ಸಿಡ್ನಿ: ಇದೇ ವರ್ಷಾಂತ್ಯದಲ್ಲಿ ಭಾರತ ತಂಡ 5 ಪಂದ್ಯಗಳ ಬಾರ್ಡರ್-ಗವಾಸ್ಕರ್(Border-Gavaskar Trophy) ಟೆಸ್ಟ್ ಸರಣಿಯನ್ನಾಡಲು ಆಸ್ಟ್ರೇಲಿಯಾಕ್ಕೆ ಪ್ರವಾಸ ಕೈಗೊಳ್ಳಲಿದೆ. ಈ ಸರಣಿ ಆರಂಭಕ್ಕೂ ಮುನ್ನವೇ ಆಸೀಸ್ ವೇಗಿ ಸ್ಕಾಟ್ ಬೋಲ್ಯಾಂಡ್(Scott Boland) ಭಾರತದ ಆತ್ಮವಿಶ್ವಾಸವನ್ನು ಕುಗ್ಗಿಸಲು ಮೈಂಡ್ ಗೇಮ್ ಆರಂಭಿಸಿದ್ದಾರೆ. ಮತ್ತೊಮ್ಮೆ ವಿರಾಟ್ ಕೊಹ್ಲಿಯನ್ನು(Virat Kohli) ಔಟ್ ಮಾಡುವ ನಿರೀಕ್ಷೆಯಲ್ಲಿದ್ದೇನೆ ಎಂದಿದ್ದಾರೆ.
“ನಾವು ಉತ್ತಮ ದರ್ಜೆಯ ಬೌಲಿಂಗ್ ದಾಳಿಯನ್ನು ಹೊಂದಿದ್ದೇವೆ ಎಂದು ನಾನು ಭಾವಿಸುತ್ತೇನೆ. ಈ ಬಾರಿ ಭಾರತಕ್ಕೆ ಆಸೀಸ್ ನಲದಲ್ಲಿ ಸರಣಿ ಗೆಲ್ಲುವುದು ಅಷ್ಟು ಸುಲಭದ ಮಾತಲ್ಲ. ಕೊಹ್ಲಿಯ ವಿಕೆಟ್ ಪಡೆಯಲು ನಾನು ಕಾತರಗೊಂಡಿದ್ದೇನೆ” ಎಂದು ಬೊಲ್ಯಾಂಡ್ ಹೇಳಿದ್ದಾರೆ. ಕಳೆದ ವರ್ಷ ನಡೆದ ವಿಶ್ವ ಟೆಸ್ಟ್ ಚಾಂಪಿಯನ್ ಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರ ವಿಕೆಟ್‌ಯನ್ನು ಪಡೆಯುವಲ್ಲಿ ಬೋಲ್ಯಾಂಡ್ ಯಶಸ್ವಿಯಾಗಿದ್ದರು. ಇದೇ ಆತ್ಮವಿಶ್ವಾಸದಲ್ಲಿ ಅವರು ಈ ಮಾತನ್ನು ಹೇಳಿದಂತಿದೆ.
ಕೊಹ್ಲಿ 2011 ರಿಂದ 2023ರ ತನಕ ಆಡಿದ ಬಾರ್ಡರ್-ಗವಾಸ್ಕರ್ ಟೆಸ್ಟ್ ಪಂದ್ಯಗಳಲ್ಲಿ ಪಟ್ಟು 1,979 ರನ್ ಬಾರಿಸಿ ಟೂರ್ನಿಯಲ್ಲಿ ಅತ್ಯಧಿಕ ರನ್ ಗಳಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ 7ನೇ ಸ್ಥಾನಿಯಾಗಿದ್ದಾರೆ. ಚೇತೇಶ್ವರ್ ಪೂಜಾರ 2,033 ರನ್ ಬಾರಿಸಿ 6ನೇ ಸ್ಥಾನಿಯಾಗಿದ್ದಾರೆ. 3,262 ರನ್ ಬಾರಿಸಿರುವ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ ಅಗ್ರಸ್ಥಾನ ಪಡೆದಿದ್ದಾರೆ. ಕಳೆದ 2 ಬಾರಿಯ ಪ್ರವಾಸದ ವೇಳೆಯೂ ಆಸೀಸ್ ನೆಲದಲ್ಲಿ ಭಾರತ ಸತತ ಸರಣಿ ಗೆದ್ದ ಸಾಧನೆ ಮಾಡಿತ್ತು.
