ಲಾಹೋರ್: ಪಾಕಿಸ್ತಾನದ ವೇಗದ ಬೌಲರ್ ಶಾಹೀನ್ ಅಫ್ರಿದಿ ಮಾಜಿ ನಾಯಕ ಶಾಹಿದ್ ಅಫ್ರಿದಿ ಅವರ ಪುತ್ರಿ ಅನ್ಶಾ ಅವರನ್ನು ಎರಡನೇ ಬಾರಿಗೆ ಮದುವೆಯಾಗಲಿದ್ದಾರೆ. ವರದಿಗಳ ಪ್ರಕಾರ, ಏಷ್ಯಾ ಕಪ್ 2023ರ ಫೈನಲ್ ಪಂದ್ಯದ ಎರಡು ದಿನಗಳ ನಂತರ ಸೆಪ್ಟೆಂಬರ್ 19ರಂದು ಈ ಜೋಡಿ ಪಾಕಿಸ್ತಾನದಲ್ಲಿ ಎರಡನೇ ಬಾರಿಗೆ ಮದುವೆಯಾಗಲಿದ್ದಾರೆ. ಅದ್ಧೂರಿ ಸಮಾರಂಭ ನಡೆಸಿ ಎಲ್ಲರನ್ನೂ ಆಹ್ವಾನಿಸಲಿದ್ದಾರೆ ಎಂಬುದಾಗಿ ವರದಿಯಾಗಿದೆ.
ಶಾಹೀನ್ ಅಫ್ರಿದಿ ಮತ್ತು ಅನ್ಶಾ ಜೋಡಿಯ ಮೊದಲ ಮದುವೆ ಈ ವರ್ಷದ ಫೆಬ್ರವರಿಯಲ್ಲಿ ನಡೆದಿತ್ತು. ಕ್ಯಾಪ್ಟನ್ ಬಾಬರ್ ಅಜಮ್ ಮತ್ತು ಪಾಕ್ ತಂಡದ ಪ್ರಮುಖ ಆಟಗಾರ ಶದಾಬ್ ಖಾನ್ ಸೇರಿದಂತೆ ದಂಪತಿಗಳ ಹತ್ತಿರದ ಸಂಬಂಧಿ ಮತ್ತು ಸ್ನೇಹಿತರನ್ನು ಮಾತ್ರ ಮದುವೆಗೆ ಆಹ್ವಾನಿಸಲಾಗಿತ್ತು. ಅವರು ಮಾತ್ರ ಹೋಗಿರುವ ಚಿತ್ರಗಳು ಪ್ರಸಾರಗೊಂಡಿದ್ದವು. ಸಿಂಪಲ್ ಆಗಿ ಮದುವೆಯಾಗಿರುವ ಕಾರಣ ಇದೀಗ ಮತ್ತೊಂದು ಬಾರಿ ಮದುವೆಯಾಗಲು ಅವರು ನಿರ್ಧರಿಸಿದ್ದಾರೆ. ತಮ್ಮ ಮದುವೆಯನ್ನು ಭವ್ಯವಾಗಿ ಆಚರಿಸಲು ಮುಂದಾಗಿದ್ದಾರೆ. ಅದಕ್ಕಾಗಿ ಎರಡನೇ ಬಾರಿಗೆ ಮದುವೆಯಾಗಲು ಅವರು ನಿರ್ಧರಿಸಿದ್ದಾರೆ.
ಶಾಹೀನ್ ಪ್ರಸ್ತುತ ನಡೆಯುತ್ತಿರುವ ಏಷ್ಯಾ ಕಪ್ 2023 ರ ಸೂಪರ್ 4 ಪಂದ್ಯಗಳಿಗಾಗಿ ಶ್ರೀಲಂಕಾದಲ್ಲಿದ್ದಾರೆ. 23ರ ಹರೆಯದ ವೇಗಿ ಪ್ರಸ್ತುತ ಏಷ್ಯಾಕಪ್ 2023ರಲ್ಲಿ 3 ಪಂದ್ಯಗಳಲ್ಲಿ 7 ವಿಕೆಟ್ ಪಡೆದು ಜಂಟಿ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಅವರು 35 ರನ್ಗಳಿಗೆ 4 ವಿಕೆಟ್ ಪಡೆದು ಭಾರತವನ್ನು 266 ರನ್ಗಳಿಗೆ ನಿಯಂತ್ರಿಸಲು ನೆರವಾಗಿದ್ದರು.
