ನಾಟಿಂಗ್‌ಹ್ಯಾಮ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟಿ೨೦ ಸರಣಿಯ (INDvsENG T20) ಮೂರನೇ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಬಾರಿಸಿದ ಸ್ಫೋಟಕ ಶತಕ ಕ್ರಿಕೆಟ್ ದಿಗ್ಗಜರ ಗಮನ ಸೆಳೆದಿದೆ. ಅದರಲ್ಲೂ ಅವರು ಪಾಯಿಂಟ್ ಕಡೆಗೆ ಬಾರಿಸಿದ ಸ್ಕೂಪ್ ಸಿಕ್ಸರ್ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದ್ದು, ಸೂರ್ಯನಿಗೆ ಮಿತಿಯೇ ಇರಲಿಲ್ಲ ಎಂದು ಹೊಗಳುತ್ತಿದ್ದಾರೆ.
೨೧೬ ರನ್‌ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಲು ಆರಂಭಿಸಿದ್ದ ಭಾರತ ತಂಡದ ಆರಂಭಿಕ ವಿಕೆಟ್‌ಗಳು ಬೇಗನೆ ಉರುಳಿದ ಹೊರತಾಗಿಯೂ ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಸೂರ್ಯ ಸ್ಫೋಟಿಸಿದ್ದರು. 55 ಎಸೆತಗಳಲ್ಲಿ ಅಮೋಘ ೧೧೭ ರನ್ ಬಾರಿಸಿದ ಅವರ ಶೈಲಿಗೆ ಹಿರಿಯ ಕ್ರಿಕೆಟಿಗರು ಶಹಬ್ಬಾಸ್ ಎಂದಿದ್ದಾರೆ. ಪ್ರಮುಖವಾಗಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಮೆಚ್ಚುಗೆ ಸೂಚಿಸಿದ್ದಾರೆ.
ಶ್ರೇಯಸ್ ಅಯ್ಯರ್ ಹಾಗೂ ಸೂರ್ಯಕುಮಾರ್ ಯಾದವ್ ನಾಲ್ಕನೇ ವಿಕೆಟ್‌ಗೆ ೧೧೯ ರನ್ ಬಾರಿಸಿದ್ದರು. ಅದರಲ್ಲಿ ಶ್ರೇಯಸ್ ರನ್ ಗಳಿಸಲು ತಿಣುಕಾಡಿದರೆ ಸೂರ್ಯಕುಮಾರ್ ಯಾವುದೇ ಅಳುಕಿಲ್ಲದೇ ಆಂಗ್ಲರ ಪಡೆಯ ಬೌಲರ್‌ಗಳನ್ನು ದಂಡಿಸಿದ್ದಾರೆ. ೧೧೯ ರನ್‌ಗಳ ಜತೆಯಾಟದಲ್ಲಿ ಶ್ರೇಯಸ್ ಪಾಲು ಕೇವಲ ೨೮ ಉಳಿದ ರನ್‌ಗಳು ಸೂರ್ಯನ ಬ್ಯಾಟ್‌ನಿಂದ ಮೂಡಿ ಬಂದಿರುವುದು.
ಮಿಸ್ಟರ್ ೩೬೦ಗಿಂತಲೂ ಮಿಗಿಲು
ದಕ್ಷಿಣ ಆಫ್ರಿಕಾ ತಂಡದ ಮಾಜಿ ಆಟಗಾರ ಎಬಿ ಡಿ ವಿಲಿಯರ್ಸ್ ಅವರನ್ನು ಮಿಸ್ಟರ್ ೩೬೦ ಡಿಗ್ರಿ ಎಂದು ಕರೆಯಲಾಗುತ್ತದೆ. ಮೈದಾನದ ಎಲ್ಲ ಮೂಲೆಗಳಿಗೆ ಅವರು ಚೆಂಡನ್ನು ಬಾರಿಸಬಲ್ಲ ಅವರ ಸಾಮರ್ಥ್ಯವನ್ನು ಬಣ್ಣಿಸಲು ಆ ರೀತಿ ಕರೆಯಲಾಗುತ್ತದೆ. ಆದರೆ, ಸೂರ್ಯಕುಮಾರ್ ಅವರೂ ಭಾನುವಾರ ೩೬೦ ಡಿಗ್ರಿಗಿಂತಲೂ ಒಂದು ಹೆಜ್ಜೆ ಮುಂದು ಎನಿಸುವಂಥ ಪ್ರದರ್ಶನ ನೀಡಿದ್ದರು. ಅದರಲ್ಲೂ ವೇಗದ ಎಸೆತಕ್ಕೆ ಪಾಯಿಂಟ್ ಕಡೆಗೆ ಚೆಂಡನ್ನು ಸ್ಕೂಪ್ ಮಾಡಿರುವುದು ಅದ್ಭುತ ಎನಿಸಿದೆ. ಜತೆಗೆ ನಟರಾಜ ಶೈಲಿಯ ಸಿಕ್ಸರ್ ಅತ್ಯಾಕರ್ಷಕವಾಗಿತ್ತು.
ಸೂರ್ಯಕುಮಾರ್ ಪಾಲಿಗೆ ಇದು ಚೊಚ್ಚಲ ಟಿ೨೦ ಶತಕ. ಅಲ್ಲದೆ, ಅವರು ಶತಕ ಬಾರಿಸಿದ ಐದನೇ ಭಾರತೀಯ ಬ್ಯಾಟ್ಸ್‌ಮನ್. ಒಂದು ವೇಳೆ ಅವರು ೧೧೮ ರನ್ ಬಾರಿಸಿದ್ದರೆ ಟಿ೨೦ ಮಾದರಿಯಲ್ಲಿ ಗರಿಷ್ಠ ರನ್ ಬಾರಿಸಿದ ಭಾರತೀಯ ಆಟಗಾರ ಎನಿಸಿಕೊಂಡು ರೋಹಿತ್ ಶರ್ಮ ಅವರ ದಾಖಲೆ ಮುರಿಯುತ್ತಿದ್ದರು. ಸುರೇಶ್ ರೈನಾ, ರೋಹಿತ್ ಶರ್ಮ, ಕೆ.ಎಲ್ ರಾಹುಲ್, ದೀಪಕ್ ಹೂಡಾ ಟಿ೨೦ಯಲ್ಲಿ ಶತಕ ಬಾರಿಸಿದ ಇತರ ಭಾರತೀಯ ಆಟಗಾರರು.
ಇದನ್ನೂ ಓದಿ: INDvsENG T20 : ಸೂರ್ಯಕುಮಾರ್ ಮಿಂಚಿದರೂ ಭಾರತಕ್ಕೆ ಲಭಿಸಲಿಲ್ಲ ಗೆಲುವು, 2-1ರಲ್ಲಿ ಸರಣಿ ಜಯ