Site icon Vistara News

IPL 2024 : ಮುಂಬೈ ತಂಡ ಬಿಟ್ಟ ಮರುದಿನವೇ ಮತ್ತೊಂದು ತಂಡ ಸೇರಿದ ಬೌಲಿಂಗ್ ಕೋಚ್​​ ಶೇನ್ ಬಾಂಡ್​

Shane Bond

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024ರ ಋತುವಿಗೆ (IPL 2024) ಮುಂಚಿತವಾಗಿ ನ್ಯೂಜಿಲೆಂಡ್​​ನ ಮಾಜಿ ವೇಗದ ಬೌಲರ್ ಶೇನ್ ಬಾಂಡ್ ರಾಜಸ್ಥಾನ್ ರಾಯಲ್ಸ್ ತಂಡ ಸೇರಿಕೊಂಡಿದ್ದಾರೆ. ಬಾಂಡ್ ರಾಯಲ್ಸ್ ತಂಡದ ಸಹಾಯಕ ಮತ್ತು ಬೌಲಿಂಗ್ ತರಬೇತುದಾರರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಬಾಂಡ್​ ಇದಕ್ಕಿಂತ ಮೊದಲು ಮುಂಬೈ ಇಂಡಿಯನ್ಸ್ ಪರ 9 ವರ್ಷಗಳ ದೀರ್ಘ ಕಾಲ ಸೇವೆ ಸಲ್ಲಿಸಿದ್ದರು.

ಅಕ್ಟೋಬರ್ 23 ರ ಸೋಮವಾರ ರಾಜಸ್ಥಾನ್ ರಾಯಲ್ಸ್ ತನ್ನ ಫ್ರಾಂಚೈಸಿಗೆ ಶೇನ್ ಬಾಂಡ್ ಸೇರುವುದಾಗಿ ಘೋಷಿಸಲಾಗಿದೆ.ಚ ವಿಶೇಷವೆಂದರೆ, ಸಂಜು ಸ್ಯಾಮ್ಸನ್ ನಾಯಕತ್ವದ ತಂಡಕ್ಕೆ ಬಾಂಡ್ ಬೌಲಿಂಗ್​ ತರಬೇತಿ ನೀಡಿದ್ದಾರೆ. ಅಂದ ಹಾಗೆ ಬಾಂಡ್​ಗಿಂತ ಮೊದಲು ಈ ಸ್ಥಾನದಲ್ಲಿ ಶ್ರೀಲಂಕಾ ತಂಡದ ಮಾಜಿ ವೇಗದ ಬೌಲರ್​​ ಲಸಿತ್​ ಮಾಲಿಂಗ ಇದ್ದರು. ಅವರು ಈಗ ಮುಂಬೈ ಇಂಡಿಯನ್ಸ್​ ತಂಡ ಸೇರಿಕೊಂಡಿದ್ದಾರೆ. ಮಾಲಿಂಗ ಮುಂಬೈ ತಂಡ ಸೇರುತ್ತಿದ್ದಂತೆ ಆ ಜಾಗವನ್ನು ಬಾಂಡ್ ಬಿಟ್ಟುಕೊಟ್ಟಿದ್ದರು. ಇದೀಗ ಮಾಲಿಂಗ ಬಿಟ್ಟಿರುವ ಜಾಗಕ್ಕೆ ಬಾಂಡ್​ ಸೇರಿಕೊಂಡಿದ್ದಾರೆ.

ಲಸಿತ್ ಮಾಲಿಂಗ ಐಪಿಎಲ್ 2022 ಮತ್ತು 2023ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ವೇಗದ ಬೌಲಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು. ಐಪಿಎಲ್ 2024 ಕ್ಕೆ ಮುಂಚಿತವಾಗಿ ಮಾಲಿಂಗ ಮುಂಬೈ ಇಂಡಿಯನ್ಸ್​ನಲ್ಲಿ ಬೌಲಿಂಗ್ ಕೋಚ್ ಹುದ್ದೆಯನ್ನು ವಹಿಸಿಕೊಂಡಿದ್ದಾರೆ. ಯಾಕೆಂದೆರೆ ಅವರು ಮುಂಬೈ ಇಂಡಿಯನ್ಸ್ ತಂಡದ ಜಾಗತಿಕ ಯೋಜನೆಯ ಭಾಗವಾಗಿದ್ದಾರೆ.

