Site icon Vistara News

Team India | ಟಿ20 ವಿಶ್ವ ಕಪ್ ತಂಡದಲ್ಲಿ ಮೊಹಮ್ಮದ್‌ ಶಮಿಗೆ ಸ್ಥಾನ ನೀಡಲೇಬೇಕು ಎಂದರು ಸೆಹ್ವಾಗ್‌

team India

ಮುಂಬಯಿ : ಟಿ೨೦ ವಿಶ್ವ ಕಪ್‌ಗೆ ತೆರಳುವ ಭಾರತ ತಂಡದಲ್ಲಿ (Team India) ಅನುಭವಿ ಬೌಲರ್‌ ಮೊಹಮ್ಮದ್‌ ಶಮಿ ಇರಲೇಬೇಕು ಎಂಬುದಾಗಿ ಮಾಜಿ ಸ್ಫೋಟಕ ಬ್ಯಾಟ್ಸ್‌ಮನ್‌ ವೀರೇಂದ್ರ ಸೆಹ್ವಾಗ್‌ ಹೇಳಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಟೀಮ್ ಇಂಡಿಯಾ ಪ್ರಕಟಗೊಳ್ಳಲಿದ್ದು, ಹಿರಿಯ ಕ್ರಿಕೆಟಿಗರನೇಕರು ತಮ್ಮ ತಮ್ಮ ಆಯ್ಕೆಗಳನ್ನು ಉಲ್ಲೇಖಿಸುತ್ತಿದ್ದಾರೆ. ಅಂತೆಯೇ ಸೆಹ್ವಾಗ್‌ ಅವರು ಶಮಿ ಪರ ಬ್ಯಾಟ್‌ ಬೀಸಿದ್ದಾರೆ.

ಮೊಹ್ಮಮದ್‌ ಶಮಿಗೆ ಟಿ೨೦ ಮಾದರಿಯ ಭಾರತ ತಂಡದಲ್ಲಿ ಅವಕಾಶ ಸಿಗುತ್ತಿಲ್ಲ. ಕಳೆದ ವರ್ಷ ನಡೆದ ಟಿ೨೦ ವಿಶ್ವ ಕಪ್‌ನಲ್ಲಿ ನಮೀಬಿಯಾ ಪರ ಆಡಿರುವುದೇ ಅವರ ಕೊನೆಯ ಚುಟುಕು ಮಾದರಿಯ ಅಂತಾರಾಷ್ಟ್ರೀಯ ಪಂದ್ಯ. ಆದರೆ, ಸೆಹ್ವಾಗ್‌ ಪ್ರಕಾರ, ಆಸ್ಟ್ರೇಲಿಯಾಗೆ ತೆರಳುವ ತಂಡದಲ್ಲಿ ಶಮಿ ಇರಬೇಕು. ಯಾಕೆಂದರೆ, ಆಸೀಸ್‌ ನೆಲದಲ್ಲಿ ಅನುಭವವೇ ಯಶಸ್ಸಿನ ಸೂತ್ರ.

“ಮೊಹಮ್ಮದ್‌ ಶಮಿಯನ್ನು ಟಿ೨೦ ಮಾದರಿಯಿಂದ ದೂರ ಇಟ್ಟಿರುವುದು ಸರಿಯಾದ ನಿರ್ಧಾರವೇ ಅಲ್ಲ. ಎರಡು ವರ್ಷಗಳ ಹಿಂದೆ ರವಿಚಂದ್ರನ್‌ ಅಶ್ವಿನ್‌ ಅವರಿಗೂ ಇದೇ ರೀತಿ ಮಾಡಲಾಯಿತು. ಹೀಗಾಗಿ ಬೌಲರ್‌ಗಳು ಗಾಯಗೊಂಡ ವೇಳೆ ಶಮಿಗೆ ಅವಕಾಶ ಕೊಡಬೇಕಿತ್ತು,” ಎಂದು ಅವರು ಹೇಳಿದ್ದಾರೆ.

“ಏಷ್ಯಾ ಕಪ್‌ಗೆ ಆವೇಶ್‌ ಖಾನ್‌ ಅಲಭ್ಯರಾದಾಗ ಮೊಹಮ್ಮದ್‌ ಶಮಿಯನ್ನು ತಂಡಕ್ಕೆ ಸೇರಿಸಬೇಕಿತ್ತು. ಯುವ ಆಟಗಾರರನ್ನು ಬೆಳೆಸಬೇಕು ಎಂಬುದು ಸರಿಯಾದ ಯೋಚನೆಯೇ ಸರಿ. ಆದರೆ, ವೇಗದ ಪಿಚ್‌ನಲ್ಲಿ ಅನುಭವಕ್ಕೆ ಹೆಚ್ಚಿನ ಆದ್ಯತೆ ಕೊಡಬೇಕಾಗುತ್ತದೆ,” ಎಂದು ಸೆಹ್ವಾಗ್ ನುಡಿದಿದ್ದಾರೆ.

ಮೊಹಮ್ಮದ್ ಶಮಿ ಗುಜರಾತ್ ಟೈಟನ್ಸ್ ಪರ ೧೬ ಪಂದ್ಯಗಳಲ್ಲಿ ೨೦ ವಿಕೆಟ್‌ಗಳನ್ನು ಕಬಳಿಸಿದ್ದರು. ಆದರೆ, ಹಿರಿಯ ಬೌಲರ್‌ಗಳಾದ ಜಸ್‌ಪ್ರಿತ್‌ ಬುಮ್ರಾ ಹಾಗೂ ಹರ್ಷಲ್‌ ಪಟೇಲ್‌ ಗಾಯಗೊಂಡ ಹೊರತಾಗಿಯೂ ಶಮಿಯನ್ನು ಆಯ್ಕೆಗಾರರು ತಂಡಕ್ಕೆ ಸೇರಿಸಿಕೊಂಡಿರಲಿಲ್ಲ. ಈ ಕ್ರಮವನ್ನು ಸೆಹ್ವಾಗ್ ಪ್ರಶ್ನಿಸಿದ್ದಾರೆ.

ಮೊಹಮ್ಮದ್ ಶಮಿ ಭಾರತ ಟಿ೨೦ ತಂಡದ ಪರ ೧೭ ಪಂದ್ಯಗಳಲ್ಲಿ ಆಡಿದ್ದು, ೯.೫೫ ಎಕಾನಮಿಯಲ್ಲಿ ೧೮ ವಿಕೆಟ್ ಕಬಳಿಸಿದ್ದಾರೆ.

ಇದನ್ನೂ ಓದಿ | ಶಮಿಯ ಮನೆಗೆ ಬಂತು ದುಬಾರಿ Jaguar F-Type Sports Car

Exit mobile version