Site icon Vistara News

Shakib Al Hasan: ಬಾಂಗ್ಲಾ ತಂಡದ ನಾಯಕ ಶಕಿಬ್​ ವಿರುದ್ಧ ಕೊಲೆ ಪ್ರಕರಣ ದಾಖಲು

Shakib Al Hasan

Shakib Al Hasan: Shakib among 147 named in FIR for alleged murder during Bangladesh unrest

ಢಾಕಾ: ಬಾಂಗ್ಲಾದೇಶದಲ್ಲಿ ನಡೆದ ಹಿಂಸಾಚಾರದ ಸಮಯದಲ್ಲಿ ಕಿರಾಣಿ ಅಂಗಡಿಯ ಮಾಲಕರೊಬ್ಬರ ಹತ್ಯೆಗೆ ಸಂಬಂಧಿಸಿದಂತೆ ಮಾಜಿ ಪ್ರಧಾನಮಂತ್ರಿ ಶೇಖ್‌ ಹಸೀನಾ(Sheikh Hasina) ವಿರುದ್ಧ ಕೆಲ ದಿನಗಳ ಹಿಂದೆ ಕೊಲೆ ಪ್ರಕರಣ ದಾಖಲಿಸಲಾಗಿತ್ತು. ಇದೀಗ ಬಾಂಗ್ಲಾದೇಶ ಕ್ರಿಕೆಟ್ ತಂಡದ ನಾಯಕ ಶಕಿಬ್ ಅಲ್ ಹಸನ್(Shakib Al Hasan) ವಿರುದ್ಧವೂ ಕೊಲೆ ಪ್ರಕರಣದಲ್ಲಿ ಎಫ್ಐಆರ್ ದಾಖಲಾಗಿದೆ.

ಬಾಂಗ್ಲಾದೇಶದಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ನಡೆದ ಆಪಾದಿತ ಕೊಲೆಗೆ ಸಂಬಂಧಿಸಿದಂತೆ 147 ಜನರಲ್ಲಿ ಶಕಿಬ್​ ಕೂಡ ಸೇರಿದ್ದಾರೆ ಎಂದು ಢಾಕಾದ ಅಡಾಬೋರ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಇಎಸ್‌ಪಿಎನ್‌ ಕ್ರಿಕ್‌ ಇನ್‌ಫೋಗೆ ಖಚಿತಪಡಿಸಿದ್ದಾರೆ.

ರಫೀಕುಲ್ ಇಸ್ಲಾಂ ಎನ್ನುವ ವ್ಯಕ್ತಿ ಪ್ರಕರಣ ದಾಖಲಿಸಿದ್ದು, ಢಾಕಾದಲ್ಲಿ ನಡೆದ ಪ್ರತಿಭಟನೆಯ ವೇಳೆ ತನ್ನ ತಂದೆಯನ್ನು ಕೊಲೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಢಾಕಾದ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ಶಕಿಬ್​ ಅಲ್ ಹಸನ್ ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಶಕಿಬ್ ಮಾತ್ರವಲ್ಲ, ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಸೇರಿದಂತೆ ಒಟ್ಟು 500 ಮಂದಿಯನ್ನು ಇದರಲ್ಲಿ ಆರೋಪಿಗಳನ್ನಾಗಿ ಮಾಡಲಾಗಿದೆ.

ಮೀಸಲಾತಿಯ ವಿರುದ್ಧ ಸಾರ್ವಜನಿಕರು ದಂಗೆ ಎದ್ದ ಬಳಿಕ ಶೇಖ್ ಹಸೀನಾ ದೇಶದಿಂದ ಪಲಾಯನ ಮಾಡಿದ್ದರು. ಶಕೀಬ್ ಅಲ್ ಹಸನ್, ಶೇಖ್ ಹಸೀನಾಗೆ ಆತ್ಮೀಯರಾಗಿರುವ ಕಾರಣ ಅವರ ವಿರುದ್ಧ ಈ ಸುಳ್ಳು ಆರೋಪವನ್ನು ಕೂಡ ಮಾಡಿರುವ ಸಾಧ್ಯತೆ ಇದೆ. ಶಕಿಬ್ ಅಲ್ ಹಸನ್ ಅವರು ಕಳೆದ ಬಾಂಗ್ಲಾದೇಶ ಸಂಸತ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಶೇಖ್‌ ಹಸೀನಾ ಅವರ ಪಕ್ಷವಾದ ಅವಾಮಿ ಲೀಗ್ ಪಕ್ಷದ ಪರವಾಗಿ ಮಗುರಾ-1ರಲ್ಲಿ ಚುನಾವಣೆ ಸ್ಪರ್ಧಿಸಿದ್ದ ಶಕೀಬ್ ಅಲ್ ಹಸನ್ ಭರ್ಜರಿ ಗೆಲುವು ಸಾಧಿಸಿದ್ದರು. ಇದೀಗ ಕೊಲೆ ಕೇಸ್​ನಲ್ಲಿ ಅವರ ಹೆಸರು ಕೇಳಿ ಬಂದಿದೆ.

ಎಫ್‌ಐಆರ್​ನಲ್ಲಿ ಶಕೀಬ್ 27 ಅಥವಾ 28ನೇ ಆರೋಪಿ ಎಂದು ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಕ್ರಿಕ್‌ಇನ್ಫೋ ವರದಿ ಮಾಡಿದೆ. ಆದಾಗ್ಯೂ, ಶಕೀಬ್ ಆಗಸ್ಟ್ 5 ರಂದು ಬಾಂಗ್ಲಾದೇಶದಲ್ಲಿ ಇರಲಿಲ್ಲ, ಅಥವಾ ಹಸೀನಾ ರಾಜೀನಾಮೆಗೆ ಕಾರಣವಾದ ಪ್ರತಿಭಟನೆಯ ಸಮಯದಲ್ಲಿ ಶಕಿಬ್​ ಕೆನಡಾದಲ್ಲಿದ್ದರು. ಬ್ರಾಂಪ್ಟನ್‌ನಲ್ಲಿ ಆಡಲಾಗುತ್ತಿರುವ ಗ್ಲೋಬಲ್ ಟಿ 20 ಕೆನಡಾ ಲೀಗ್‌ನಲ್ಲಿ ಬಾಂಗ್ಲಾ ಟೈಗರ್ಸ್ ತಂಡವನ್ನು ಮುನ್ನಡೆಸುತ್ತಿದ್ದರು. ಅದಕ್ಕೂ ಮೊದಲು, ಶಕೀಬ್ ಮೇಜರ್ ಲೀಗ್ ಕ್ರಿಕೆಟ್‌ನಲ್ಲಿ ಭಾಗವಹಿಸಲು ಯುಎಸ್‌ಎಯಲ್ಲಿದ್ದರು. ಒಟ್ಟಾರೆ ಈ ಕೇಸ್​ ಹಲವು ಅನುಮಾನ ಹುಟ್ಟಿಸಿದೆ.

Exit mobile version