Site icon Vistara News

Shubhman Gill : ಗಿಲ್​ ಬಾರಿಸಿದ ಸೂಪರ್​ ಸಿಕ್ಸರ್​ಗೆ ಚಿಯರ್ಸ್​ ಹೇಳಿದ ಸಾರಾ

Sara Tendulkar

ಪುಣೆ: ಟೀಮ್​ ಇಂಡಿಯಾದ ಸ್ಟಾರ್ ಬ್ಯಾಟರ್​ ಶುಭಮನ್ ಗಿಲ್​ (Shubhman Gill) ಫಾರ್ಮ್ ಕಂಡುಕೊಂಡಿದ್ದಾರೆ. ಡೆಂಗ್ಯೂ ಜ್ವರದಿಂದ ಬಳಲಿದ ಕಾರಣ ವಿಶ್ವ ಕಪ್​ನ ಮೊದಲೆರಡು ಪಂದ್ಯಗಳನ್ನು ನಷ್ಟ ಮಾಡಿಕೊಂಡಿದ್ದ ಗಿಲ್​ ಬಳಿಕ ಚೇತರಿಸಿಕೊಂಡು ಪಾಕಿಸ್ತಾನ ವಿರುದ್ಧ ಆಡಿದ್ದರು. ಆದರೆ, ಅವರು ಆ ಪಂದ್ಯದಲ್ಲಿ ಮಿಂಚಲು ವಿಫಲಗೊಂಡಿದ್ದರು. ಆದರೆ, ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ 53 ರನ್ ಬಾರಿಸಿ ವಿಶ್ವಾಸ ಮೂಡಿಸಿದ್ದಾರೆ. ಈ ಮೂಲಕ ಅವರು ಹಾಲಿ ವಿಶ್ವ ಕಪ್​ನಲ್ಲಿ ಮೊದಲ ಅರ್ಧ ಶತಕ ಬಾರಿಸಿದ್ದಾರೆ. ಇದು ಅವರಿಗೆ ಖುಷಿಯ ಸಂಗತಿ ಎನಿಸಿದ್ದರೂ ಅವರಿಗೆ ಖುಷಿ ಕೊಡುವಂಥ ಸಂಗತಿ ಏನೆಂದರೆ ಅವರಿಗೆ ಚಿಯರ್ಸ್​ ಹೇಳಲು ಅವರ ಪ್ರೆಯಸಿ ಎನ್ನಲಾದ ಸಾರಾ ತೆಂಡೂಲ್ಕರ್ ಅವರು ಬಂದಿದ್ದಾರೆ. ಈ ಮೂಲಕ ಗಿಲ್​ ದಿನದಾಟದಲ್ಲಿ ನೆಟ್ಟಿಗರ ಹೈಲೈಟ್ ಆಗಿದ್ದರು.

ಪಂದ್ಯದಲ್ಲಿ ಅರ್ಧ ಶತಕ ಬಾರಿಸುವ ಮೊದಲು ಗಿಲ್​ ಸ್ಟ್ರೈಟ್​ ಸಿಕ್ಸರ್​ ಒಂದನ್ನು ಬಾರಿಸಿದ್ದರು. ಈ ವೇಳೆ ಪ್ರೇಕ್ಷಕರ ಸ್ಟ್ಯಾಂಡ್​ನಲ್ಲಿ ಕುಳಿತಿದ್ದ ಸಾರಾ ತೆಂಡೂಲ್ಕರ್​ ಚಪ್ಪಾಳೆ ತಟ್ಟಿ ಸಂಭ್ರಮಸಿದ್ದಾರೆ. ಈ ವಿಡಿಯೊವನ್ನು ನೆಟ್ಟಿಗರು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡು ಸಾರಾ ಬಂದಿರುವ ವಿಚಾರವನ್ನು ಜಗತ್ತಿಗೆಲ್ಲ ಮುಟ್ಟಿಸಿದ್ದಾರೆ.

