ಕರಾಚಿ: ಮುಂದಿನ ವರ್ಷ ಪಾಕಿಸ್ತಾನ ಆತಿಥ್ಯದಲ್ಲಿ ನಡೆಯುವ ಚಾಂಪಿಯನ್ಸ್ ಟ್ರೋಫಿ(Champions Trophy 2025) ಟೂರ್ನಿಗೆ ಭಾರತ ತಂಡ ಪಾಕಿಸ್ತಾನಕ್ಕೆ ಹೋಗಲಿದೆಯಾ?, ಭಾರತ ಪಂದ್ಯಗಳು ತಟಸ್ಥ ತಾಣದಲ್ಲಿ ನಡೆಯಲಿದೆಯಾ? ಎಂದು ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರ ಶಾಹಿದ್ ಅಫ್ರಿದಿ(Shahid Afridi) ಅವರು ವಿರಾಟ್ ಕೊಹ್ಲಿ(Virat Kohli) ಕುರಿತು ಬಗ್ಗೆ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ.
ಭಾರತ ತಂಡವನ್ನು ಹೇಗಾದರೂ ಪಾಕಿಗೆ ಕರೆತರಲು ಶತ ಪ್ರಯತ್ನ ಮಾಡುತ್ತಿದೆ. ಜತೆಗೆ ಕೆಲ ಮಾಜಿ ಆಟಗಾರರು ಭಾರತೀಯ ಆಟಗಾರರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುವ ಮೂಲಕ ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ, ಇದೀಗ ಈ ಸಾಲಿಗೆ ಅಫ್ರಿದಿ ಕೂಡ ಸೇರಿಕೊಂಡಿದ್ದಾರೆ. ಕೊಹ್ಲಿ ಬಗ್ಗೆ ಮುಕ್ತ ಕಂಠದಿಂದ ಹೊಗಳಿದ್ದಾರೆ.
ಇದನ್ನೂ ಓದಿ Champions Trophy 2025: ಚಾಂಪಿಯನ್ಸ್ ಟ್ರೋಫಿ ಹೈಬ್ರಿಡ್ ಮಾದರಿಗೆ ಒತ್ತಾಯಿಸಿದ ಬಿಸಿಸಿಐ
ಹೌದು, ಸಂರ್ದಶನವೊಂದರಲ್ಲಿ ಮಾತನಾಡಿದ ಅಫ್ರಿದಿ, ‘ಸಚಿನ್ ತೆಂಡೂಲ್ಕರ್ ಅವರಿಗೆ ಪಾಕಿಸ್ತಾನದಲ್ಲಿ ಇರುವ ಅಭಿಮಾನಿಗಳಂತೆ ವಿರಾಟ್ ಕೊಹ್ಲಿಗೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಈ ವಿಚಾರವನ್ನು ನಾನು ಮತ್ತೆ ಹೇಳಬೇಕೆಂದಿಲ್ಲ. ಏಕೆಂದರೆ ಈಗಾಗಲೇ ಕೊಹ್ಲಿ ಆಟವನ್ನು ನೋಡಲು ಪಾಕ್ ಅಭಿಮಾನಿಗಳು ಸ್ಟ್ರೇಡಿಯಂನಲ್ಲಿ ಕಾಣಿಸಿಕೊಂಡ ಹಲವು ನಿದರ್ಶನಗಳಿವೆ. ಕೊಹ್ಲಿ ಚಾಂಪಿಯನ್ಸ್ ಟ್ರೋಫಿ ಆಡಲು ನಮ್ಮ ದೇಶಕ್ಕೆ ಬರಬೇಕು ಎನ್ನುವುದು ನನ್ನ ಹಾಗು ಅವರ ಅಭಿಮಾನಿಗಳ ಬಯಕೆಯಾಗಿದೆ” ಎಂದು ಹೇಳಿದರು.
