ನ್ಯೂಯಾರ್ಕ್: ಕಳೆದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದ ಬಾಂಗ್ಲಾದೇಶ ತಂಡದ ನಾಯಕ ಶಕೀಬ್ ಅಲ್ ಹಸನ್(Shakib Al Hasan) ಅವರನ್ನು ಬಾಂಗ್ಲಾ ಕ್ರಿಕೆಟ್ ಮಂಡಳಿ ಕೈಬಿಟ್ಟರೆ ಉತ್ತಮ ಎಂದು ಹೇಳಿದ್ದ ಟೀಮ್ ಇಂಡಿಯಾದ ಮಾಜಿ ಆಟಗಾರ ವೀರೇಂದ್ರ ಸೆಹವಾಗ್ಗೆ(Virender Sehwag) ಶಕೀಬ್ ತಿರಿಗೇಟು ನೀಡಿದ್ದಾರೆ.
ಗುರುವಾರ ನಡೆದಿದ್ದ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ ನೆದರ್ಲೆಂಡ್ಸ್(Bangladesh vs Netherlands) ವಿರುದ್ಧ 25 ರನ್ ಅಂತರದ ಗೆಲುವು ಸಾಧಿಸಿ ಸೂಪರ್-8 ಪ್ರವೇಶವನ್ನು ಜೀವಂತವಾಗಿ ಇರಿಸಿದೆ. ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ ಶಕೀಬ್, ಯಾವುದೇ ತಂಡದ ಆಟಗಾರರು ಮೂರನೇ ವ್ಯಕ್ತಿಯ ಪ್ರಶ್ನೆಗಳಿಗೆ ಉತ್ತರಿಸಲು ಆಡುತ್ತಿಲ್ಲ. ತಮ್ಮ ತಂಡಕ್ಕೆ ಹೆಚ್ಚಿನ ಕೊಡುಗೆ ನೀಡುವ ಜವಾಬ್ದಾರಿಯಿಂದ ಅಷ್ಟೇ. ಅದು ಒಬ್ಬ ಬ್ಯಾಟ್ಸ್ಮನ್, ಬೌಲರ್ ಅಥವಾ ಫೀಲ್ಡರ್ ಆಗಿಯೂ ಇರಬಹುದು. ಕೊಡುಗೆ ನೀಡುವಲ್ಲಿ ವಿಫಲರಾದರೆ, ತಮ್ಮ ಫಾರ್ಮ್ ಬಗ್ಗೆ ಇಂತಹ ಟೀಕೆಗಳು ಕೇಳಿಬರುವುದು ಸಾಮಾನ್ಯ ಎಂದು ಹೇಳುವ ಮೂಲಕ ಸೆಹವಾಗ್ಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.
ಸೆಹವಾಗ್ ಹೇಳಿದ್ದೇನು?
ನನ್ನ ಪ್ರಕಾರ, ಶಕೀಬ್ ಅಲ್ ಹಸನ್ ಕ್ರಿಕೆಟ್ನಿಂದ ನಿವೃತ್ತಿ ಪಡೆಯುವುದೇ ಉತ್ತಮ. ಶಕೀಬ್ ಅವರನ್ನು ಬಾಂಗ್ಲಾ ಕ್ರಿಕೆಟ್ ಮಂಡಳಿ ಅಂದೇ ಕೈಬಿಡಬೇಕಿತ್ತು. ಅವರನ್ನು ಆಡಿಸುವ ಅವಶ್ಯಕತೆಯೇ ಇರಲಿಲ್ಲ ಎಂದು ಸೆಹವಾಗ್ ಲೇವಡಿ ಮಾಡಿದ್ದರು. ನೆದರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಶಕೀಬ್ ಅವರು ಅಜೇಯ 64 ರನ್ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರ ಈ ಮ್ಯಾಚ್ ವಿನ್ನಿಂಗ್ ಪ್ರದರ್ಶನಕ್ಕೆ ಪಂದ್ಯ ಶ್ರೇಷ್ಠ ಪ್ರಶಸ್ತಿಯೂ ಲಭಿಸಿತ್ತು.
