ನವದೆಹಲಿ: ಇಂಡಿಯಾ ಓಪನ್ ಬ್ಯಾಡ್ಮಿಂಟನ್(India Open 2023) ಟೂರ್ನಿಯಿಂದ ಹಾಲಿ ಚಾಂಪಿಯನ್ಸ್ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಹಿಂದೆ ಸರಿದಿದ್ದಾರೆ. ಈ ವಿಚಾರವನ್ನು ಚಿರಾಗ್ ಶೆಟ್ಟಿ ಖಚಿತಪಡಿಸಿದ್ದಾರೆ.
ಸಾತ್ವಿಕ್‌ಸಾಯಿರಾಜ್ ಅವರು ತೊಡೆಯ ಸ್ನಾಯು ಸೆಳೆತದ ಗಾಯದಿಂದ ಬಳಲುತ್ತಿರುವ ಕಾರಣದಿಂದ ಟೂರ್ನಿಯಿಂದ ಹಿಂದೆ ಸರಿಯುವುದಾಗಿ ಇವರ ಜತೆಗಾರ ಚಿರಾಗ್ ಶೆಟ್ಟಿ ಗುರುವಾರ ತಿಳಿಸಿದ್ದಾರೆ. ಈ ಜೋಡಿ ಪುರುಷರ ಡಬಲ್ಸ್ ವಿಭಾಗದ ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ಚೀನಾದ ಲಿಯು ಯು ಚೆನ್ ಮತ್ತು ಕ್ಸುವಾನ್ ಲಿ ವಿರುದ್ಧ ಪೈಪೋಟಿ ನಡೆಸಬೇಕಿತ್ತು. ಆದರೆ ಗಾಯದ ಸಮಸ್ಯೆಯಿಂದ ಅಂತಿಮ ಕ್ಷಣದಲ್ಲಿ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ.
2022 ರಲ್ಲಿ ಈ ಜೋಡಿ ಇಂಡಿಯಾ ಸೂಪರ್ ಸೀರಿಸ್ 500 ಮತ್ತು ಫ್ರೆಂಚ್ ಸೂಪರ್ ಸೀರಿಸ್ 750 ಟೂರ್ನಿಗಳಲ್ಲಿ ಚಾಂಪಿಯನ್ ಆಗಿತ್ತು. ಕಾಮನ್‌ವೆಲ್ತ್ ಕೂಟದಲ್ಲಿ ಚಿನ್ನ ಹಾಗೂ ವಿಶ್ವ ಚಾಂಪಿಯನ್ಶಿಪ್ನಲ್ಲಿ ಕಂಚು ಗೆದ್ದ ಸಾಧನೆ ಮಾಡಿತ್ತು.
ಇದೀಗ ಈ ಜೋಡಿಯ ನಿರ್ಗಮನದಿಂದ ಭಾರತಕ್ಕೆ ಹಿನ್ನಡೆಯಾಗಿದೆ. ಟೂರ್ನಿಯ ಹಾಲಿ ಚಾಂಪಿಯನ್ ಆಗಿರುವ ತಾರಾ ಆಟಗಾರರು ಈ ಬಾರಿಯೂ ಪದಕ ಗೆಲ್ಲುವ ವಿಶ್ವಾಸದಲ್ಲಿದ್ದರು. ಆದರೆ ಇದಕ್ಕೆ ಗಾಯದ ಸಮಸ್ಯೆ ಅಡ್ಡಿಪಡಿಸಿತು. ಹೀಗಾಗಿ ಉಭಯ ಆಟಗಾರರು ಕೂಟದಿಂದ ಹಿಂದೆ ಸರಿದರು. ಇದು ಭಾರತದ ಪದಕ ಬೇಟೆಗೆ ಹಿನ್ನಡೆಯಾಗಿದೆ.
ಇದನ್ನೂ ಓದಿ | India Open 2023 | ಇಂಡಿಯಾ ಓಪನ್ ಬ್ಯಾಡ್ಮಿಂಟನ್; ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದ ಪಿ.ವಿ. ಸಿಂಧು!