ಚೆನ್ನೈ : ಪ್ರವಾಸಿ ನ್ಯೂಜಿಲೆಂಡ್ ಎ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ನೇತೃತ್ವದ ಭಾರತ ಎ ತಂಡ (Team India) ಏಳು ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ. ಶಾರ್ದುಲ್ ಠಾಕೂರ್ (೩೨ ರನ್‌ಗಳಿಗೆ ೪ ವಿಕೆಟ್) ಭರ್ಜರಿ ಬೌಲಿಂಗ್ ನಡೆಸಿ ಎದುರಾಳಿ ತಂಡದ ಬ್ಯಾಟರ್‌ಗಳಿಗೆ ಕಡಿವಾಣ ಹಾಕಿದರೆ, ಋತುರಾಜ್ ಗಾಯಕ್ವಾಡ್ (೪೧), ರಜತ್ ಪಾಟೀದಾರ್ (೪೫*) ತಂಡದ ಗೆಲುವಿಗೆ ರನ್‌ಗಳ ಕೊಡುಗೆ ಕೊಟ್ಟರು.
ಚೆನ್ನೈನ ಚೆಪಾಕ್ ಸ್ಟೇಡಿಯಮ್‌ನಲ್ಲಿ ನಡೆದ ಗುರುವಾರ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದ ಭಾರತ ಎ ತಂಡ ಎದುರಾಳಿ ತಂಡಕ್ಕೆ ಬ್ಯಾಟಿಂಗ್ ಆಹ್ವಾನ ಕೊಟ್ಟಿತು. ಮೊದಲು ಬ್ಯಾಟ್ ಮಾಡಿದ ಪ್ರವಾಸಿ ತಂಡ ೪೦.೨ ಓವರ್‌ಗಳಲ್ಲಿ ೧೬೭ ರನ್‌ಗಳಿಗೆ ಸರ್ವಪತನ ಕಂಡಿತು. ಗುರಿ ಬೆನ್ನಟ್ಟಿದ ಭಾರತ ತಂಡ ೩೧.೫ ಓವರ್‌ಗಳಲ್ಲಿ ೩ ವಿಕೆಟ್ ಕಳೆದುಕೊಂಡು ೧೭೦ ರನ್ ಬಾರಿಸಿ ಜಯಶಾಲಿಯಾಯಿತು.
ಸಾಧಾರಣ ಮೊತ್ತ ಪೇರಿಸಲು ಆರಂಭಿಸಿದ ಭಾರತ ಪರ ಪೃಥ್ವಿ ಶಾ ೧೭ ರನ್‌ಗಳಿಗೆ ವಿಕೆಟ್ ಒಪ್ಪಿಸಿದರೆ, ಇನ್ನೊಬ್ಬ ಆರಂಭಿಕ ಬ್ಯಾಟರ್ ಋತುರಾಜ್ ಗಾಯಕ್ವಾಡ್ ೪೧ ರನ್‌ಗಳ ಕೊಡುಗೆ ಕೊಟ್ಟರು. ರಾಹುಲ್ ತ್ರಿಪಾಠಿ ೩೧ ರನ್ ಬಾರಿಸಿದರೆ ನಾಯಕ ಸಂಜು ಸ್ಯಾಮ್ಸನ್ ೨೯ ರನ್ ಬಾರಿಸಿದರು. ರಜತ್ ಪಾಟೀದಾರ್ ೪೫ ರನ್ ಬಾರಿಸಿ ತಂಡದ ಜಯವನ್ನು ಸುಲಭಗೊಳಿಸಿದರು.
ಭರ್ಜರಿ ಬೌಲಿಂಗ್
ಇನಿಂಗ್ಸ್ ಆರಂಭಿಸಿದ ನ್ಯೂಜಿಲೆಂಡ್ ಎ ತಂಡ ಭಾರತದ ಬೌಲರ್‌ಗಳ ದಾಳಿಗೆ ತತ್ತರಿಸಿ ಸತತವಾಗಿ ವಿಕೆಟ್ ಕಳೆದುಕೊಂಡಿತು. ಹೀಗಾಗಿ ೧೮.೧ ಓವರ್‌ಗಳಲ್ಲಿ ೭೪ ರನ್‌ಗಳಿಗೆ ೮ ವಿಕೆಟ್ ಪತನಕೊಂಡು ಸಂಕಷ್ಟಕ್ಕೆ ಬಿತ್ತು. ಅದರೆ, ಮೈಕೆಲ್ ರಿಪ್ಪಾನ್ (೬೧) ಹಾಗೂ ಜೋ ವಾಕರ್ (೩೬) ೯ನೇ ವಿಕೆಟ್‌ಗೆ 89 ರನ್ ಜತೆಯಾಟ ನೀಡಿದರು. ಇದರಿಂದಾಗಿ ಪ್ರವಾಸಿ ತಂಡದ ಮರ್ಯಾದೆ ಉಳಿಯಿತು. ಕುಲ್ದೀಪ್ ಸೇನ್ ೩೦ ರನ್‌ಗಳಿಗೆ ೩ ವಿಕೆಟ್ ಕಬಳಿಸಿದರು.
ಸರಣಿಯ ಮುಂದಿನೆರಡು ಪಂದ್ಯಗಳು ಸೆಪ್ಟೆಂಬರ್ ೨೫ ಹಾಗೂ ೨೭ರಂದು ನಡೆಯಲಿದೆ.
ಸ್ಕೋರ್ ವಿವರ
ನ್ಯೂಜಿಲೆಂಡ್ ಎ : ೪೦.೨ ಓವರ್‌ಗಳಲ್ಲಿ ೧೬೭ (ಮೈಕೆಲ್ ರಿಪ್ಪಾನ್ ೬೧, ಜೊ ವಾಕರ್ ೩೬, ಶಾರ್ದುಲ್ ಠಾಕೂರ್ ೩೨ಕ್ಕೆ೪,ಕುಲ್ದೀಪ್ ಸೇನ್ ೩೦ಕ್ಕೆ೩).
ಭಾರತ ಎ : ೩೧.೫ ಓವರ್‌ಗಳಲ್ಲಿ ೩ ವಿಕೆಟ್‌ಗೆ ೧೭೦ (ಋತುರಾಜ್ ಗಾಯಕ್ವಾಡ್ ೪೧, ರಾಹುಲ್ ತ್ರಿಪಾಠಿ ೩೧, ರಜರ್ ಪಾಟೀದಾರ್ ೪೫*, ಮೈಕೆಲ್ ರಿಪ್ಪಾನ್ ೨೮ಕ್ಕೆ೧).
ಇದನ್ನೂ ಓದಿ | Team India | ಜಸ್‌ಪ್ರಿತ್ ಬುಮ್ರಾ ರೆಡಿ, ಟೆನ್ಷನ್ ಬೇಡ ಎಂದು ಸೂರ್ಯಕುಮಾರ್ ಯಾದವ್