ಭಾರತವು ಇತ್ತೀಚಿನ ಕೆಲ ವರ್ಷಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಿದ ಟೆಸ್ಟ್ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡುತ್ತಲೇ ಬಂದಿದೆ. ಕಳೆದ 4 ಸರಣಿಗಳಲ್ಲಿ ಭಾರತವೇ ಗೆದ್ದು ಬಂದಿದೆ. 2016-17ರಲ್ಲಿ 2-1 (ತವರಿನ ಸರಣಿ), 2018-19ರಲ್ಲಿ 2-1 (ಆಸ್ಟ್ರೇಲಿಯದಲ್ಲಿ), 2020- 21ರಲ್ಲಿ 2-1 (ಆಸ್ಟ್ರೇಲಿಯದಲ್ಲಿ) ಹಾಗೂ 2022-23ರಲ್ಲಿ 2-1 (ತವರಿನ ಸರಣಿ) ಅಂತರದಿಂದ ಭಾರತ ಜಯ ಸಾಧಿಸಿತ್ತು. ಆದಾಗ್ಯೂ, 2023ರಲ್ಲಿ ಲಂಡನ್‌ನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಪ್ಯಾಟ್ ಕಮಿನ್ಸ್ ತಂಡವು ಭಾರತವನ್ನು ಸೋಲಿಸಿತ್ತು.
ಭಾರತ 1991-92ರ ಬಳಿಕ ಇದೇ ಮೊದಲ ಬಾರಿಗೆ ಆಸ್ಟ್ರೇಲಿಯದಲ್ಲಿ 5 ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲಿದೆ. ಭಾರತ ತಂಡವು ನವೆಂಬರ್ 30 ಮತ್ತು ಡಿಸೆಂಬರ್ 1 ರಂದು ಕ್ಯಾನ್‌ಬೆರಾದ ಮನುಕಾ ಓವಲ್ ನಲ್ಲಿ ಪ್ರಧಾನ ಮಂತ್ರಿ ಇಲೆವೆನ್ ವಿರುದ್ಧ ಹಗಲು-ರಾತ್ರಿ ಅಭ್ಯಾಸ ಪಂದ್ಯವನ್ನು ಆಡಲಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಮ್ಮ ವೆಬ್‌ಸೈಟ್ ನಲ್ಲಿ ತಿಳಿಸಿದೆ. 1991-92ರಲ್ಲಿ ನಡೆದಿದ್ದ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ 4-0 ಅಂತರದ ಗೆಲುವು ಸಾಧಿಸಿತ್ತು.
5 ಪಂದ್ಯಗಳ ಈ ಟೆಸ್ಟ್ ಸರಣಿ ನವೆಂಬರ್ 22ರಿಂದ ಜನವರಿ(2025) 7ರವರೆಗೆ ನಡೆಯಲಿದೆ. ಪರ್ತ್, ಅಡಿಲೇಡ್, ಬ್ರಿಸ್ಬೇನ್, ಮೆಲ್ಬೋರ್ನ್ ಮತ್ತು ಸಿಡ್ನಿಯಲ್ಲಿ ಈ ಪಂದ್ಯಗಳು ನಡೆಯಲಿದೆ. ಅಡಿಲೇಡ್ ಪಂದ್ಯ ಪಿಂಕ್ ಬಾಲ್ ಟೆಸ್ಟ್ ಆಗಿದೆ. ಪುರುಷರ ಕ್ರಿಕೆಟ್ ತಂಡದ ಜತೆಗೆ ಇದೇ ಸಮಯದಲ್ಲೇ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಏಕದಿನ ಸರಣಿ ಕೂಡ ನಡೆಯಲಿದೆ. ಡಿಸೆಂಬರ್ 6ರಿಂದ ಅಡಿಲೇಡ್ನಲ್ಲಿ ನಡೆಯಲಿರುವ ಎರಡನೇ ಪಂದ್ಯ ಪಿಂಕ್ ಬಾಲ್ ಟೆಸ್ಟ್ ಪಂದ್ಯವಾಗಿರಲಿದೆ. ಇದಕ್ಕೆ ಅಭ್ಯಾಸ ನಡೆಸುವ ನಿಟ್ಟಿನಲ್ಲಿ ಈ ಎರಡು ದಿನದ ಪಂದ್ಯ ಆಯೋಜನೆ ಮಾಡಲಾಗಿದೆ.