Site icon Vistara News

Wimbeldon: ಏಳು ಬಾರಿಯ ಚಾಂಪಿಯನ್‌ ಮೊದಲ ಸುತ್ತಿನಲ್ಲೇ ಔಟ್‌

serena williams

ಲಂಡನ್‌: ಸೆರೆನಾ ವಿಲಿಯಮ್ಸ್‌ ಟೆನಿಸ್‌ ಲೋಕದ ದೈತ್ಯ ಪ್ರತಿಭೆ. ೨೩ ಗ್ರ್ಯಾನ್‌ ಸ್ಲಾಮ್‌ ಪ್ರಶಸ್ತಿಗಳನ್ನು ಗೆದ್ದವರು ಅವರು. ಅದರಲ್ಲೂ Wimbeldon ಏಳು ಬಾರಿ ಚಾಂಪಿಯನ್‌. ಇಷ್ಟೆಲ್ಲ ಸಾಧನೆ ಮಾಡಿರುವ ಅವರು ಹಾಲಿ ಆವೃತ್ತಿಯ ವಿಂಬಲ್ಡನ್‌ನ ಮೊದಲ ಸುತ್ತಿನಲ್ಲೇ ಸೋತು ನಿರ್ಗಮಿಸಿದ್ದಾರೆ. ಅದೂ ಪದಾರ್ಪಣೆ ಪಂದ್ಯವನ್ನಾಡುತ್ತಿರುವ ಫ್ರಾನ್ಸ್‌ನ ಹಾರ್ಮೊನಿ ಟಾನ್‌ ವಿರುದ್ಧ.

ಮಂಗಳವಾರ ರಾತ್ರಿ ನಡೆದ ಪಂದ್ಯದಲ್ಲಿ ಅಮೆರಿಕದ ಹಿರಿಯ ಆಟಗಾರ್ತಿ ಸೆರೆನಾ ವಿಲಿಯಮ್ಸ್‌ ಯುವ ಪ್ರತಿಭೆ ಮುಂದೆ ಮಂಡಿಯೂರಿದ್ದಾರೆ. 40 ವರ್ಷದ ಹಿರಿಯ ಆಟಗಾರ್ತಿ ತಮ್ಮೆಲ್ಲ ಅನುಭವಗಳನ್ನು ಧಾರೆಯೆರೆದು ಆಡಿದರೂ ೨೪ ವರ್ಷದ ಹಾರ್ಮೊನಿ ಟಾನ್‌ ವಿರುದ್ಧ ಗೆಲ್ಲಲು ಸಾಧ್ಯವಾಗಲಿಲ್ಲ. 5-7, 6-1, 6-7 ಸೆಟ್‌ಗಳಿಂದ ಕಿರಿಯ ಆಟಗಾರ್ತಿಯ ಎದುರು ಸೋತ ಸೆರೆನಾ ನಿರಾಸೆ ಎದುರಿಸಿದರು.

ಗಾಯದ ಸಮಸ್ಯೆ

ಅಂದ ಹಾಗೆ ಸೆರೆನಾ ವಿಲಿಯಮ್ಸ್‌ಗೆ ೪೦ ವರ್ಷ. ಜತೆಗೆ ಗಾಯದ ಸಮಸ್ಯೆಯಿಂದಾಗಿ ಕಳೆದ ೧೨ ತಿಂಗಳಿಂದ ಸ್ಪರ್ಧಾತ್ಮಕ ಟೆನಿಸ್‌ನಿಂದ ದೂರ ಉಳಿದಿದ್ದರು. ಹೀಗಾಗಿ ಅವರ ಸಿಂಗಲ್ಸ್‌ ರ‍್ಯಾಂಕ್ ೧೨೦೪ಕ್ಕೆ ಕುಸಿದಿದೆ. ಆದರೆ, ಎದುರಾಳಿ ಹಾರ್ಮೊನಿ ಟಾನ್‌ ಯುವ ಆಟಗಾರ್ತಿ. ಸಿಂಗಲ್ಸ್‌ನಲ್ಲಿ ಅವರ ವಿಶ್ವ ರ‍್ಯಾಂಕ್ ೧೧೫. ಆದಾಗ್ಯೂ ಸೆರೆನಾ ಭರ್ಜರಿ ಪೈಪೋಟಿ ಕೊಟ್ಟಿದ್ದಾರೆ. ಮೊದಲ ಸೆಟ್‌ ಸೋತ ಹೊರತಾಗಿಯೂ ಎರಡನೇ ಸೆಟ್‌ನಲ್ಲಿ ತಿರುಗೇಟು ಕೊಟ್ಟಿದ್ದರು. ಆದರೆ, ಮೂರನೇ ಸೆಟ್‌ ಅನ್ನು ಟೈ ಬ್ರೇಕರ್‌ ಮೂಲಕ ಸೋಲೊಪ್ಪಿಕೊಂಡಿದ್ದರು.

ಇದನ್ನೂ ಓದಿ: Wimbeldon : ಕೊರೊನಾ ಸೋಂಕಿಗೊಳಗಾದ ಬೆರೆಟಿನಿ ಟೂರ್ನಿಯಿಂದ ಔಟ್‌

Exit mobile version