ಬೆಂಗಳೂರು: ದೇಶೀಯ ಕ್ರಿಕೆಟ್‌ನಲ್ಲಿ ರನ್ ಮಳೆ ಹರಿಸುತ್ತಿರುವ ಮುಂಬೈ ಬ್ಯಾಟರ್ ಸರ್ಫರಾಜ್ ಖಾನ್ಗೆ(Sarfaraz Khan) ಟೀಮ್ ಇಂಡಿಯಾದಲ್ಲಿ ಅವಕಾಶ ನೀಡದ ಬಗ್ಗೆ ಕನ್ನಡಿಗ ವೆಂಕಟೇಶ್ ಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸರ್ಫರಾಜ್‌ಗೆ ಟೀಮ್ ಇಂಡಿಯಾದಲ್ಲಿ ಅವಕಾಶ ಲಭಿಸಿರಲಿಲ್ಲ. ಇದೇ ವಿಚಾರವಾಗಿ ಬಿಸಿಸಿಐ ವಿರುದ್ಧ ಹಲವು ಟೀಕೆಗಳು ಬಂದಿದ್ದವು. ಇದೀಗ ಭಾರತ ಕ್ರಿಕೆಟ್ ತಂಡದ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ಕೂಡ ಬಿಸಿಸಿಐ ವಿರುದ್ಧ ಹರಿಹಾಯ್ದಿದ್ದಾರೆ. ಈ ಮೂಲಕ ಯುವ ಬ್ಯಾಟರ್ ಸರ್ಫರಾಜ್‌ಗೆ ಬೆಂಬಲ ಸೂಚಿಸಿದ್ದಾರೆ.
ದೆಹಲಿ ವಿರುದ್ಧದ ರಣಜಿ ಪಂದ್ಯದಲ್ಲಿ ಸರ್ಫರಾಜ್ ಅಬ್ಬರದ ಶತಕ ಸಿಡಿಸಿದ ಬಳಿಕ ಬಿಸಿಸಿಐ ಯುವ ಆಟಗಾರನನ್ನು ಅಭಿನಂದಿಸಿ ಟ್ವೀಟ್ ಮಾಡಿದೆ. ಈ ಟ್ವೀಟ್‌ಗೆ ವೆಂಕಟೇಶ್ ಪ್ರಸಾದ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
“ಮೂರು ದೇಶೀಯ ಆವೃತ್ತಿ ಕ್ರಿಕೆಟ್ ಟೂರ್ನಿಯಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ಹೊರತಾಗಿಯೂ ಟೆಸ್ಟ್ ತಂಡದಲ್ಲಿ ಅವಕಾಶ ನೀಡದಿರುವುದು ಸರ್ಫರಾಜ್‌ಗೆ ಮಾಡಿರುವ ಅನ್ಯಾಯ. ಜತೆಗೆ ಇದು ದೇಶೀಯ ಕ್ರಿಕೆಟ್‌ಗೆ ಮಾಡಿದ ನಿಂದನೆ. ದೇಹದ ತೂಕವನ್ನು ಗಣನೆಗೆ ತೆಗೆದುಕೊಂಡು ಆತನಿಗೆ ಅವಕಾಶ ನೀಡಲು ನಿರಾಕರಿಸುತ್ತಿದ್ದರೆ ಹೆಚ್ಚು ತೂಕದ ಆಟಗಾರರು ತಂಡದಲ್ಲಿದ್ದಾರೆ” ಎಂದು ವೆಂಕಟೇಶ್ ಪ್ರಸಾದ್ ಟ್ವೀಟ್ ಮೂಲಕ ಬಿಸಿಸಿಐ ವಿರುದ್ಧ ಕಿಡಿಕಾರಿದ್ದಾರೆ.
ಇದನ್ನೂ ಓದಿ | IND VS NZ | ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ; ನ್ಯೂಜಿಲ್ಯಾಂಡ್ಗೆ ಬೌಲಿಂಗ್ ಆಹ್ವಾನ