ಭಾರತಕ್ಕೆ ಸಾಧಾರಣ ಗೆಲುವಿನ ಗುರಿ

ಸಂಘಟಿತ ಬೌಲಿಂಗ್​ ದಾಳಿ ನಡೆಸಿದ ಭಾರತ ತಂಡ ವಿಶ್ವ ಕಪ್​ನಲ್ಲಿ ತನ್ನ ನಾಲ್ಕನೇ ಪಂದ್ಯದಲ್ಲಿ ಬಾಂಗ್ಲಾದೇಶ (Ind vs Ban) ತಂಡವನ್ನು 256 ರನ್​ಗಳಿಗೆ ನಿಯಂತ್ರಿಸಿದೆ. ಈ ಮೂಲಕ ರೋಹಿತ್​ ಶರ್ಮಾ ಬಳಗಕ್ಕೆ 257 ರನ್​ಗಳ ಗೆಲುವಿನ ಗುರಿ ಎದುರಾಗಿದೆ. ಆರಂಭದಲ್ಲಿ ಬಾಂಗ್ಲಾದೇಶ ತಂಡದ ಬ್ಯಾಟರ್​ಗಳು ಮೇಲುಗೈ ಸಾಧಿಸಿದರೆ, ಬಳಿಕ ಭಾರತದ ಬೌಲರ್​ಗಳು ರನ್​ವೇಗಕ್ಕೆ ಕಡಿವಾಣ ಹಾಕಿದರು.

ಇಲ್ಲಿನ ಎಂಸಿಎ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಅವಕಾಶ ಸಿಕ್ಕಾಗ ರನ್​ ಗಳಿಸುತ್ತಾ ನಿಗದಿತ 50 ಓವರ್​ಗಳಲ್ಲಿ 8 ವಿಕೆಟ್​ ನಷ್ಟ ಮಾಡಿಕೊಂಡು 256 ರನ್​ ಬಾರಿಸಿತು.

ಈ ಸುದ್ದಿಗಳನ್ನು ಓದಿ :
IND vs BAN: ಹಾರ್ದಿಕ್​ ಪಾಂಡ್ಯಗೆ ಗಾಯ; ಟೀಮ್​ ಇಂಡಿಯಾಕ್ಕೆ ಆತಂಕ
Ravindra Jadeja : ಸ್ಟನ್ನಿಂಗ್ ಕ್ಯಾಚ್​ ಹಿಡಿದು ವಿಶೇಷ ರೀತಿಯಲ್ಲಿ ಸಂಭ್ರಮಿಸಿದ ರವೀಂದ್ರ ಜಡೇಜಾ

ಬಾಂಗ್ಲಾದೇಶ ತಂಡ ಉತ್ತಮ ಆರಂಭವನ್ನೇ ಪಡೆಯಿತು. 14.4 ಓವರ್​ಗಳಲ್ಲಿ 93 ರನ್​ ಬಾರಿಸುವ ಮೂಲಕ ದೊಡ್ಡ ಸ್ಕೋರ್ ಗಳಿಸುವ ಗುರಿಯನ್ನು ವ್ಯಕ್ತಪಡಿಸಿತು. ಆದರೆ, ಕುಲ್ದೀಪ್​ ಯಾದವ್ ಅವರ ಅಮೋಘ ಕೈಚಳಕಕ್ಕೆ ಅರ್ಧ ಶತಕ ಬಾರಿಸಿದ್ದ ತಂಜಿದ್ ಹಸನ್​ (51) ಎಲ್​ಬಿಡಬ್ಲ್ಯು ಆಗಿ ಔಟಾದರು. ಮೊದಲ ವಿಕೆಟ್​ ಕಳೆದುಕೊಂಡ ಬಾಂಗ್ಲಾ ತಂಡಕ್ಕೆ ತಕ್ಷಣವೇ ಚೇತರಿಸಿಕೊಳ್ಳುವುದಕ್ಕೆ ಸಾಧ್ಯವಾಗಲಿಲ್ಲ. ಬಳಿಕ ಬಂದ ಹಂಗಾಮಿ ನಾಯಕ ನಜ್ಮುಲ್ ಶಾಂಟೊ 8 ರನ್​ಗೆ ಔಟಾದರು. ಅವರು ಜಡೇಜಾ ಬೌಲಿಂಗ್​ನಲ್ಲಿ ಎಲ್​ಬಿಡಬ್ಲ್ಯು ಆದರು. ಏತನ್ಮಧ್ಯೆ ರನ್​ ಗಳಿಕೆಗೆ ವೇಗ ಕೊಟ್ಟ ಮತ್ತೊಬ್ಬ ಆರಂಭಿಕ ಆಟಗಾರ ಲಿಟನ್​ ದಾಸ್​ 66 ರನ್​ಗಳಿಗೆ ಔಟಾದರು. ಜಡೇಜಾ ಎಸೆತಕ್ಕೆ ದೊಡ್ಡ ಹೊಡೆದ ಬಾರಿಸಲು ಮುಂದಾದ ಅವರು ಗಿಲ್​ಗೆ ಕ್ಯಾಚ್​ ನೀಡಿ ನಿರ್ಗಮಿಸಿದರು.

