Site icon Vistara News

SCO vs ENG: ಮಳೆಯಿಂದ ಇಂಗ್ಲೆಂಡ್​-ಸ್ಕಾಟ್ಲೆಂಡ್​ ಪಂದ್ಯ ರದ್ದು; ನೇಪಾಳ ವಿರುದ್ಧ ಗೆದ್ದ ನೆದರ್ಲೆಂಡ್ಸ್​

SCO vs ENG

SCO vs ENG: England-Scotland match abandoned; Netherlands won against Nepal

ಬಾರ್ಬಡೋಸ್‌: ಮಂಗಳವಾರ ರಾತ್ರಿ ನಡೆಯಬೇಕಿದ್ದ ಇಂಗ್ಲೆಂಡ್​ ಮತ್ತು ಸ್ಕಾಟ್ಲೆಂಡ್(SCO vs ENG)​ ನಡುವಿನ ಪಂದ್ಯ ಮಳೆಯಿಂದ ರದ್ದು ಗೊಂಡರೆ, ದಿನದ ಮತ್ತೊಂದು ಪಂದ್ಯದಲ್ಲಿ ನೇಪಾಳ(Netherlands vs Nepal) ವಿರುದ್ಧ ನೆದರ್ಲೆಂಡ್ಸ್​​ 6 ವಿಕೆಟ್​ಗಳ ಗೆಲುವು ಸಾಧಿಸಿತು. ಮಳೆಯಿಂದ ಪಂದ್ಯ ರದ್ದುಗೊಂಡ(T20 World Cup 2024) ಕಾರಣ ಇಂಗ್ಲೆಂಡ್​ ಮತ್ತು ಸ್ಕಾಟ್ಲೆಂಡ್ ತಂಡಕ್ಕೆ ತಲಾ 1 ಅಂಕ ನೀಡಲಾಯಿತು.

ಟಾಸ್​ ಬಳಿಕ ಜೋರಾಗಿ ಮಳೆ ಸುರಿದು ಪಂದ್ಯ ನಿಗದಿತ ಸಮಯಕ್ಕೆ ಆರಂಭವಾಗಲಿಲ್ಲ. ಆದರೆ ಕೆಲ ಕಾಲದ ಬಳಿಕ ಪಂದ್ಯ ಆರಂಭಗೊಂಡಿತು. ಮೊದಲು ಬ್ಯಾಟಿಂಗ್​ ನಡೆಸಿದ ಸ್ಕಾಟ್ಲೆಂಡ್ 10 ಓವರ್​ಗೆ ವಿಕೆಟ್​ ನಷ್ಟವಿಲ್ಲದೆ 90 ರನ್​ ಬಾರಿಸಿತು. ಈ ವೇಳೆ ಮಳೆ ಮತ್ತೆ ಆರಂಭಗೊಂಡ ಕಾರಣ ಪಂದ್ಯವನ್ನು ಇಲ್ಲಿಗೆ ನಿಲ್ಲಿಸಿ ಡಕ್​ವರ್ತ್​ ಲೂಯಿಸ್​ ನಿಯಮದ ಪ್ರಕಾರ ಇಂಗ್ಲೆಂಡ್​ಗೆ 10 ಓವರ್ ಗಳಲ್ಲಿ 109 ರನ್ ಗೆಲುವಿನ ಗುರಿ ನೀಡಲಾಯಿತು.

ಇಂಗ್ಲೆಂಡ್​ ಇನ್ನೇನು ಬ್ಯಾಟಿಂಗ್ ನಡೆಸಬೇಕು ಎನ್ನುವಷ್ಟರಲ್ಲಿ ಮತ್ತೆ ಜೋರಾಗಿ ಮಳೆ ಸುರಿಯಿತು. ಬಿಡುವು ನೀಡಲೇ ಇಲ್ಲ. ಅಂತಿಮವಾಗಿ ಉಭಯ ತಂಡಗಳಿಗೂ ತಲಾ ಒಂದು ಅಂಕ ನೀಡಿ ಪಂದ್ಯವನ್ನು ರದ್ದು ಎಂದು ಘೋಷಿಸಲಾಯಿತು. ಸ್ಕಾಟ್ಲೆಂಡ್ ಪರ ಮೈಕೆಲ್ ಜೋನ್ಸ್(45*) ಮತ್ತು ಜಾರ್ಜ್ ಮುನ್ಸಿ(41*) ರನ್​ ಬಾರಿಸಿದರು.

