ಢಾಕಾ: ಬಾಂಗ್ಲಾದೇಶದ ಕ್ರಿಕೆಟ್ ತಂಡದ ಹಿರಿಯ ಆಲ್ರೌಂಡರ್ ಶಕಿಬ್ ಅಲ್ ಹಸನ್(Shakib Al Hasan) ತಾಳ್ಮೆ ಕಳೆದುಕೊಂಡು ಅಭಿಮಾನಿಗೆ ಕ್ಯಾಪ್ನಿಂದ ಥಳಿಸಿದ ಘಟನೆ ಬಾಂಗ್ಲಾದ ಚಟ್ಟೋಗ್ರಾಮ್‌ನಲ್ಲಿ ನಡೆದಿದೆ.
ಚಟ್ಟೋಗ್ರಾಮ್‌ನ ಜಹುರ್ ಅಹ್ಮದ್ ಚೌಧರಿ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಗೆದ್ದ ಬಳಿಕ ಶಕಿಬ್ ಅಲ್ ಹಸನ್ ಜಾಹೀರಾತು ಪ್ರಚಾರದ ಕಾರ್ಯಕ್ರಮವೊಂದಕ್ಕೆ ತೆರಳಿದ್ದಾರೆ. ಈ ವೇಳೆ ಶಕಿಬ್ ಸಾಗುವ ಮಾರ್ಗದಲ್ಲಿ ಅನೇಕ ಕ್ರೀಡಾಭಿಮಾನಿಗಳು ಅವರೊಂದಿಗೆ ಫೋಟೋ ತೆಗೆಸಿಕೊಳ್ಳಲು ಮುಂದಾಗಿದ್ದಾರೆ. ಅಭಿಮಾನಿಗಳ ಗುಂಪಿನ ಮಧ್ಯೆ ತಮ್ಮ ಕಾರಿನ ಬಳಿಗೆ ನಡೆದುಕೊಂಡು ಬಂದ ವೇಳೆ ಅಭಿಮಾನಿಯೊಬ್ಬ ಶಕಿಬ್ ಅವರ ತಲೆಯಿಂದ ಕ್ಯಾಪ್ ಎಳೆದಿದ್ದಾನೆ.
ಕ್ಯಾಪ್ ಎಳೆದು ದುರ್ವರ್ತನೆ ತೋರಿದ ಅಭಿಮಾನಿಯ ವಿರುದ್ಧ ಸಿಟ್ಟಿಗೆದ್ದ ಶಕಿಬ್ ಕ್ಯಾಪ್ ನಿಂದಲೇ ಒಂದೆರಡು ಬಾರಿ ಥಳಿಸಿದ್ದಾರೆ. ಶಕಿಬ್ ಅವರ ಈ ಹಲ್ಲೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ Shakib Al Hasan | ವೈಡ್ ನೀಡದಕ್ಕೆ ಅಂಪೈರ್ ಜತೆ ವಾಗ್ವಾದ ನಡೆಸಿದ ಶಕಿಬ್ ಅಲ್ ಹಸನ್; ವಿಡಿಯೊ ವೈರಲ್
ಶಕಿಬ್ ಅವರು ಈ ರೀತಿ ತಾಳ್ಮೆ ಕಳೆದುಕೊಂಡಿರುವುದು ಇದೇ ಮೊದಲೇನಲ್ಲ ಹಲವು ಬಾರಿ ಅವರು ಮೈದಾನದಲ್ಲಿ ತಮ್ಮ ಕೋಪವನ್ನು ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಅಂಪೈರ್ ಅವರೊಂದಿಗೆ ಶಕಿಬ್ ಹಲವು ಬಾರಿ ವಾಗ್ವಾದಕ್ಕೆ ಇಳಿದ ಹಲವು ನಿದರ್ಶನಗಳಿವೆ. ಕಳೆದ ಬಾರಿಯ ಬಾಂಗ್ಲಾ ಪ್ರೀಮಿಯರ್ ಲೀಗ್ನಲ್ಲಿ ಅಂಪೈರ್ ಅವರು ಔಟ್ ನೀಡಿಲ್ಲ ಎಂಬ ಕಾರಣಕ್ಕೆ ಶಬಿಕ್ ವಿಕೆಟ್ಗೆ ಕಾಲಿನಿಂದ ಒದ್ದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಅಭಿಮಾನಿಗೆ ಕ್ಯಾಪ್ನಿಂದ ಬಾರಿಸಿ ಸುದ್ದಿಯಾಗಿದ್ದಾರೆ.