Site icon Vistara News

Team India | ಪ್ರತ್ಯೇಕ ತಂಡ, ಪ್ರತ್ಯೇಕ ನಾಯಕ; ವಿಶ್ವ ಕಪ್‌ ಗೆಲ್ಲಲು ಬಿಸಿಸಿಐ ಹೊಸ ಯೋಜನೆ

bcci

ಮುಂಬಯಿ : ಟಿ೨೦ ವಿಶ್ವ ಕಪ್‌ ಹಾಗೂ ಅದಕ್ಕಿಂತ ಹಿಂದೆ ನಡೆದ ಏಷ್ಯಾ ಕಪ್‌ನಲ್ಲಿ ಭಾರತ ತಂಡ ನೀಡಿದ ಪ್ರದರ್ಶನ ಬಿಸಿಸಿಐಗೆ ಆತಂಕ ಸೃಷ್ಟಿ ಮಾಡಿದೆ. ಪ್ರಮುಖವಾಗಿ ತಂಡಕ್ಕೆ ಆಟಗಾರರ ಆಯ್ಕೆ ಹಾಗೂ ಪ್ರಮುಖ ಪಂದ್ಯಗಳಲ್ಲಿ ಭಾರತ ತಂಡದ ಸದಸ್ಯರು ನೀಡಿದ ಪ್ರದರ್ಶನ ಈ ಚಿಂತೆಗೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ನೋಡಿಕೊಳ್ಳುವ ಉದ್ದೇಶದಿಂದ ನಾನಾ ರೀತಿಯ ಸುಧಾರಣೆಗೆ ಬಿಸಿಸಿಐ ಯೋಜನೆ ರೂಪಿಸಿಕೊಂಡಿದೆ. ಅದರಲ್ಲೊಂದು ಬೇರೆಬೇರೆ ಮಾದರಿಯ ತಂಡಕ್ಕೆ ಬೇರೆ ಬೇರೆ ನಾಯಕರ ಆಯ್ಕೆ ವಿಚಾರ.

ಬಿಸಿಸಿಐ ಶುಕ್ರವಾರ ಹಿರಿಯರ ತಂಡದ ಆಯ್ಕೆ ಸಮಿತಿಯನ್ನು ಏಕಾಏಕಿ ಬರ್ಖಾಸ್ತು ಮಾಡಿ ಹೊಸ ಆಯ್ಕೆಗಾರರ ಹುದ್ದೆಗೆ ಅರ್ಜಿ ಕರೆದಿದೆ. ಹೊಸ ಸಮಿತಿಯ ಅಧಿಕಾರ ವಹಿಸಿಕೊಂಡ ತಕ್ಷಣ ಟಿ೨೦, ಏಕ ದಿನ ಹಾಗೂ ಟೆಸ್ಟ್‌ ಮಾದರಿಗೆ ಪ್ರತ್ಯೇಕ ನಾಯಕರನ್ನು ಆಯ್ಕೆ ಮಾಡಲಿದೆ.

ಟಿ೨೦ ಮಾದರಿಗೆ ಹಾರ್ದಿಕ್‌ ಪಾಂಡ್ಯ ನಾಯಕರಾಗಿ ಮುಂದುವರಿಯುವುದು ಬಹುತೇಕ ಖಚಿತ ಎನ್ನಲಾಗಿದೆ. ಅಂತೆಯೇ ಏಕ ದಿನ ವಿಶ್ವ ಕಪ್‌ ಮುಗಿಯುವ ತನಕ ರೋಹಿತ್‌ ಶರ್ಮ ಭಾರತ ಒಡಿಐ ತಂಡವನ್ನು ಮುನ್ನಡೆಸಲಿದ್ದಾರೆ. ಅಂತೆಯೇ ಟೆಸ್ಟ್‌ ತಂಡಕ್ಕೆ ಹೊಸ ನಾಯಕನ ಆಯ್ಕೆಯೂ ನಡೆಯಬಹುದು ಎಂದು ವರದಿಗಳು ಹೇಳಿವೆ.

ಬಿಸಿಸಿಐ ಖಾಲಿ ಇರುವ ಆಯ್ಕೆ ಸಮಿತಿ ಸದಸ್ಯರ ಹುದ್ದೆಗಳಿಗೆ ಹೊಸದಾಗಿ ಅರ್ಜಿ ಆಹ್ವಾನಿಸಿದ್ದು, ನವೆಂಬರ್ 28 ಕೊನೆಯ ದಿನವಾಗಿದೆ. ಕನಿಷ್ಠ ಏಳು ಟೆಸ್ಟ್‌ಗಳು ಅಥವಾ 30 ಪ್ರಥಮ ದರ್ಜೆ ಪಂದ್ಯಗಳು ಅಥವಾ ಹತ್ತು ಏಕದಿನ ಪಂದ್ಯಗಳು ಮತ್ತು ೨೦ ಪ್ರಥಮ ದರ್ಜೆ ಕ್ರಿಕೆಟ್‌ ಪಂದ್ಯಗಳನ್ನು ಆಡಿರುವವರ ಅರ್ಜಿ ಸಲ್ಲಿಸುವ ಅರ್ಹತೆ ಹೊಂದಿರುತ್ತಾರೆ. ಅರ್ಜಿದಾರರು ಐದು ವರ್ಷಗಳ ಹಿಂದೆ ಆಟದಿಂದ ನಿವೃತ್ತರಾಗಿರಬೇಕು ಮತ್ತು ಬಿಸಿಸಿಐ-ಸಂಯೋಜಿತ ಕ್ರಿಕೆಟ್ ಸಮಿತಿಗಳಲ್ಲಿ ಐದು ವರ್ಷಗಳ ಅವಧಿಯನ್ನು ಪೂರೈಸಿರಬಾರದು ಎಂದು ಹೇಳಲಾಗಿದೆ.

ಇದನ್ನೂ ಓದಿ | BCCI: ಚೇತನ್‌ ಶರ್ಮಾ ಸಾರಥ್ಯದ ಟೀಮ್ ಇಂಡಿಯಾ ಆಯ್ಕೆ ಸಮಿತಿಗೆ ಗೇಟ್​ಪಾಸ್​ ನೀಡಿದ ಬಿಸಿಸಿಐ!

Exit mobile version