತ ಗಳಿಸುವಲ್ಲಿ ಯಶಸ್ಸು ಕಂಡಿತು.