ಕೋಲ್ಕೊತ್ತಾ: ಪಾಕಿಸ್ತಾನ ಕ್ರಿಕೆಟ್ ತಂಡದ ಪ್ರಮುಖ ವೇಗಿ ಶಾಹೀನ್ ಅಫ್ರಿದಿ(Shaheen Afridi) ಅವರು ಏಕದಿನ ಕ್ರಿಕೆಟ್‌ನಲ್ಲಿ ನೂತನ ಮೈಲಿಗಲ್ಲೊಂದನ್ನು ತಲುಪಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 100 ವಿಕೆಟ್‌ಗಳನ್ನು ಪೂರೈಸಿದ ವಿಶ್ವದ 5ನೇ ಹಾಗೂ ವೇಗದ ಬೌಲರ್‌ಗಳ ಪೈಕಿ ಮೊದಲ ಕ್ರಿಕೆಟಿಗ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಕೊಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ ವಿರುದ್ಧದ ವಿಶ್ವಕಪ್ನ ಲೀಗ್ ಪಂದ್ಯದಲ್ಲಿ ಶಾಹೀನ್ ಅಫ್ರಿದಿ ಈ ಸಾಧನೆ ಮಾಡಿದರು. ಪಂದ್ಯದ ಮೊದಲ ಓವರ್‌ನ ಐದನೇ ಎಸೆತದಲ್ಲಿ ತಂಜಿದ್ ವಿಕೆಟ್ ಪಡೆಯುವ ಮೂಲಕ ಮೂಲಕ ಈ ದಾಖಲೆ ನಿರ್ಮಿಸಿದರು. 51 ಪಂದ್ಯದಲ್ಲಿ ಈ ಸಾಧನೆ ಮಾಡಿದರು.
🚨 RECORD ALERT 🚨@iShaheenAfridi becomes the fastest pacer to 1️⃣0️⃣0️⃣ ODI wickets in his 51st game! 🦅#PAKvBAN | #CWC23 | #DattKePakistani pic.twitter.com/ergzociYeu
— Pakistan Cricket (@TheRealPCB) October 31, 2023
ವೇಗದ ಬೌಲರ್‌ಗಳ ಸಾಲಿನಲ್ಲಿ ಅತ್ಯಂತ ವೇಗವಾಗಿ 100 ವಿಕೆಟ್ ಪಡೆದ ಮೊದಲ ಬೌಲರ್ ಎನ್ನುವ ದಾಖಲೆ ಶಾಹೀನ್ ಅಫ್ರಿದಿ ಪಾಲಾಗಿದೆ. ಈ ಹಿಂದೆ ಈ ದಾಖಲೆ ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ ಹೆಸರಿನಲ್ಲಿತ್ತು. ಸ್ಟಾರ್ಕ್ 52 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದರು. 90ರ ದಶಕದ ಘಾತಕ ವೇಗಿ ಶೇನ್ ಬಾಂಡ್ ಹಾಗೂ ಬಾಂಗ್ಲಾದದ ಮುಸ್ತಫಿಜುರ್ ರೆಹಮಾನ್ 54 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದರು. ಆಸೀಸ್ನ ಮಾಜಿ ಆಟಗಾರ ಬ್ರೇಟ್ ಲೀ 55 ಪಂದ್ಯಗಳಲ್ಲಿ ಈ ದಾಖಲೆ ನಿರ್ಮಿಸಿದ್ದರು.
ರಶೀದ್ ಖಾನ್ಗೆ ಅಗ್ರಸ್ಥಾನ
ಅತಿ ಕಡಿಮೆ ಎಸೆತಗಳಿಂದ ಏಕದಿನ ಕ್ರಿಕೆಟ್‌ನಲ್ಲಿ 100 ವಿಕೆಟ್ ಕಿತ್ತ ದಾಖಲೆ ಅಫಘಾನಿಸ್ತಾನದ ಸ್ಪಿನ್ನರ್ ರಶೀದ್ ಖಾನ್ ಹೆಸರಿನಲ್ಲಿದೆ. ಅವರು 2139 ಬೌಲ್ ಎಸೆದು ಈ ಗುರಿ ತಲುಪಿದ್ದಾರೆ. ದ್ವಿತೀಯ ಸ್ಥಾನ ನೇಪಾಳ ಕ್ರಿಕೆಟಿಗ ಸಂದೀಪ್ ಲಮಿಚ್ಚಾನೆ ಹೆಸರಿನಲ್ಲಿದೆ. ಲಮಿಚ್ಚಾನೆ 2225 ಎಸೆತಗಳಿಂದ ಈ ದಾಖಲೆ ಬರೆದಿದ್ದಾರೆ.
ಆಸ್ಟ್ರೇಲಿಯಾದ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ ಅವರು 2452 ಎಸೆತಗಳಿಂದ ಈ ಗುರಿ ತಲುಪಿ ಮೂರನೇ ಸ್ಥಾನದಲ್ಲಿದ್ದಾರೆ. ಶಾಹೀನ್ ಅಫ್ರಿದಿ 2526 ಎಸೆತ ಎಸೆದು 5ನೇ ಸ್ಥಾನದಲ್ಲಿದ್ದಾರೆ. ಬಾಂಗ್ಲಾದ ಮುಸ್ತಫಿಜುರ್ ರೆಹಮಾನ್ 2686 ಎಸೆತದಲ್ಲಿ ಈ ಮೈಲಿಗಲ್ಲು ತಲುಪಿದ್ದರು.
ಇದನ್ನೂ ಓದಿ ಪಿಸಿಬಿಗೆ ಚಳ್ಳೆ ಹಣ್ಣು ತಿನ್ನಿಸಿ ಬಿರಿಯಾನಿ, ಕಬಾಬ್ ತಿಂದ ಪಾಕ್ ಆಟಗಾರರು; ಆದರೂ ಸಿಕ್ಕಿಬಿದ್ದರು
ಶಾಹೀನ್ ಅಫ್ರಿದಿ 100 ವಿಕೆಟ್ ಪೂರೈಸುವ ಮೂಲಕ ಪಾಕಿಸ್ತಾನದ ಮಾಜಿ ಸ್ಪಿನ್ನರ್ ಸಕ್ಲೇನ್ ಮುಷ್ತಾಕ್ ಅವರ 26 ವರ್ಷಗಳ ಹಿಂದಿನ ದಾಖಲೆಯನ್ನು ಮುರಿದಿದ್ದಾರೆ. ಇದುವರೆಗೆ ಪಾಕ್ ಪರ ಏಕದಿನದಲ್ಲಿ ವೇಗವಾಗಿ 100 ವಿಕೆಟ್ ಪಡೆದ ದಾಖಲೆ ಸಕ್ಲೇನ್ ಮುಷ್ತಾಕ್ ಹೆಸರಿನಲ್ಲಿತ್ತು. ಅವರು 1997 ರಂದು ಗ್ವಾಲಿಯರ್‌ನಲ್ಲಿ ನಡೆದಿದ್ದ ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಈ ದಾಖಲೆಯನ್ನು ಬರೆದಿದ್ದರು.
2018ರಲ್ಲಿ ಅಫಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಟೆಸ್ಟ್ ಕ್ರಿಕೆಟ್‌ನಲ್ಲಿ 105 ವಿಕೆಟ್, ಟಿ20 ಮಾದರಿಯಲ್ಲಿ 64 ವಿಕೆಟ್‌ಗಳನ್ನು ಪಡೆದಿದ್ದಾರೆ.