ಬರ್ಲಿನ್: ನಾಲ್ಕು ಬಾರಿಯ ವಿಶ್ವ ಚಾಂಪಿಯನ್ Formula 1 ಚಾಲಕ ಸೆಬಾಸ್ಟಿಯನ್ ವೆಟೆಲ್ ವೃತ್ತಿ ರೇಸ್‌ಗೆ ವಿದಾಯ ಘೋಷಿಸಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಮೂಲಕ ಅವರು ಪೋಸ್ಟ್ ವಿದಾಯ ಸುದ್ದಿಯನ್ನು ಪ್ರಕಟಿಸಿದ್ದು, ೨೦೨೨ರ ಋತುವಿನಲ್ಲಿ ರೇಸ್ ಟ್ರ್ಯಾಕ್‌ನಿಂದ ವಿಮುಖರಾಗಲಿದ್ದಾರೆ. ಹಲವಾರು ದಾಖಲೆಗಳನ್ನು ಹೊಂದಿರುವ ಜರ್ಮನಿ ಮೂಲದ ಈ ಚಾಲಕ ನಾನಾ ರೇಸ್ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು.
೩೫ ವರ್ಷದ ಸೆಬಾಸ್ಟಿಯ್ ವೆಟೆಲ್ ಅವರು ಪ್ರಸ್ತುತ ಆಸ್ಟನ್ ಮಾರ್ಟಿನ್ ತಂಡದ ಚಾಲಕರಾಗಿದ್ದಾರೆ. ಅಚ್ಚರಿಯೆಂದರೆ ಗುರುವಾರವಷ್ಟೇ ಇನ್‌ಸ್ಟಾಗ್ರಾಮ್ ಖಾತೆ ತೆರೆದಿದ್ದ ಅವರು ಮೊದಲ ಪೋಸ್ಟ್‌ನಲ್ಲೇ ನಿವೃತ್ತಿಯ ಸಂಗತಿಯನ್ನು ಬಹಿರಂಗ ಮಾಡಿದ್ದಾರೆ.
ಸೆಬಾಸ್ಟಿಯನ್ ೨೦೦೬ರಲ್ಲಿ ಬಿಎಂಡಬ್ಲ್ಯು ಸೋಬೆರ್ ತಂಡದ ಮೂಲಕ ಫಾರ್ಮುಲಾ ೧ ಟ್ರ್ಯಾಕ್‌ಗೆ ಇಳಿದಿದ್ದರು. ೨೦೦೭೦೮ರಲ್ಲಿ ಟೊರೊ ರೊಸ್ಸೊ ತಂಡದ ಚಾಲಕರಾಗಿದ್ದರು. ಅಂತೆಯೆ ೨೦೦೯-೧೪ ಅವಧಿಯಲ್ಲಿ ಅವರು ರೆಡ್‌ಬುಲ್ ತಂಡದ ಜತೆ ಒಪ್ಪಂದ ಮಾಡಿಕೊಂಡಿದ್ದರು. ಅಂತೆಯೇ ೨೦೧೫-೨೦ರ ನಡುವೆ ಫೆರಾರಿ ಕಾರಿನಲ್ಲಿ ರೇಸ್ ಸ್ಪರ್ಧೆಗೆ ಇಳಿದಿದ್ದರು. ೨೦೨೧ರಲ್ಲಿ ಆಸ್ಟನ್ ಮಾರ್ಟಿನ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು.
ರೆಡ್‌ಬುಲ್ ಸಂಸ್ಥೆಯಲ್ಲಿದ್ದ ವೇಳೆ ಅವರು ೨೦೧೦, ೧೧, ೧೨, ೧೩ರಲ್ಲಿ ಅವರು ಚಾಂಪಿಯನ್ ಪಟ್ಟ ಅಲಂಕರಿಸಿದ್ದರು. ಒಟ್ಟಾರೆ ೫೩ ರೇಸ್‌ಗಳಲ್ಲಿ ವಿಜಯ ಸಾಧಿಸಿರುವ ಅವರು ೧೨೨ ಬಾರಿ ಪ್ರಶಸ್ತಿ ವೇದಿಕೆಯನ್ನು ಏರಿದ್ದಾರೆ.