ನವ ದೆಹಲಿ: ಭಾರತ ಕ್ರಿಕೆಟ್ ತಂಡದಲ್ಲೀಗ virat kohli ಫಾರ್ಮ್ ಬಗ್ಗೆಯೇ ಚರ್ಚೆ. ಎಲ್ಲರೂ ಒಂದೊಂದು ಅಭಿಪ್ರಾಯಗಳನ್ನು ತಿಳಿಸುತ್ತಿದ್ದಾರೆ. ಈ ವಿಚಾರದಲ್ಲಿ ಹಿಂದುಳಿಯದ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ರಶೀದ್ ಲತಿಫ್, ಕೊಹ್ಲಿಯನ್ನು ತಂಡದಿಂದ ಕೈಬಿಡುವ ಆಯ್ಕೆಗಾರ ಇನ್ನೂ ಹುಟ್ಟಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ವಿರಾಟ್ ಕೊಹ್ಲಿಗೆ ಮುಂದಿನ ವೆಸ್ಟ್ ಇಂಡೀಸ್ ಸರಣಿಗೆ ವಿಶ್ರಾಂತಿ ಕಲ್ಪಿಸಲಾಗಿದೆ ಎಂದು ಬಿಸಿಸಿಐ ಆಯ್ಕೆ ಸಮಿತಿ ಹೇಳಿದೆ. ಆದರೆ, ಇನ್ನೊಂದು ವರ್ಗ ಕೊಹ್ಲಿಯನ್ನು ತಂಡದಿಂದ ಕೈ ಬಿಡಬೇಕಾಗಿದೆ ಎಂದು ಹೇಳುತ್ತಿದ್ದಾರೆ. ಏತನ್ಮಧ್ಯೆ, ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಕಳಪೆ ಪ್ರದರ್ಶ ನೀಡಿದ್ದ ಕೊಹ್ಲಿ, ಎರಡನೇ ಏಕದಿನ ಪಂದ್ಯದಲ್ಲೂ ೧೬ ರನ್‌ಗಳಿಗೆ ಔಟಾಗಿದ್ದಾರೆ. ಹೀಗಾಗಿ ಕೊಹ್ಲಿಯ ಫಾರ್ಮ್‌ನ ಕುರಿತ ಚರ್ಚೆಗೆ ಇನ್ನಷ್ಟು ಇಂಬು ದೊರಕಿದೆ.
ಶುಕ್ರವಾರ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಮ್ ಮಾಡಿದ್ದ ಟ್ವೀಟ್ ಕ್ರಿಕೆಟ್ ಕಾರಿಡಾರ್‌ನಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಇಂಥ ದಿನಗಳು ಬೇಗ ಮುಗಿದು ಹೋಗುತ್ತದೆ, ಧೃತಿಗೆಡಬೇಡ ಎಂದು ಅವರು ಮಾಡಿದ ಟ್ವೀಟ್ ವಿಶ್ವ ಕ್ರಿಕೆಟ್‌ನ ಮನಗೆದ್ದಿತ್ತು. ತಾವು ಮಾಡಿದ ಟ್ವೀಟ್‌ಗೆ ಆ ಬಳಿಕ ಇನ್ನಷ್ಟು ಪುರಾವೆಗಳನ್ನು ಕೊಟ್ಟಿದ್ದರು ಪಾಕಿಸ್ತಾನದ ಸ್ಟಾರ್ ಆಟಗಾರ. ವಿಶ್ವ ಕ್ರಿಕೆಟ್‌ನ ಸಾಕಷ್ಟು ಮಂದಿ ಬಾಬರ್ ಅವರ ನಡೆಗೆ ಶಹಬ್ಬಾಸ್‌ಗಿರಿ ಕೊಟ್ಟಿದ್ದರು. ಒಟ್ಟಾರೆಯಾಗಿ ಪಾಕಿಸ್ತಾನ ಕ್ರಿಕೆಟ್ ಕ್ಷೇತ್ರ ಕೊಹ್ಲಿಯ ಬೆಂಬಲಕ್ಕೆ ನಿಂತಿದೆ.