“ನಾವು ನೀಡುವ ಆತಿಥ್ಯದಿಂದ ಭಾರತದ ಆತಿಥ್ಯವನ್ನೇ ಕೊಹ್ಲಿ ಮರೆಯಬೇಕು. ಅಷ್ಟರಮಟ್ಟಿಗೆ ನಾವು ಅವರನ್ನು ನೋಡಿಕೊಳ್ಳುತ್ತೇವೆ. ವಿರಾಟ್ ಯಾವಾಗ ಪಾಕಿಸ್ತಾನಕ್ಕೆ ಬರುತ್ತಾರೆ ಎಂದು ಇಲ್ಲಿನ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ” ಎಂದು ಹೇಳಿದ್ದಾರೆ.
ನವೆಂಬರ್ 2008ರ ಮುಂಬೈ ಭಯೋತ್ಪಾದಕ ದಾಳಿಯಲ್ಲಿ 150 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ ನಂತರ ಭಾರತವು ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಕ್ರಿಕೆಟ್ ಆಡಿಲ್ಲ. ಜೂನ್-ಜುಲೈ 2008 ರಲ್ಲಿ ಏಷ್ಯಾ ಕಪ್ ಸಮಯದಲ್ಲಿ ಭಾರತೀಯ ಕ್ರಿಕೆಟ್ ತಂಡವು ಕೊನೆಯ ಬಾರಿಗೆ ಪಾಕಿಸ್ತಾನಕ್ಕೆ ಪ್ರಯಾಣಿಸಿತ್ತು. ಇದಾದ ಬಳಿಕ ಪಾಕ್ಗೆ ಭಾರತ ತಂಡ ಕಾಲಿಟ್ಟಿಲ್ಲ.
ಭಾರತದ ಪಂದ್ಯಗಳು ಮಾತ್ರ ಸಾಗರೋತ್ತರ ತಟಸ್ಥ ಸ್ಥಳದಲ್ಲಿ ನಡೆಸುವಂತೆ ಬಿಸಿಸಿಐ, ಐಸಿಸಿಗೆ ಮನವಿ ಸಲ್ಲಿಸಿದೆ ಎಂದು ಎಎನ್ಐ ವರದಿ ಮಾಡಿದೆ. ದುಬೈ ಅಥವಾ ಶ್ರೀಲಂಕಾದಲ್ಲಿ ಪಂದ್ಯಗಳನ್ನು ಆಯೋಜಿಸಲು ಬಿಸಿಸಿಐ ಐಸಿಸಿಗೆ ಕೇಳಿಕೊಂಡಿರುವುದಾಗಿ ವರದಿಯಾಗಿದೆ.
ಕಳೆದ ವರ್ಷ ಪಾಕ್ ಆತಿಥ್ಯದಲ್ಲಿಯೇ ನಡೆದಿದ್ದ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ತಂಡವು ಪಾಕ್ಗೆ ಪ್ರಯಾಣಿಸಲು ನಿರಾಕರಿಸಿದ ಕಾರಣ, ಟೂರ್ನಿಯನ್ನು ಹೈಬ್ರಿಡ್(champions trophy hybrid model) ಮಾದರಿಯಲ್ಲಿ ಆಯೋಜಿಸಲಾಯಿತ್ತು. ಕೇವಲ ನಾಲ್ಕು ಪಂದ್ಯಗಳನ್ನು ಪಾಕಿಸ್ತಾನದಲ್ಲಿ ನಡೆಸಿ ಉಳಿದ ಪಂದ್ಯಗಳು ಶ್ರೀಲಂಕಾದಲ್ಲಿ ನಡೆದಿದ್ದವು. ಭಾರತ ಎಲ್ಲ ಪಂದ್ಯಗಳನ್ನು ಲಂಕಾದಲ್ಲಿ ಆಡಿತ್ತು. ಇದೀಗ ಚಾಂಪಿಯನ್ಸ್ ಟ್ರೋಫಿಯನ್ನೂ ಕೂಡ ಹೈಬ್ರಿಡ್ ಮಾದರಿಯಲ್ಲಿ ನಡೆಸಿ ಭಾರತದ ಪಂದ್ಯಗಳನ್ನು ಪಾಕ್ನಿಂದ ಹೊರಗೆ ನಡೆಸುವಂತೆ ಐಸಿಸಿಗೆ ಬಿಸಿಸಿಐ ಕೇಳಿಕೊಂಡಿರುವುದಾಗಿ ವರದಿಯಾಗಿದೆ.