Site icon Vistara News

ಇವರೇ ನೋಡಿ ಲೇಡಿ AB De villiers

AB De villiars

ಪಲ್ಲೆಕೆಲೆ: ದಕ್ಷಿಣ ಆಫ್ರಿಕಾ ತಂಡದ ಮಾಜಿ ಕ್ರಿಕೆಟಿಗ AB De Villiers ತಮ್ಮ ವಿಭಿನ್ನ ಬ್ಯಾಟಿಂಗ್‌ ಮೂಲಕವೇ ಕ್ರಿಕೆಟ್‌ ಲೋಕದಲ್ಲಿ ಪ್ರಸಿದ್ಧಿ. ಮೈದಾನದ ಯಾವ ಮೂಲೆಗೂ ಬೇಕಾದರೂ ಚೆಂಡು ಅಟ್ಟುವ ಸಾಮರ್ಥ್ಯ ಅವರಿಗಿದೆ. ಹೀಗಾಗಿ ಅವರನ್ನು ಮಿಸ್ಟರ್‌ ೩೬೦ ಡಿಗ್ರಿ ಎಂದೇ ಕರೆಯುತ್ತಾರೆ. ಈಗೀಗ ಅವರು ಬಾರಿಸುವ ಕೆಲವೊಂದು ಹೊಡೆತಗಳನ್ನು ಇತರ ಕ್ರಿಕೆಟಿಗರೂ ಅನುಸರಿಸುತ್ತಿದ್ದಾರೆ. ಇದೀಗ ಮಹಿಳಾ ಕ್ರಿಕೆಟಿಗರೊಬ್ಬರು ಎಬಿಡಿ ಶೈಲಿಯನ್ನು ಅನುಸರಿಸಿ ಫೋರ್‌ ರನ್‌ ಬಾರಿಸಿದ್ದಾರೆ. ಅವರೇ ಭಾರತದ ಯುವ ಬ್ಯಾಟರ್‌ ಶಫಾಲಿ ವರ್ಮ.

ಭಾರತ ಮಹಿಳೆಯರ ಕ್ರಿಕೆಟ್‌ ತಂಡ ಶ್ರೀಲಂಕಾ ಪ್ರವಾಸದಲ್ಲಿದೆ. ಮೂರು ಪಂದ್ಯಗಳ ಟಿ೨೦ ಸರಣಿ ಮುಕ್ತಾಯಗೊಂಡಿದ್ದು, ಅಷ್ಟೇ ಪಂದ್ಯಗಳ ಏಕದಿನ ಸರಣಿಯ ಎರಡು ಪಂದ್ಯಗಳು ಮುಕ್ತಾಯಗೊಂಡಿವೆ. ಮೊದಲೆರಡು ಪಂದ್ಯಗಳನ್ನು ಗೆದ್ದಿರುವ ಪ್ರವಾಸಿ ಭಾರತ ತಂಡ ಸರಣಿ ಕೈವಶ ಮಾಡಿಕೊಂಡಾಗಿದೆ. ಮೊದಲ ಪಂದ್ಯದಲ್ಲಿ ಭಾರತ ನಾಲ್ಕು ವಿಕೆಟ್‌ಗಳಿಂದ ಜಯ ಸಾಧಿಸಿದ್ದರೆ, ಸೋಮವಾರ ನಡೆದ ಎರಡನೇ ಪಂದ್ಯದಲ್ಲಿ ೧೦ ವಿಕೆಟ್‌ಗಳಿಂದ ಭರ್ಜರಿ ಜಯ ದಾಖಲಿಸಿದೆ. ಈ ಪಂದ್ಯದಲ್ಲಿ ಶಫಾಲಿ ೭೧ ಎಸೆತಗಳಲ್ಲಿ ಅಜೇಯ ೭೧ ರನ್‌ ಬಾರಿಸಿದ್ದರು. ಈ ವೇಳೆ ಶಫಾಲಿ ಹಿಂದಕ್ಕೆ ತಿರುಗಿ ಬಾರಿಸಿದ ಫೋರ್‌ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

ಶ್ರೀಲಂಕಾ ಪರ ಇನಿಂಗ್ಸ್‌ನ ಏಳನೇ ಓವರ್‌ ಎಸೆದ ವೇಗದ ಬೌಲರ್‌ ಅಚಿನಿ ಕುಲಸೂರ್ಯ ತಮ್ಮ ಕೊನೇ ಎಸೆತವನ್ನು ಆಫ್‌ಸ್ಟಂಪ್‌ ಕಡೆಗೆ ಎಸೆದರು. ಅದನ್ನು ಗಮನಿಸಿದ ಶಫಾಲಿ ಹಿಂದಕ್ಕೆ ತಿರುಗಿ ಸ್ಕೂಪ್‌ ಶಾಟ್‌ ಹೊಡೆದಿದ್ದಾರೆ. ಚೆಂಡು ಫೈನ್‌ ಲೆಗ್‌ ಮೂಲಕ ಬೌಂಡರಿ ಗೆರೆ ದಾಟಿತ್ತು. ಎಬಿಡಿ ವಿಲಿಯರ್ಸ್‌ ಸಾಕಷ್ಟು ಬಾರಿ ಇಂಥ ಹೊಡೆತಗಳನ್ನು ಹೊಡೆಯುತ್ತಿದ್ದರು. ಅದನ್ನೀಗ ಶಫಾಲಿ ಕೂಡ ಅನುಸರಿಸಿಕೊಂಡಿದ್ದಾರೆ.

ಭಾರತಕ್ಕೆ ಕ್ಲೀನ್‌ ಸ್ವೀಪ್‌ ಗುರಿ

ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಸ್ಟೇಡಿಯಮ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಬ್ಯಾಟ್‌ ಮಾಡಿದ ಶ್ರೀಲಂಕಾ ೫೦ ಓವರ್‌ಗಳಲ್ಲಿ ೧೭೩ ರನ್‌ಗಳಿಗೆ ಆಲ್‌ಔಟ್‌ ಅಗಿತ್ತು. ಬಳಿಕ ಬ್ಯಾಟ್‌ ಮಾಡಿದ ಭಾರತ ವಿಕೆಟ್‌ ನಷ್ಟವಿಲ್ಲದೇ ೧೭೪ ರನ್‌ ಬಾರಿಸಿತ್ತು. ಸ್ಮೃತಿ ಮಂಧಾನಾ ಅಜೇಯ ೯೪ ರನ್‌ ಬಾರಿಸಿದ್ದರು. ಪಲ್ಲೆಕೆಲೆ ಕ್ರೀಡಾಂಗಣದಲ್ಲಿ ಗುರುವಾರ ಮೂರನೇ ಪಂದ್ಯ ನಡೆಯಲಿದ್ದು, ಸರಣಿ ಕ್ಲೀನ್‌ಸ್ವೀಪ್‌ ಮಾಡುವುದು ಪ್ರವಾಸಿ ಭಾರತ ತಂಡದ ಕನಸಾಗಿದೆ.

ಇದನ್ನೂ ಓದಿ: Srilanka Tour : ಭಾರತದ ವನಿತೆಯರಿಗೆ ಏಕದಿನ ಸರಣಿ

Exit mobile version