Site icon Vistara News

Shaheen Afridi: ‘ನಿಮ್ಮ ಸಹವಾಸವೇ ಬೇಡ’; ನಾಯಕತ್ವ ತೊರೆಯಲು ಮುಂದಾದ ಪಾಕ್​ ವೇಗಿ

Shaheen Afridi

ಲಾಹೋರ್​: ಪಾಕಿಸ್ತಾನ ಟಿ20 ತಂಡದ ನಾಯಕನಾಗಿರುವ ಶಾಹೀನ್ ಶಾ ಅಫ್ರೀದಿ ಅವರು ಪಾಕ್​ ಕ್ರಿಕೆಟ್​ ಮಂಡಳಿಯ ವರ್ತನೆಯಿಂದ ಬೇಸತ್ತು ತಮ್ಮ ನಾಯಕತ್ವ ಸ್ಥಾನಕ್ಕೆ ಗುಡ್​ ಬೈ ಹೇಳಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

ಶಾಹೀನ್ ಅಫ್ರೀದಿ ನಾಯಕನಾಗಿದದ್ದರೂ ಕೂಡ ಇದುವರೆಗೂ ಪಿಸಿಬಿ ನೂತನ ಅಧ್ಯಕ್ಷ ನಕ್ವಿ ಹಾಗೂ ರಾಷ್ಟ್ರೀಯ ಆಯ್ಕೆ ಸಮಿತಿ ಆಟಗಾರರ ಅಥವಾ ಕೋಚ್‌ಗಳ ಆಯ್ಕೆಗೆ ಸಂಬಂಧಿಸಿ ಒಮ್ಮೆಯೂ ಮಾತನಾಡದೇ ಇರುವುದು ಶಾಹೀನ್​ ಬೇಸರಕ್ಕೆ ಕಾರಣವಾಗಿದೆ. ಕೇವಲ ಹೆಸರಿಗೆ ಮಾತ್ರ ಇರುವ ಈ ಸ್ಥಾನದಲ್ಲಿ ಅವರಿಗೆ ಮುಂದುವರಿಯಲು ಇಷ್ಟವಿಲ್ಲ. ಶೀಘ್ರದಲ್ಲೇ ತಮ್ಮ ಹುದ್ದೆಯನ್ನು ತ್ಯಜಿಸಲಿದ್ದಾರೆ ಎಂದು ಅಫ್ರೀದಿಗೆ ಆಪ್ತವಾದ ಮೂಲಗಳು ಮಾಹಿತಿ ನೀಡಿದೆ.

ಇನ್ನೊಂದು ಮೂಲಗಳ ಪ್ರಕಾರ ಬಾಬರ್​ ಅಜಂ ಅವರನ್ನು ಮತ್ತೆ ಮೂರು ಮಾದರಿಯ ಕ್ರಿಕೆಟ್​ಗೆ ನಾಯಕನಾಗಿ ಮಾಡಲು ಪಿಸಿಬಿ ಚಿಂತನೆ ನಡೆಸಿದೆ ಎಂಬ ಮಾತುಗಳು ಕೂಡ ಕೇಳಿಬಂದಿದೆ. ಜತೆಗೆ ಜೂನ್​ನಲ್ಲಿ ನಡೆಯುವ ಟಿ20 ವಿಶ್ವಕಪ್‌, ಕೋಚ್‌ಗಳ ನೇಮಕ, ನಾಯಕತ್ವಕ್ಕೆ ಸಂಬಂಧಿಸಿ ಪಿಸಿಬಿ ಮುಖ್ಯಸ್ಥರು ಈಗಾಗಲೇ ಬಾಬರ್​ ಜತೆ ಚರ್ಚಿಸಿದ್ದಾರೆ ಎನ್ನಲಾಗಿದೆ. ಇದರಿಂದ ಅಫ್ರಿದಿ ಬೇಸರಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿದೆ.

‘ಪಾಕ್​ ಕ್ರಿಕೆಟ್​ ಮಂಡಳಿ ಸೃಷ್ಟಿಸಿರುವ ಈ ಎಲ್ಲ ಗೊಂದಲಗಳಿಂದ ಹೊರಬರಲು ಮತ್ತು ಹುದ್ದೆ ತ್ಯಜಿಸುವಂತೆ ನನ್ನ ಆಪ್ತರೇ ಸಲಹೆ ನೀಡುತ್ತಿದ್ದಾರೆ. ಈ ಬಗ್ಗೆ ಕೆಲವೇ ದಿನಗಳಲ್ಲಿ ನಾನು ಸ್ಪಷ್ಟ ನಿರ್ಧಾರ ಪ್ರಕಟಿಸಲಿದ್ದೇನೆ’ ಎಂದು ಅಫ್ರೀದಿ ಹೇಳಿರುವುದಾಗಿ ಅವರ ಆಪ್ತ ಮೂಲಗಳು ತಿಳಿಸಿದೆ.

