ಬೆಂಗಳೂರು: ನ್ಯೂಜಿಲ್ಯಾಂಡ್(PAK vs NZ) ವಿರುದ್ಧದ ಪಂದ್ಯದಲ್ಲಿ ದುಬಾರಿ ಮೊತ್ತ ಬಿಟ್ಟುಕೊಡುವ ಮೂಲಕ ಪಾಕ್ ತಂಡದ ಘಾತಕ ವೇಗಿ ಶಾಹೀನ್ ಅಫ್ರಿದಿ ಅನಗತ್ಯ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದಿದ್ದಾರೆ. ಪಾಕ್ ಪರ ವಿಶ್ವಕಪ್ ಟೂರ್ನಿಯಲ್ಲಿ ಅತ್ಯಧಿಕ ರನ್ ಬಿಟ್ಟುಕೊಟ್ಟ ಬೌಲರ್ ಎಂಬ ಕೆಟ್ಟ ದಾಖಲೆ ಬರೆದರು.
ಶನಿವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ದುಬಾರಿ ಬೌಲಿಂಗ್ ಪ್ರದರ್ಶನ ನೀಡಿದ ಅಫ್ರಿದಿ, 10 ಓವರ್ ಬೌಲಿಂಗ್ ನಡೆಸಿ ಬರೋಬ್ಬರಿ 90 ರನ್ ಬಿಟ್ಟುಕೊಟ್ಟರು. ಅಲ್ಲದೆ ಒಂದೇ ಒಂದು ವಿಕೆಟ್ ಕೂಡ ಕೀಳಲು ಸಾಧ್ಯವಾಗಲಿಲ್ಲ. ಈ ಮೂಲಕ ವಿಶ್ವಕಪ್ ಟೂರ್ನಿಯಲ್ಲಿ ಪಾಕ್ ಪರ ಅತಿ ಹೆಚ್ಚು ರನ್ ನೀಡಿದ ಬೌಲರ್ ಎಂಬ ಅನಗತ್ಯ ದಾಖಲೆಯನ್ನು ತಮ್ಮ ಹೆಸರಿಗೆ ಸೇರಿಸಿಕೊಂಡರು.
ಕಿವೀಸ್ ಬ್ಯಾಟಿಂಗ್ ಇನಿಂಗ್ಸ್‌ನ ಅಂತಿಮ ಓವರ್ ಎಸೆದ ಅಫ್ರಿದಿಗೆ ಮಿಚೆಲ್ ಸ್ಯಾಂಟ್ನರ್ ಸಿಕ್ಸರ್ ಸಿಡಿಸಿದರು. ಈ ವೇಳೆ ಈ ಕಟ್ಟ ದಾಖಲೆ ಅಫ್ರಿದಿ ಹೆಸರಿಗೆ ಅಂಟಿತು. ಸಿಕ್ಸರ್ ಬಾರಿಸದ ಹೋಗಿದ್ದರೆ ಇದೇ ಪಂದ್ಯದಲ್ಲಿ 85 ರನ್ ನೀಡಿದ್ದ ಹ್ಯಾರಿಸ್ ರೌಫ್ ಅವರ ಹಸರಿನಲ್ಲಿ ಈ ಕೆಟ್ಟ ದಾಖಲೆ ದಾಖಲಾಗುತ್ತಿತ್ತು. ಅಫ್ರಿದಿ ಓವರ್ನಲ್ಲಿ ಕಿವೀಸ್ ಆಟಗಾರರು ಒಟ್ಟು 11 ಬೌಂಡರಿ ಹಾಗೂ 2 ಸಿಕ್ಸರ್‌ಗಳನ್ನು ಸಿಡಿಸಿದ್ದರು. ಮಳೆಯಿಂದ ಅಡಚಣೆಯಾದ ಈ ಪಂದ್ಯವನ್ನು ಪಾಕಿಸ್ತಾನ ಡಕ್ವರ್ತ್ ಲೂಯಿಸ್ ನಿಯಮದ ಅನುಸಾರ 21 ರನ್ಗಳಿಂದ ಗೆದ್ದು ಸೆಮಿ ಆಸೆಯನ್ನು ಜೀವಂತವಿರಿಸಿತು.
