ಅಹಮದಾಬಾದ್: ಇನ್ನೇನು ಕೆಲವೇ ಗಂಟೆಗಳಲ್ಲಿ ಸಾಂದ್ರದಾಯಿಕ ಬದ್ಧ ಎದುರಾಳಿಗಳಾದ ಭಾರತ(IND vs PAK) ಮತ್ತು ಪಾಕಿಸ್ತಾನ ತಂಡಗಳು ಸೆಣಸಾಟ ನಡೆಸಲಿವೆ. ಈ ಪಂದ್ಯ ಆರಂಭಕ್ಕೂ ಮುನ್ನವೇ ಪಾಕ್ ತಂಡದ ಪ್ರಮುಖ ವೇಗಿ ಶಾಹೀನ್ ಅಫ್ರಿದಿ(Shaheen Afridi) ಧಿಮಾಕು ಮತ್ತು ದರ್ಪ ತೋರಿದ್ದಾರೆ.
ಇಂದು(ಶನಿವಾರ) ನಡೆಯುವ ಪಂದ್ಯಕ್ಕೆ ಪಾಕ್ ಆಟಗಾರರು ಬೆಳಗ್ಗೆ ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂಗೆ ಆಗಮಿಸಿದ ವೇಳೆ ಕ್ರಿಕೆಟ್ ಅಭಿಮಾನಿಯೊಬ್ಬರು ಪಾಕ್ ತಂಡದ ಶಾಹೀನ್ ಅಫ್ರಿದಿ ಬಳಿ ಸೆಲ್ಫಿ ತೆಗೆದುಕೊಳ್ಳುವಂತೆ ಮನವಿ ಮಾಡಿದರು. ಈ ವೇಳೆ ಅಫ್ರಿದಿ ತಾನು ಈಗ ಸೆಲ್ಫಿ ತೆಗೆದುಕೊಳ್ಳುವುದಿಲ್ಲ ಬದಲಾಗಿ ಭಾರತ ವಿರುದ್ಧ 5 ವಿಕೆಟ್ ಪಡೆದ ಬಳಿಕ ನಿಮ್ಮನ್ನು ಹುಡುಕಿಕೊಂಡು ಬಂದು ಸೆಲ್ಫಿ ಫೋಟೊ ತೆಗೆಸಿಕೊಳ್ಳುವೆ ಎಂದಿದ್ದಾರೆ.
ಸ್ಟೇಡಿಯಂ ಬಳಿ ಬಸ್ನಿಂದ ಕೆಳಗಿಳಿಯುತ್ತಿದ್ದ ಶಾಹೀನ್ ಅವರು ಸೆಲ್ಫಿ ನಿರಾಕರಿಸಿ ಹಿಂದಿಯಲ್ಲಿ ಜರೂರ್ ಸೆಲ್ಫಿ ಲೂಂಗಾ, ಬಟ್ ಫೈವ್ ವಿಕೆಟ್ ಲೆನೆಕೇ ಬಾದ್.(ಖಂಡಿತವಾಗಿಯೂ ಸೆಲ್ಫಿ ತೆಗೆದುಕೊಳ್ಳುವೆ. ಆದರೆ 5 ವಿಕೆಟ್ ಕಿತ್ತ ಬಳಿಕ) ಎಂದು ಹೇಳಿ ಟೀಮ್ ಇಂಡಿಯಾಕ್ಕೆ ಸವಾಲೆಸೆದಿದ್ದಾರೆ. ಅಲ್ಲದೆ ಅಭಿಮಾನಿಗಳ ಮುಂದೆ ಧಿಮಾಕು ತೋರಿದ್ದಾರೆ.
