Site icon Vistara News

T20 World Cup | ಎರಡು ಬಾರಿಯ ಚಾಂಪಿಯನ್‌ ತಂಡಕ್ಕೆ ಸೋಲುಣಿಸಿದ ಕ್ರಿಕೆಟ್‌ ಶಿಶು ಸ್ಕಾಟ್ಲೆಂಡ್‌

T20 world cup

ಹೊಬಾರ್ಟ್‌ : ಆಸ್ಟ್ರೇಲಿಯಾದಲ್ಲಿ ಆರಂಭಗೊಂಡಿರುವ ಟಿ೨೦ ವಿಶ್ವ ಕಪ್‌ನ (T20 World Cup) ಮೊದಲ ಸುತ್ತಿನ ಹಣಾಹಣಿಗಳಲ್ಲಿ ಅಚ್ಚರಿಯ ಫಲಿತಾಂಶಗಳು ಮೂಡಿ ಬರುತ್ತಿವೆ. ಭಾನುವಾರ ಏಷ್ಯಾ ಕಪ್‌ ಚಾಂಪಿಯನ್‌ ಶ್ರೀಲಂಕಾ ತಂಡವನ್ನು ನಮೀಬಿಯಾ ತಂಡ ಭರ್ಜರಿ ೫೫ ರನ್‌ಗಳಿಂದ ಮಣಿಸಿ ಅಚ್ಚರಿ ಮೂಡಿಸಿದ್ದರೆ, ಸೋಮವಾರ ಎರಡು ಬಾರಿಯ ಟಿ೨೦ ವಿಶ್ವ ಕಪ್‌ ಚಾಂಪಿಯನ್‌ ವೆಸ್ಟ್‌ ಇಂಡೀಸ್‌ ತಂಡವನ್ನು ಕ್ರಿಕೆಟ್‌ ಶಿಶು ಸ್ಕಾಟ್ಲೆಂಡ್‌ ತಂಡ ಅಮೋಘ ೪೨ ರನ್‌ಗಳಿಂದ ಸೋಲಿಸಿದೆ.

scotland

ಹೊಬಾರ್ಟ್‌ನ ಬೆಲೆರಿವ್‌ ಓವಲ್‌ ಗ್ರೌಂಡ್‌ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಸ್ಕಾಟ್ಲೆಂಡ್‌ ತಂಡ ನಿಗದಿತ ೨೦ ಓವರ್‌ಗಳಲ್ಲಿ ೫ ವಿಕೆಟ್‌ಗೆ ೧೬೦ ರನ್‌ ಬಾರಿಸಿತು. ಸ್ಪರ್ಧಾತ್ಮಕ ಗುರಿಯನ್ನು ಬೆನ್ನಟ್ಟಿದ ನಿಕೋಲಸ್ ಪೂರನ್‌ ಬಳಗ ೧೮.೩ ಓವರ್‌ಗಳಲ್ಲಿ ೧೧೮ ರನ್‌ಗಳಿಗೆ ಸರ್ವಪತನಗೊಂಡು ಹೀನಾ ಸೋಲಿಗೆ ಒಳಗಾಯಿತು.

ಮೊದಲು ಬ್ಯಾಟ್‌ ಮಾಡಿದ ಸ್ಕಾಟ್ಲೆಂಡ್‌ ತಂಡ ಜಾರ್ಜ್‌ ಮುನ್ಸೆ (೬೬) ಅರ್ಧ ಶತಕದ ನೆರವಿನಿಂದ ಉತ್ತಮ ಆರಂಭ ಪಡೆಯಿತಲ್ಲದೆ, ಉಳಿದ ಬ್ಯಾಟರ್‌ಗಳ ಸಾಂದರ್ಭಿಕ ಕೊಡುಗೆ ಮೂಲಕ ಉತ್ತಮ ಮೊತ್ತ ಪೇರಿಸಿತು. ಗುರಿ ಬೆನ್ನಟ್ಟಿದ ವಿಂಡಿಸ್‌ ಪಡೆ ಸ್ಕಾಟ್ಲೆಂಡ್‌ ಬೌಲರ್‌ ಮಾರ್ಕ್‌ ವಾಟ್‌ (೧೨ ರನ್‌ಗಳಿಗೆ ೩ ವಿಕೆಟ್‌) ಅವರ ಮಾರಕ ಬೌಲಿಂಗ್ ದಾಳಿಗೆ ಬೆಚ್ಚಿ ಸತತವಾಗಿ ವಿಕೆಟ್‌ ಕಳೆದುಕೊಂಡಿತು. ಜೇಸನ್‌ ಹೋಲ್ಡರ್‌ ೩೮ ರನ್‌ ಬಾರಿಸಿದ್ದು ಬಿಟ್ಟರೆ ಮಿಕ್ಕವರೆಲ್ಲರೂ ಬ್ಯಾಟಿಂಗ್‌ನಲ್ಲಿ ವೈಫಲ್ಯ ಕಂಡರು.

ಸ್ಕೋರ್‌ ವಿವರ

ಸ್ಕಾಟ್ಲೆಂಡ್‌ : ೨೦ ಓವರ್‌ಗಳಲ್ಲಿ ೫ ವಿಕೆಟ್‌ಗೆ ೧೬೦ (ಜಾರ್ಜ್‌ ಮುನ್ಸೆ ೬೬, ಕಾಲಮ್‌ ಮ್ಯಾಕ್‌ಲಿಯಾಡ್‌ ೨೩, ಜೇಸನ್‌ ಹೋಲ್ಡರ್‌ ೧೪ಕ್ಕೆ೨).

ವೆಸ್ಟ್‌ ಇಂಡೀಸ್‌ : ೧೮.೩ ಓವರ್‌ಗಳಲ್ಲಿ ೧೧೮ ( ಜೇಸನ್‌ ಹೋಲ್ಡರ್‌ ೩೮, ಕೈಲ್‌ ಮೇಯರ್ಸ್‌ ೨೦, ಮಾರ್ಕ್‌ ವ್ಯಾಟ್‌ ೧೨ಕ್ಕೆ೩೦).

ಇದನ್ನೂ ಓದಿ | Women’s Asia Cup | ಶ್ರೀಲಂಕಾ ತಂಡವನ್ನು ಮಣಿಸಿದ ಭಾರತ ತಂಡ ಏಳನೇ ಬಾರಿ ಚಾಂಪಿಯನ್‌

Exit mobile version