ಇದನ್ನೂ ಓದಿ India vs Ireland: ಇಂದು ನಡೆಯುವ ಭಾರತ-ಐರ್ಲೆಂಡ್​ ಪಂದ್ಯಕ್ಕೆ ಮಳೆ ಭೀತಿ ಇದೆಯೇ?

ನೆದರ್ಲೆಂಡ್ಸ್​ಗೆ 6 ವಿಕೆಟ್​ ಜಯ


ದಿನದ ಮತ್ತೊಂದು ಪಂದ್ಯದಲ್ಲಿ ನೆದರ್ಲೆಂಡ್ಸ್​ ತಂಡ ನೇಪಾಳ ವಿರುದ್ಧ 6 ವಿಕೆಟ್​ಗಳ ಗೆಲುವು ಸಾಧಿಸಿ ಟೂರ್ನಿಯಲ್ಲಿ ಶುಭಾರಂಭ ಕಂಡಿದೆ. ಸಣ್ಣ ಮೊತ್ತದ ಈ ಹೋರಾಟದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ನೇಪಾಳ 19.2 ಓವರ್​ಗೆ 106 ರನ್​ ಬಾರಿಸಿ ಆಲೌಟ್​ ಆಯಿತು. ಅಲ್ಪ ಮೊತ್ತದ ಈ ಸವಾಲನ್ನು ಬೆನ್ನಟ್ಟಿದ ನೆದರ್ಲೆಂಡ್ಸ್​ 4 ವಿಕೆಟ್​ ಕಳೆದುಕೊಂಡು 109 ರನ್​ ಬಾರಿಸಿ ಗೆಲುವು ಸಾಧಿಸಿತು.

ಚೇಸಿಂಗ್​ ವೇಳೆ ಮ್ಯಾಕ್ಸ್ ಒ’ಡೌಡ್ 4 ಬೌಂಡರಿ ಮತ್ತು 1 ಸಿಕ್ಸರ್​ ನೆರವಿನಿಂದ ಅಜೇಯ 54 ರನ್​ ಬಾರಿಸಿ ಅರ್ಧಶತಕದ ಆಟವಾಡಿದರು. ವಿಕ್ರಮಜಿತ್ ಸಿಂಗ್ 22 ರನ್​ ಗಳಿಸಿದರು. ಬೌಲಿಂಗ್​ನಲ್ಲಿ ಟಿಮ್ ಪ್ರಿಂಗಲ್ ಮತ್ತು ವ್ಯಾನ್ ಬೀಕ್ ತಲಾ ಮೂರು ವಿಕೆಟ್​ ಕಿತ್ತು ಮಿಂಚಿದರು. ಉಳಿದಂತೆ ವ್ಯಾನ್ ಮೀಕೆರೆನ್(2) ಮತ್ತು ಬಾಸ್ ಡಿ ಲೀಡೆ(2) ವಿಕೆಟ್​ ಪಡೆದರು. ನೇಪಾಳ ಪರ ನಿರೀಕ್ಷಿತ ಪ್ರದರ್ಶನ ತೋರಿದವರೆಂದರೆ ನಾಯಕ ರೋಹಿತ್ ಪೌಡೆಲ್ ಮಾತ್ರ. ಅವರು 5 ಬೌಂಡರಿ ಸಹಾಯದಿಂದ 35 ರನ್​ ಬಾರಿಸಿದರು. ಇವರ ಈ ಸಣ್ಣ ಮಟ್ಟದ ಬ್ಯಾಟಿಂಗ್​ ಹೋರಾಟದ ಫಲವಾಗಿ ತಂಡ ಕನಿಷ್ಠ 100ರ ಗಡಿ ದಾಟುವಂತಾಯಿತು.

Exit mobile version