ಟಾರ್ಗೆಟ್ ಶಾಹೀನ್ ಅಫ್ರಿದಿ
ಎರಡೂ ಕಡೆ ಸ್ವಿಂಗ್ ಮಾಡಬಲ್ಲ, ಹೊಸ ಚೆಂಡಿನಲ್ಲಿ ಅಪಾಯಕಾರಿಯಾದ ಶಾಹೀನ್ ಅಫ್ರಿದಿ ಅವರಿಗೆ ಹೆದರಿಕೊಂಡು ಆಡಬಾರದು. ಆರಂಭದಿಂದಲೇ ಅವರ ಎಸೆತಕ್ಕೆ ಮುನ್ನುಗ್ಗಿ ಬಾರಿಸಬೇಕು. ಶಾಹೀನ್ ಅವರ ದೊಡ್ಡ ವಿಕ್ನೆಸ್ ಎಂದರೆ, ಆರಂಭದಲ್ಲೇ ಅವರಿಗೆ ಬಾರಿಸಿದರೆ ಗಲಿಬಿಲಿಯಾಗಿ ಸಂಪೂರ್ಣವಾಗಿ ಲಯ ಕಳೆದುಕೊಳ್ಳುತ್ತಾರೆ. ಒಂದೊಮ್ಮೆ ಅವರಿಗೆ ಹೆದರಿ ಆಡಿದರೆ ಇದನ್ನೇ ಅಸ್ತ್ರವಾಗಿ ಅವರು ಬಳಸಿಕೊಳ್ಳುತ್ತಾರೆ. ಆದ್ದರಿಂದ ಭಾರತದ ಆರಂಭಿಕ ಆಟಗಾರ ರೋಹಿತ್ ಮತ್ತು ಅವರ ಜತೆಗಾರನಾಗಿ ಆಡುವ ಬ್ಯಾಟರ್ ಮೈ ಚಳಿ ಬಿಟ್ಟು ಬ್ಯಾಟ್ ಬೀಸಬೇಕು.
ಇದನ್ನೂ ಓದಿ IND vs PAK: ಭಾರತ-ಪಾಕ್ ಪಂದ್ಯಕ್ಕೆ ಗುಟ್ಕಾ, ಪಾನ್ ಮಸಾಲ ನಿಷೇಧ
ಪಾಕಿಗಳು ಅಪಾಯಕಾರಿ
ಪ್ರಚಂಡ ಬ್ಯಾಟಿಂಗ್ ಫಾರ್ಮ್ನಲ್ಲಿರುವ ಮೊಹಮ್ಮದ್ ರಿಜ್ವಾನ್, ಚೊಚ್ಚಲ ಪಂದ್ಯದಲ್ಲೇ ಶತಕ ಬಾರಿಸಿ ಮಿಂಚಿದ ಅಬ್ದುಲ್ಲ ಶಫೀಕ್, ಇಮಾಮ್ ಉಲ್ ಹಕ್, ಬಾಬರ್ ಅಜಂ, ಆಲ್‌ರೌಂಡರ್ ಶಾದಾಬ್ ಖಾನ್, ಘಾತಕ ವೇಗಿ ಶಾಹೀನ್ ಅಫ್ರಿದಿ, ಹ್ಯಾರಿಸ್ ರವೂಫ್ ಅವರೆಲ್ಲ ಎದುರಾಳಿಗೆ ಆತಂಕ ತಂದೊಡ್ಡಬಲ್ಲರು. ಆದರೆ ನಮ್ಮ ರೋಹಿತ್, ಕೊಹ್ಲಿ, ರಾಹುಲ್, ಪಾಂಡ್ಯ, ಬುಮ್ರಾ, ಜಡೇಜಾ ಅವರೆಲ್ಲ ಇದನ್ನು ಮೆಟ್ಟಿ ನಿಲ್ಲಬಲ್ಲರೆಂಬ ವಿಶ್ವಾಸ ನಮ್ಮವರದ್ದು.
ನವರಾತ್ರಿ ಆರಂಭದ ಮುನ್ನ ದಿನ ನಡೆಯುವ ಈ ಪಂದ್ಯದಲ್ಲಿ ಭಾರತ ತಂಡ ಪಾಕ್ ಪಡೆಯನ್ನು ಸದೆಬಡಿದು ಎರಡು ವಾರಗಳ ಮುಂಚಿತವಾಗಿಯೇ ವಿಜಯದಶಮಿ ಸಂಭ್ರಮಾಚರಣೆ ಮಾಡಲಿ ಎನ್ನುವುದು ಶತಕೋಟಿ ಭಾರತೀಯರ ಆಶಯವಾಗಿದೆ. ಆದರೆ ಪಾಕ್ ಸವಾಲನ್ನು ಅಷ್ಟು ಹಗುರವಾಗಿ ಪರಿಣಿಸಬಾರದು. ಏಕೆಂದರೆ ಇತ್ತೀಚಿನ ಕೆಲ ವರ್ಷಗಳಿಂದ ಪಾಕ್ ಆಟಗಾರರು ಭಾರತ ವಿರುದ್ಧ ಒತ್ತಡವನ್ನು ನಿಭಾಯಿಸಿ ಆಡುವ ಕಲೆಯನ್ನು ಮನಗಂಡಿದ್ದಾರೆ.