ಇದನ್ನೂ ಓದಿ : BWF World Championships | ಲಕ್ಷ್ಯ ಸೇನ್ ಮಣಿಸಿದ ಪ್ರಯಣ್ ಕ್ವಾರ್ಟರ್‌ಫೈನಲ್ಸ್‌ಗೆ ಎಂಟ್ರಿ
ಭಾರತ ಪಾಕಿಸ್ತಾನ ಪಂದ್ಯಕ್ಕೆ ಮೀಸಲು ದಿನ
ನವದೆಹಲಿ: ಭಾರತ ಮತ್ತು ಪಾಕಿಸ್ತಾನ (Ind vs Pak ನಡುವಿನ ಏಷ್ಯಾ ಕಪ್ ಸೂಪರ್ 4 (Asia Cup 2023) ಪಂದ್ಯಕ್ಕೆ ಮೀಸಲು ದಿನವಿಲ್ಲ ಎಂಬ ಹಲವು ವರದಿಗಳನ್ನು ಏಷ್ಯಾ ಕ್ರಿಕೆಟ್ ಕೌನ್ಸಿಲ್ (Asia Crikcet Council) ತಳ್ಳಿ ಹಾಕಿದೆ. ಇದೀಗ ಮೀಸಲು ದಿನ ಇರುತ್ತದೆ ಎಂಬುದನ್ನು ದೃಢಪಡಿಸಿದೆ. ಹವಾಮಾನ ಇಲಾಖೆಯ ಪ್ರಕಾರ, ಕೊಲಂಬೋದಲ್ಲಿ ಮುಂದಿನ 10 ದಿನಗಳವರೆಗೆ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಭಾರತ ಮತ್ತು ಪಾಕ್ ನಡುವಿನ ಪಂದ್ಯ ಭಾನುವಾರ (ಸೆಪ್ಟೆಂಬರ್ 10) ನಡೆಯಲಿದೆ. ಆದರೆ ಭಾರತ ಮತ್ತು ಪಾಕಿಸ್ತಾನ ನಡುವಿನ ಏಷ್ಯಾ ಕಪ್ ಗ್ರೂಪ್ ಹಂತದ ಪಂದ್ಯದಲ್ಲಿ ಸಂಭವಿಸಿದಂತೆ, ಸೂಪರ್ 4 ಮುಖಾಮುಖಿಯಲ್ಲಿ ಮಳೆಯಾಗುವ (Rain) ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಟಿಕೆಟ್ ಹೊಂದಿರುವವರು ಹಾಗೂ ನೇರ ಪ್ರಸಾರ ವೀಕ್ಷಣೆಗೆ ಕಾಯುತ್ತಿದ್ದವರು ಬೇಸರಕ್ಕೆ ಒಳಗಾಗಿದ್ದರು. ಅವರೆಲ್ಲರಿಗೂ ಎಸಿಸಿ ಪರಿಹಾರ ಕಲ್ಪಿಸಿದೆ.
ಮೀಸಲು ದಿನದಲ್ಲಿ ಎರಡೂ ತಂಡಗಳು ಹಿಂದಿನ ದಿನ ಬಿಟ್ಟುಹೋದ ನಿಂತಿರುವ ಆಟವನ್ನೇ ಮುಂದುವರಿಸಬಹುದು. ಸಮಾ ಟಿವಿ ಪ್ರಕಾರ, ಏಷ್ಯಾ ಕಪ್ 2023 ರ ಫೈನಲ್ಗೂ ಮೀಸಲು ದಿನವೂ ಇರುತ್ತದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ ಈ ಬಗ್ಗೆ ಸ್ಪಷ್ಟನೆ ನೀಡಿದೆ ಎನ್ನಲಾಗಿದೆ. ಆದರೆ, ಅಭಿಮಾನಿಗಳು ಮೀಸಲು ದಿನಕ್ಕೂ ಟಿಕೆಟ್ ಪ್ರತಿಗಳನ್ನು ಇಟ್ಟುಕೊಳ್ಳಬೇಕು ಎಂದು ಪಿಸಿಬಿ ಮಾಹಿತಿ ನೀಡಿದೆ.
ಶ್ರೀಲಂಕಾದಲ್ಲಿ ಆಯೋಜನೆಗೊಂಡಿರುವ ಹಲವು ಪಂದ್ಯಗಳು ಮಳೆಯಿಂದಾಗಿ ರದ್ದುಗೊಂಡಿವೆ. ಕ್ಯಾಂಡಿಯ ಪಲ್ಲೆಕೆಲೆ ಹಾಗೂ ಕೊಲೊಂಬೊದ ಪ್ರೇಮದಾಸ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಈ ಪಂದ್ಯಗಳು ಆಯೋಜನೆಗೊಂಡಿದ್ದವು. ಆದರೆ, ಮಾನ್ಸೂನ್ ಮಾರುತದ ಕಾರಣಕ್ಕೆ ಅಲ್ಲೆಲ್ಲ ಮಳೆ ಬರುತ್ತಿದೆ. ಇದರು ಪಂದ್ಯಕ್ಕೆ ಅಡಚಣೆ ಉಂಟು ಮಾಡುತ್ತಿವೆ.