ಇದನ್ನೂ ಓದಿ PAK vs NZ: ಪಾಕಿಸ್ತಾನವನ್ನು ಕಾಪಾಡಿದ ಮಳೆರಾಯ; ಕಿವೀಸ್ ವಿರುದ್ಧ 21 ರನ್ ಗೆಲುವು
ಪಾಕ್ ವಿಶ್ವಕಪ್ನಲ್ಲಿ ದುಬಾರಿ ಮೊತ್ತ ನೀಡಿದ ಬೌಲರ್ಗಳು
ಶಾಹೀನ್ ಶಾ ಅಫ್ರಿದಿ, 90 ರನ್. ನ್ಯೂಜಿಲ್ಯಾಂಡ್ ವಿರುದ್ಧ
ಹ್ಯಾರಿಸ್ ರೌಫ್, ಒಂದು ವಿಕೆಟ್ಗೆ 85 ರನ್. ನ್ಯೂಜಿಲ್ಯಾಂಡ್ ವಿರುದ್ಧ
ಹಸನ್ ಅಲಿ. ಒಂದು ವಿಕೆಟ್ಗೆ 84 ರನ್. ಭಾರತ ವಿರುದ್ಧ
ಹ್ಯಾರಿಸ್ ರೌಫ್ 3 ವಿಕೆಟ್ಗೆ 83 ರನ್. ಆಸ್ಟ್ರೇಲಿಯಾ ವಿರುದ್ಧ
ದುಬಾರಿ ಮೊತ್ತದ ಅನಗತ್ಯ ದಾಖಲೆ ಲೀಡೆ ಹೆಸರಿನಲ್ಲಿದೆ
ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಬೌಲಿಂಗ್ ನಡೆಸಿದ ಕೆಟ್ಟ ದಾಖಲೆ ನೆದರ್ಲೆಂಡ್ಸ್(AUS vs NED) ತಂಡದ ಆಟಗಾರ ಬಾಸ್ ಡಿ ಲೀಡೆ(bas de leede) ಹೆಸರಿನಲ್ಲಿದೆ. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಲೀಡೆ ತಮ್ಮ 10 ಓವರ್‌ಗಳಲ್ಲಿ 115 ರನ್‌ಗಳನ್ನು ಬಿಟ್ಟುಕೊಟ್ಟು ಈ ಕೆಟ್ಟ ದಾಖಲೆಯನ್ನು ತಮ್ಮ ಹೆಸರಿಗೆ ಬರೆದಿದ್ದರು.
ಇದಕ್ಕೂ ಮುನ್ನ ಈ ದಾಖಲೆ ಮಿಕ್ ಲೆವಿಸ್ ಹೆಸರಿನಲ್ಲಿತ್ತು. 2006ರಲ್ಲಿ ಜೊಹಾನ್ಸ್‌ಬರ್ಗ್‌ನಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವಣ ಪಂದ್ಯದಲ್ಲಿ ಆಸ್ಟ್ರೇಲಿಯಾದ ಮಿಕ್ ಲೆವಿಸ್ ಅವರು 10 ಓವರ್ಗೆ 113 ರನ್ ನೀಡಿದ್ದರು. ಮತ್ತು ಇದೇ ವರ್ಷ(2023) ಸೆಂಚುರಿಯನ್ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಆಸೀಸ್ನ ಆ್ಯಂಡ ಜಂಪಾ ಕೂಡ 113 ರನ್ ನೀಡಿದ್ದು ಇದುವರೆಗಿನ ಅತ್ಯಂತ ದುಬಾರಿ ರನ್ ನೀಡಿದ ದಾಖಲೆಯಾಗಿತ್ತು.
ಪಾಕಿಸ್ತಾನದ ವೇಗಿ ವಹಾಬ್ ರಿಯಾಜ್ ಅವರು ಈ ಸಾಧಕರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಅವರು 2016ರಲ್ಲಿ 10 ಓವರ್ ಎಸೆದು 110 ರನ್ ಬಿಟ್ಟುಕೊಟ್ಟಿದ್ದರು. 5ನೇ ಸ್ಥಾನದಲ್ಲಿ ಅಫಘಾನಿಸ್ತಾನದ ರಶೀದ್ ಖಾನ್ ಕಾಣಿಸಿಕೊಂಡಿದ್ದಾರೆ.