ಮುಂಬಯಿ: ಭಾರತ ಕ್ರಿಕೆಟ್ ತಂಡಕ್ಕೆ ತೆಳ್ಳಗಿನವರು, ಬೆಳ್ಳಗಿನವರು ಬೇಕಾದರೆ ಫ್ಯಾಶನ್ ಶೋ ನಡೆಯುವ ಕಡೆಗೆ ಹೋಗಿ ಅಲ್ಲಿರುವವರ ಕೈಗೆ ಬ್ಯಾಟ್ ಕೊಡಬೇಕು. ದಪ್ಪಗಿದ್ದವರು ತಂಡಕ್ಕೆ ಬೇಕಾಗಿಲ್ಲ ಎಂಬ ವಾದವೇ ಸರಿಯಲ್ಲ ಎಂಬುದಾಗಿ ಭಾರತ ತಂಡದ ಮಾಜಿ ನಾಯಕ ಸುನೀಲ್ ಗವಾಸ್ಕರ್ ಅವರು ಹೇಳಿದ್ದಾರೆ. ಮುಂಬಯಿ ತಂಡದ ಪ್ರತಿಭಾವಂತ ಬ್ಯಾಟರ್ ಸರ್ಫರಾಜ್ ಖಾನ್ (Sarfaraz Khan) ಅವರನ್ನು ತಂಡಕ್ಕೆ ಆಯ್ಕೆ ಮಾಡದಿರುವ ವಿವಾದದ ಕುರಿತು ಮಾತನಾಡಿದ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸರ್ಫರಾಜ್ ಖಾನ್ ಕಳೆದ ಎರಡು ಆವತ್ತಿಯ ರಣಜಿ ಟ್ರೋಫಿಯಲ್ಲಿ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದಾರೆ. ಜತೆಗೆ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 56 ಸರಾಸರಿ ಹೊಂದಿರುವ ಬ್ಯಾಟರ್ ಆಗಿದ್ದು, ಆಸ್ಟ್ರೇಲಿಯಾದ ಡಾನ್ ಬ್ರಾಡ್ಮನ್ ಅವರಿಗಿಂತ ಹಿಂದಿದ್ದಾರೆ. ಈ ಸಾಧನೆಯ ಹಿನ್ನೆಲೆಯಲ್ಲಿ ಅವರನ್ನು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆ ಮಾಡಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಚೇತನ್ ಶರ್ಮಾ ನೇತೃತ್ವದ ಆಯ್ಕೆ ಮಂಡಳಿ ಇಶಾನ್ ಕಿಶನ್ ಹಾಗೂ ಸೂರ್ಯಕುಮಾರ್ಗೆ ಅವಕಾಶ ನೀಡಿ ಸರ್ಫರಾಜ್ ಖಾನ್ ಕೈಬಿಟ್ಟಿದ್ದರು. ಇದು ವಿವಾದಕ್ಕೆ ಕಾರಣವಾಗಿದೆ. ಬಗ್ಗೆ ಕೇಳಿದ ಪ್ರಶ್ನೆಗೆ ಸುನೀಲ್ ಗವಾಸ್ಕರ್ ಈ ರೀತಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಕ್ರಿಕೆಟ್ ಈ ರೀತಿಯಾಗಿ ಮುಂದುವರಿಯಬಾರದು. ಕ್ರಿಕೆಟ್ ತಂಡದಲ್ಲಿ ಎಲ್ಲ ಗಾತ್ರದ ಆಟಗಾರರು ಇರಬೇಕು. ಆಟಗಾರ ಎಷ್ಟು ಗಾತ್ರ ಇದ್ದಾನೆ ಎಂಬುದನ್ನು ಪರಿಗಣಿಸಿ ಆಡುವ ಅವಕಾಶ ನೀಡಬಾರದು. ಅವರು ಉತ್ತಮವಾಗಿ ಆಡುವರೇ ಎಂಬುದನ್ನು ಪರಿಗಣಿಸಿ ಆಡುವ ಅವಕಾಶ ಕೊಡಬೇಕು, ಎಂಬುದಾಗಿ ಗವಾಸ್ಕರ್ ಹೇಳಿದ್ದಾರೆ.
ಸರ್ಫರಾಜ್ ಖಾನ್ ಫಿಟ್ ಆಗಿಲ್ಲ ಎಂದಾಗಿದ್ದರೆ ಅವರು ಮೈದಾನದಲ್ಲಿ ಅಷ್ಟೊತ್ತು ಆಡಿ ಶತಕ ಬಾರಿಸಲು ಸಾಧ್ಯವಿತ್ತೇ? ಯೊಯೊ ಟೆಸ್ಟ್ ಒಂದೇ ಕ್ರಿಕೆಟ್ ಆಯ್ಕೆಗೆ ಮಾನದಂಡವಾಗಬಾರದು. ಅತ್ಯುತ್ತಮವಾಗಿ ಆಡುವನೇ ಎಂಬುದನ್ನೂ ಗಮನದಲ್ಲಿ ಇಟ್ಟುಕೊಳ್ಳಬೇಕು, ಎಂಬುದಾಗಿ ಗವಾಸ್ಕರ್ ಹೇಳಿದ್ದಾರೆ.
ಭಾರತ ತಂಡದ ಮಾಜಿ ವೇಗದ ಬೌಲರ್ ವೆಂಕಟೇಶ್ ಪ್ರಸಾದ್ ಅವರು, ಸರ್ಫರಾಜ್ ಖಾನ್ಗೆ ಟೆಸ್ಟ್ ತಂಡದಲ್ಲಿ ಸ್ಥಾನ ನೀಡದಿರುವುದು ದೇಶೀಯ ಕ್ರಿಕೆಟ್ಗೆ ಮಾಡುವ ಅವಮಾನ ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
ಇದನ್ನೂ ಓದಿ | IND VS NZ | ಇದು ಕ್ರಿಕೆಟ್ ಅಲ್ಲ, ಇಶಾನ್ ಕಿಶನ್ಗೆ ಸುನೀಲ್ ಗವಾಸ್ಕರ್ ಎಚ್ಚರಿಕೆ ನೀಡಿದ್ದು ಏಕೆ?