ಬೆಂಚು ಕಾಯಿಸುವ ಧೈರ್ಯ ಯಾರಿಗೂ ಇಲ್ಲ
ಬಾಬರ್ ಹೇಳಿಕೆ ನೀಡಿದ ಮರುದಿನವೇ ತಮ್ಮ ಯೂಟ್ಯೂಬ್ ಚಾನೆಲ್ Caught Behind ನಲ್ಲಿ ಮಾತನಾಡಿದ ರಶೀದ್ ಲತಿಫ್, ವಿರಾಟ್ ಕೊಹ್ಲಿಯ ಹೆಗಲ ಮೇಲೆ ಬಂದೂಕು ಇಟ್ಟುಕೊಂಡು ಭಾರತ ತಂಡದ ಉಳಿದ ಆಟಗಾರರ ವೈಫಲ್ಯಗಳನ್ನು ಮರೆಮಾಚಲಾಗುತ್ತಿದೆ. ೨೦೧೯ರ ವಿಶ್ವ ಕಪ್‌ನಲ್ಲಿ ಅದೇ ರೀತಿ ಮಾಡಲಾಯಿತು. ಒಟ್ಟಾರೆಯಾಗಿ ಅವರನ್ನು ಬಲಿಪಶು ಮಾಡಲಾಗುತ್ತಿದೆ. ಇದೀಗ ಅವರ ಪ್ರದರ್ಶನದ ಕುರಿತು ಚರ್ಚೆ ನಡೆಸಲಾಗುತ್ತಿದೆ. ಆದರೆ, ಅವರನ್ನು ತಂಡದಿಂದ ಕೈ ಬಿಡುವ ಆಯ್ಕೆಗಾರ ಇನ್ನೂ ಹುಟ್ಟಿಲ್ಲ,ʼʼ ಎಂದು ಹೇಳಿಕೆ ನೀಡಿದ್ದಾರೆ.
“ವಿರಾಟ್ ಕೊಹ್ಲಿ ಮಾನಸಿಕ ಒತ್ತಡದಿಂದ ಚೆನ್ನಾಗಿ ಆಡುತ್ತಿಲ್ಲ ಎಂದು ಹೇಳಲಾಗುತ್ತಿದೆ. ಅದರೆ, ಅವರೀಗ ಬ್ಯಾಟಿಂಗ್ ತಂತ್ರವನ್ನೂ ಮರೆತಿದ್ದಾರೆ. ಮುಂದಿನ ಕಾಲಿಗೆ ಹೆಚ್ಚು ಬಲ ಕೊಟ್ಟು ಆಡುತ್ತಿದ್ದಾರೆ. ಚೆಂಡು ಸರಿಯಾಗಿ ಪುಟಿದರೆ ಅವರು ಆಡಬಲ್ಲರು. ಆದರೆ ಶಾರ್ಟ್ ಪಿಚ್ ಚೆಂಡಿಗೆ ಅವರಿಗೆ ಉತ್ತರಕೊಡಲು ಆಗುತ್ತಿಲ್ಲ. ಅಂಥ ಸಂದರ್ಭದಲ್ಲಿ ಅವರು ಸಮತೋಲನ ಕಳೆದುಕೊಳ್ಳುತ್ತಿದ್ದಾರೆ, ʼʼ ಎಂಬುದಾಗಿಯೂ ರಶೀದ್ ಹೇಳಿದರು.
ಕೊಹ್ಲಿ ಬೆನ್ನಿಗೆ ಹಲವು ಕ್ರಿಕೆಟಿಗರು
ರನ್ ಬರ ಎದುರಿಸುತ್ತಿರುವ ಕೊಹ್ಲಿಯ ಬೆನ್ನಿಗೆ ಹಲವಾರು ಕ್ರಿಕೆಟಿಗರು ನಿಂತಿದ್ದಾರೆ. ಇದೊಂದು ಹಂತವಷ್ಟೇ. ಅವರ ಅದರಿಂದ ಹೊರಗೆ ಬರಲಿದ್ದಾರೆ ಎಂದು ಹೇಳುತ್ತಿದ್ದಾರೆ. “ಕೊಹ್ಲಿಯೂ ಒಬ್ಬ ಮನುಷ್ಯ. ಫಾರ್ಮ್‌ಗೆ ಮರಳುವ ಮೊದಲು ಕಡಿಮೆ ಮೊತ್ತವನ್ನು ಬಾರಿಸುವ ಸಾಧ್ಯತೆಗಳಿವೆ,ʼʼ ಎಂದು ಇಂಗ್ಲೆಂಡ್ ಸೀಮಿತ ಓವರ್‌ಗಳ ತಂಡದ ನಾಯಕ ಜೋಸ್ ಬಟ್ಲರ್ ಹೇಳಿದ್ದರು.
ಇದನ್ನೂ ಓದಿ | ಈ ಕ್ಷಣವೂ ಕಳೆದು ಹೋಗುತ್ತದೆ ಎಂದು ಕೊಹ್ಲಿಗೆ (Virat Kohli) ಸಮಾಧಾನ ಹೇಳಿದ ಅಜಮ್