ಇದನ್ನೂ ಒದಿ Shaheen Afridi: ಒಂದು ವಿಕೆಟ್​ ಕಿತ್ತು ಹಲವು ದಾಖಲೆ ಬರೆದ ಶಾಹೀನ್​ ಅಫ್ರಿದಿ

ಬಾಬರ್​ ಮತ್ತು ಅಫ್ರೀದಿ ಮಧ್ಯೆ ಮೊದಲಿನಿಂದಲೂ ಕೂಡ ಮನಸ್ತಾಪವಿದೆ. ಕಳೆದ ವರ್ಷ ಭಾರತದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್​ನಲ್ಲಿ ಇದು ಜಗಜಾಹೀರವಾಗಿತ್ತು. ಡ್ರೆಸಿಂಗ್​ ರೂಮ್​ನಲ್ಲಿ ಇವರಿಬ್ಬರ ಕಚ್ಚಾಟದ ವಿಡಿಯೊ ಕೂಡ ವೈರಲ್​ ಆಗಿತ್ತು. ಅಲ್ಲದೆ ಅಫ್ರೀದಿ ವಿಕೆಟ್​ ಕಿತ್ತಾಗ ಬಾಬರ್​ ಇದನ್ನು ಸಂಭ್ರಮಿಸದೆ ಇದ್ದದ್ದು ಕೂಡ ಕಂಡು ಬಂತಿತ್ತು. ಬಾಬರ್​ ನಾಯಕತ್ವದ ಬಗ್ಗೆ ಅಫ್ರೀದಿ ಕೂಡ ಹಲವು ಬಾರಿ ಅಸಾಮಾಧಾನ ಕೂಡ ವ್ಯಕ್ತಪಡಿಸಿದ್ದರು.

ಏಕದಿನ ಸೋಲಿನ ಬಳಿಕ ಬಾಬರ್​ ಎಲ್ಲ ಮಾದರಿಯ ನಾಯಕತ್ನದಿಂದ ಕೆಳಗಿಳಿದಿದ್ದರು. ಈ ವೇಳೆ ಟಿ20ಗೆ ಅಫ್ರೀದಿ ಮತ್ತು ಶಾನ್ ಮಸೂದ್ ಅವರನ್ನು ಟೆಸ್ಟ್​ಗೆ ನಾಯಕನ್ನಾಗಿ ಮಾಡಲಾಯಿತು. ಆದರೆ ಉಭಯ ನಾಯಕರ ನೇತೃತ್ವದಲ್ಲಿ ಪಾಕಿಸ್ತಾನ ಆಡಿದ ಎಲ್ಲ ಸರಣಿಗಳೂ ಸೋಲು ಕಂಡಿದೆ. ಹೀಗಾಗಿ ಮತ್ತೆ ಬಾಬರ್​ ಅವರಿಗೆ ನಾಯಕತ್ವ ನೀಡುವ ಚಿಂತೆನೆ ನಡೆದಿದೆ ಎನ್ನಲಾಗಿದೆ. ಭಾರತದ ಆತಿಥ್ಯದಲ್ಲಿ 2023ರಲ್ಲಿ ನಡೆದಿದ್ದ ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡ ನೀರಸ ಪ್ರದರ್ಶನ ತೋರಿತ್ತು. ಬಾಬರ್​ ನಾಯಕತ್ವದಲ್ಲಿ ಪಾಕಿಸ್ತಾನ ತಂಡ ಆಡಿದ 9 ಪಂದ್ಯಗಳ ಪೈಕಿ ಕೇವಲ 4 ಪಂದ್ಯಗಳನ್ನು ಮಾತ್ರ ಗೆಲುವು ಸಾಧಿಸಿ ಲೀಗ್​ ಹಂತದಲ್ಲೇ ಹೊರಬಿದ್ದಿತ್ತು. ಹೀಗಾಗಿ ಬಾಬರ್​ ವಿರುದ್ಧ ಪಾಕ್​ ತಂಡದ ಮಾಜಿ ಆಟಗಾರರು ಸೇರಿ ಹಲವರು ಭಾರೀ ಟೀಕೆ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಬಾಬರ್ ಎಲ್ಲಾ ಮೂರು ಸ್ವರೂಪಗಳ ನಾಯಕತ್ವದಿಂದ ಕೆಳಗಿಳಿದಿದ್ದರು.

Exit mobile version