ಈ ಸುದ್ದಿಯನ್ನೂ ಓದಿ : KL Rahul : ಜಿಂಕೆಯಂತೆ ಚಂಗನೆ ನೆಗೆದು ಅದ್ಭುತ್ ಕ್ಯಾಚ್ ಹಿಡಿದ ಕೆ. ಎಲ್​ ರಾಹುಲ್​

ನಾಲ್ಕನೇ ಬ್ಯಾಟರ್ ಆಗಿ ಆಡಲು ಬಂದ ಮೆಹೆದಿ ಹಸನ್​ ವೇಗಿ ಮೊಹಮ್ಮದ್ ಸಿರಾಜ್​ಗೆ ವಿಕೆಟ್​ ಒಪ್ಪಿಸಿದರು. ವಿಕೆಟ್​ ಕೀಪರ್ ಕೆ. ಎಲ್​ ರಾಹುಲ್ ಹಿಡಿದ ಅದ್ಭುತ ಕ್ಯಾಚ್​ಗೆ ಅವರು ಬಲಿಯಾದರು. ಇದಾದ ಬಳಿಕ ಆಡಲು ಬಂದ ತೌಹಿದ್ ಹೃದೋಯ್ 16 ರನ್​ ಬಾರಿಸಿ ಕ್ರೀಸ್​ನಲ್ಲಿ ತಳವೂರುವ ಲಕ್ಷಣ ತೋರಿದರು. ಇವರಿಗೆ ವಿಕೆಟ್​ಕೀಪರ್​ ಮುಷ್ಫಿಕರ್​ ರಹೀಮ್​ (38) ಸಾಥ್ ಕೊಟ್ಟರು. ಹೃದೋಯ್​ ಠಾಕೂರ್​ಗೆ ವಿಕೆಟ್​ ಒಪ್ಪಿಸಿದರೆ, ಬುಮ್ರಾ ಎಸೆತಕ್ಕೆ 38 ರನ್ ಬಾರಿಸಿ ಔಟಾದರು. ಜಡೇಜಾ ಹಿಡಿದ ಅದ್ಭುತ ಕ್ಯಾಚ್​ಗೆ ಮುಷ್ಫಿಕರ್ ವಿಕೆಟ್​ ಒಪ್ಪಿಸಿದರು.

ನಸುಮ್ ಅಹಮದ್​​ 14 ರನ್ ಬಾರಿಸಿ ಔಟಾದರು. ಮಹಮದುಲ್ಲಾ 46 ರನ್​ ಬಾರಿಸಿ ಮಿಂಚಿದರು.

ಭಾರತ ತಂಡದ ಪರ ಬೌಲಿಂಗ್​ನಲ್ಲಿ ಬುಮ್ರಾ 2 ವಿಕೆಟ್​ ಉರುಳಿಸಿದರೆ, ಸಿರಾಜ್​ 2 ವಿಕೆಟ್ ತಮ್ಮದಾಗಿಸಿಕೊಂಡರು. ರವೀಂದ್ರ ಜಡೇಜಾ ಪ್ರಮುಖ ಎರಡು ವಿಕೆಟ್​ಗಳನ್ನು ಉರುಳಿಸಿದರೆ, ಶಾರ್ದೂಲ್​ ಠಾಕೂರ್ ಹಾಗೂ ಕುಲ್ದೀಪ್​ ಯಾದವ್​ ತಲಾ 1 ವಿಕೆಟ್​ ತಮ್ಮದಾಗಿಸಿಕೊಂಡರು.

Exit mobile version