ಟೆಹ್ರಾನ್: ಹಿಜಾಬ್ ಇಲ್ಲದೆ ವಿದೇಶದಲ್ಲಿ ಚೆಸ್ ಟೂರ್ನಿಯಲ್ಲಿ ಸ್ಪರ್ಧಿಸಿದ್ದ ಇರಾನ್ ಆಟಗಾರ್ತಿ ಸಾರಾ ಖಡೆಮ್(Sara Khadem) ಅವರಿಗೆ ದೇಶಕ್ಕೆ ಮರಳದಂತೆ ಎಚ್ಚರಿಕೆ ನೀಡಲಾಗಿದೆ. ಈ ವಿಚಾರವನ್ನು ದಿ ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ವರದಿ ಮಾಡಿದೆ.
ಕಳೆದ ವಾರ ಕಜಕಿಸ್ತಾನದ ಅಲ್ಮಾಟಿಯಲ್ಲಿ ನಡೆದ ಫೀಡೆ ವರ್ಲ್ಡ್ ರಾಪಿಡ್ ಮತ್ತು ಬ್ಲಿಟ್ಜ್ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಸಾರಾ ಖಡೆಮ್ ಹಿಜಾಬ್ ಇಲ್ಲದೆ ಸ್ಪರ್ಧಿಸಿದ್ದರು. ಇದು ಈ ದೇಶದ ಮೂಲಭೂತವಾದಿ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿತ್ತು.
ಇರಾನ್‌ನ ಕಟ್ಟುನಿಟ್ಟಾದ ಡ್ರೆಸ್ ಕೋಡ್‌ಗಳ ಅಡಿಯಲ್ಲಿ ಹೆಡ್ ಸ್ಕಾರ್ಫ್ ಕಡ್ಡಾಯವಾಗಿರುವ ಹಿಜಾಬ್ ಧರಿಸಿದೆ ಸ್ಪರ್ಧಿಸಿದ ಹಿನ್ನಲೆಯಲ್ಲಿ ಇದೀಗ ಸಾರಾ ಖಡೆಮ್ ಅವರಿಗೆ ಮೂಲಭೂತವಾದಿಗಳು ದೇಶಕ್ಕೆ ಮರಳದಂತೆ ಎಚ್ಚರಿಕೆ ಹಾಕಿದ್ದಾರೆ. ಈ ಭಯದಿಂದ ಅವರು ಸ್ಪೇನ್‌ಗೆ ತೆರಳಿದ್ದಾರೆ.
ಘಟನೆ ಬಳಿಕ ಆಟಗಾರ್ತಿಗೆ ಹಲವಾರು ದೂರುವಾಣಿ ಕರೆಗಳು ಬಂದಿದ್ದು, ದೇಶಕ್ಕೆ ಹಿಂದುರುಗದಂತೆ ಎಚ್ಚರಿಕೆ ನೀಡಿವೆ. ಇನ್ನು ಕೆಲವರು ಜೀವ ಬೆದರಿಕೆ ಹಾಕಿದ್ದಾರೆ. ಮಾತ್ರವಲ್ಲದೇ ಇರಾನ್‌ನಲ್ಲಿರುವ ಖಾಡೆಂ ಅವರ ಸಂಬಂಧಿಕರು ಮತ್ತು ಪೋಷಕರಿಗೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಆದರೆ ಇರಾನ್‌ನ ವಿದೇಶಾಂಗ ಸಚಿವಾಲಯ ಪ್ರಕರಣದ ಕುರಿತು ಈ ವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಜತೆಗೆ ಘಟನೆ ಬಗ್ಗೆ ತನಿಖೆಯನ್ನೂ ಆರಂಭಿಸಿಲ್ಲ ಎಂದು ತಿಳಿದುಬಂದಿದೆ.
ಈ ಹಿಂದೆಯೂ ಇರಾನಿಯನ್ ಅಥ್ಲೀಟ್, ಪರ್ವತಾರೋಹಿ ಎಲ್ನಾಜ್ ರೆಕಾಬಿ ಅವರು ದಕ್ಷಿಣ ಕೊರಿಯಾದಲ್ಲಿ ನಡೆದ ಅಂತಾರಾಷ್ಟ್ರೀಯ ಕ್ರೀಡಾ ಸ್ಪರ್ಧೆಯಲ್ಲಿ ಹಿಜಾಬ್ ಧರಿಸದೆ ಪಾಲ್ಗೊಂಡಿದ್ದಕ್ಕೆ ಇಲ್ಲಿನ ಮೂಲಭೂತವಾದಿಗಳು ಎಲ್ನಾಜ್ ಅವರ ಮನೆ ಧ್ವಂಸಗೊಳಿಸಿದ್ದರು.
ಇದನ್ನೂ ಓದಿ | Saudi Arabia Bans Hijab | ಸೌದಿ ಅರೇಬಿಯಾ ಪರೀಕ್ಷಾ ಕೇಂದ್ರಗಳಲ್ಲಿ ಹಿಜಾಬ್ ನಿಷೇಧ, ಕ್ರಾಂತಿಕಾರಿ ಹೆಜ್ಜೆ ಇಟ್ಟ ಇಸ್ಲಾಮಿಕ್ ರಾಷ್ಟ್ರ