ಬಾಂಗ್ಲಾದೇಶ ತಂಡ ‘ಸಿ’ ಗುಂಪಿನಲ್ಲಿ ಸದ್ಯ 4 ಅಂಕದೊಂದಿಗೆ 2ನೇ ಸ್ಥಾನಿಯಾಗಿದೆ. ಸೂಪರ್ 8 ಹಂತಕ್ಕೇರಲು ನೆಪಾಳ ವಿರುದ್ಧ ನಡೆಯುವ ಅಂತಿಮ ಲೀಗ್ ಪಂದ್ಯದಲ್ಲಿ ಗೆಲ್ಲಲೇ ಬೇಕು. ಒಂದು ವೇಳೆ ಬಾಂಗ್ಲಾದೇಶ ಈ ಪಂದ್ಯದಲ್ಲಿ ಸೋತು, ಶ್ರೀಲಂಕಾ ವಿರುದ್ಧ ನೆದರ್ಲೆಂಡ್ ಸೋತರೆ ಬಾಂಗ್ಲಾ ತಂಡವೇ ಸೂಪರ್ 8ಗೆ ಪ್ರವೇಶಿಸುತ್ತದೆ.
ಇದನ್ನೂ ಓದಿ T20 World Cup 2024: ಸೂಪರ್-8 ಪಂದ್ಯಕ್ಕೂ ಮುನ್ನವೇ ತವರಿಗೆ ಮರಳಲು ಸಿದ್ಧರಾದ ಟೀಮ್ ಇಂಡಿಯಾದ ಇಬ್ಬರು ಆಟಗಾರರು
ಟಿ20 ವಿಶ್ವಕಪ್ನಿಂದ ಹೊರಬಿದ್ದ ನ್ಯೂಜಿಲ್ಯಾಂಡ್
ಶುಕ್ರವಾರ ನಡೆದ ಟಿ20 ವಿಶ್ವಕಪ್ನ ‘ಸಿ’ ವಿಭಾಗದ ಪಂದ್ಯದಲ್ಲಿ ಅಫಘಾನಿಸ್ತಾನ(PNG vs AFG) ತಂಡ ಪಪುವಾ ನ್ಯೂ ಗಿನಿಯಾ ವಿರುದ್ಧ 7 ವಿಕೆಟ್ ಅಂತರದ ಗೆಲುವು ಸಾಧಿಸುವ ಮೂಲಕ ಸೂಪರ್-8 ಹಂತಕ್ಕೆ ಪ್ರವೇಶ ಪಡೆದಿದೆ. ಅಫಘಾನಿಸ್ತಾನ ಗೆಲುವಿನಿಂದ ನ್ಯೂಜಿಲ್ಯಾಂಡ್(New Zealand) ತಂಡ ಟೂರ್ನಿಯಿಂದ ಹೊರಬಿದ್ದಿತು.
ಇಲ್ಲಿನ ಟರೂಬದಲ್ಲಿರುವ ಬ್ರಿಯಾನ್ ಲಾರಾ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಪಪುವಾ ನ್ಯೂ ಗಿನಿಯಾ ತಂಡ ಫಜಲ್ಹಕ್ ಫಾರೂಕಿ ಮತ್ತು ನವೀನ್ ಉಲ್ ಹಕ್ ಅವರ ಘಾತಕ ದಾಳಿಗೆ ನಲುಗಿ 95 ರನ್ಗೆ ಸರ್ವಪತನ ಕಂಡಿತು. ಈ ಅಲ್ಪ ಮೊತ್ತವನ್ನು ಬೆನ್ನಟ್ಟಿದ ಅಫಘಾನಿಸ್ತಾನ 15.1 ಓವರ್ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು 101 ರನ್ ಬಾರಿಸಿ ಗೆಲುವು ದಾಖಲಿಸಿತು. ಅತ್ತ ಏಕದಿನ ಸೇರಿದಂತೆ ಕಳೆದ ಆರೂ ವಿಶ್ವಕಪ್ ಪಂದ್ಯಾವಳಿಗಳಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದ ನ್ಯೂಜಿಲ್ಯಾಂಡ್ ಈ ಬಾರಿ ಲೀಗ್ನಿಂದಲೇ ಹೊರಬಿದ್ದ ಅವಮಾನಕ್ಕೆ ಸಿಲುಕಿತು.