ಹಲವು ವರ್ಷ ಮುಂಬಯಿ ತಂಡದಲ್ಲಿದ್ದ ಬಾಂಡ್​

ಶೇನ್ ಬಾಂಡ್ 2015 ರಿಂದ 2023 ರವರೆಗೆ ಮುಂಬೈ ಇಂಡಿಯನ್ಸ್ ತಂಡದೊಂದಿಗೆ ಕೆಲಸ ಮಾಡಿದರು, 2015, 2017, 2019 ಮತ್ತು 2020 ರಲ್ಲಿ ಪ್ರಶಸ್ತಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಐಎಲ್ಟಿ 20 ರ ಉದ್ಘಾಟನಾ ಆವೃತ್ತಿಯಲ್ಲಿ ಬಾಂಡ್ ಎಂಐ ಎಮಿರೇಟ್ಸ್ ಫ್ರಾಂಚೈಸಿಯ ಮುಖ್ಯ ತರಬೇತುದಾರರಾಗಿಯೂ ಕೆಲಸ ಮಾಡಿದ್ದರು.

ಬಾಂಡ್​ ಅವರ ಮಾರ್ಗದರ್ಶನದಲ್ಲಿ, ಜಸ್ಪ್ರೀತ್ ಬುಮ್ರಾ, ಮಿಚೆಲ್ ಮೆಕ್ಲೆನಾಘನ್, ಟ್ರೆಂಟ್ ಬೌಲ್ಟ್ ಮತ್ತು ಹೆಚ್ಚಿನ ಪ್ರಸಿದ್ಧ ಹೆಸರುಗಳು ಸೇರಿದಂತೆ ಹಲವಾರು ವೇಗದ ಬೌಲರ್​ಗಳು ಟಿ 20 ಸ್ಪೆಷಲಿಸ್ಟ್​ಗಳಾಗಿ ಬೆಳೆದಿದ್ದರು. ಪ್ರಸಿದ್ಧ್ ಕೃಷ್ಣ, ನವದೀಪ್ ಸೈನಿ, ಸಂದೀಪ್ ಶರ್ಮಾ, ಕುಲದೀಪ್ ಸೇನ್, ಒಬೆಡ್ ಮೆಕಾಯ್, ಕೆಎಂ ಆಸಿಫ್ ಮತ್ತು ಕುಲದೀಪ್ ಯಾದವ್ ಸೇರಿದಂತೆ ವೇಗದ ಬೌಲರ್​ಗಳು ರಾಜಸ್ಥಾನ್​ ತಂಡದಲ್ಲಿದ್ದು ಅವರೆಲ್ಲರೂ ಇನ್ನು ಮುಂದೆ 48 ವರ್ಷದ ಬಾಂಡ್​ ನೇತೃತ್ವದಲ್ಲಿ ಪಳಗಲಿದ್ದಾರೆ.

ಇದನ್ನೂ ಓದಿ : Bishan Singh Bedi : ಭಾರತ ತಂಡದ ಮಾಜಿ ಸ್ಪಿನ್ನರ್ ಬಿಷನ್ ಸಿಂಗ್ ಬೇಡಿ ನಿಧನ

ಐಪಿಎಲ್ 2024 ಕ್ಕೆ ಮುಂಚಿತವಾಗಿ ರಾಜಸ್ಥಾನ್ ರಾಯಲ್ಸ್​ನಂಥ ಮುಂದಾಲೋಚನೆಯ ಫ್ರಾಂಚೈಸಿಗೆ ಸೇರಲು ಉತ್ಸುಕನಾಗಿದ್ದೇನೆ ಎಂದು ಶೇನ್ ಬಾಂಡ್ ಹೇಳಿದ್ದಾರೆ. ರಾಜಸ್ಥಾನ್ ರಾಯಲ್ಸ್ ಕ್ರಿಕೆಟ್ ನಿರ್ದೇಶಕ ಕುಮಾರ್ ಸಂಗಕ್ಕಾರ ಅವರು ಶೇನ್ ಬಾಂಡ್ ಅವರ ನೇಮಕವನ್ನು ಸ್ವಾಗತಿಸಿದ್ದಾರೆ. ಅವರ ಅನುಭವವು ರಾಯಲ್ಸ್​ನ ಯುವ ವೇಗದ ಬೌಲರ್​ಗಳಿಗೆ ಅನುಕೂಲ ಮಾಡಿಕೊಡುತ್ತದೆ ಎಂದು ಹೇಳಿದ್ದಾರೆ.

ಶೇನ್ ಆಧುನಿಕ ಕ್ರಿಕೆಟ್​​ನ ಶ್ರೇಷ್ಠ ವೇಗದ ಬೌಲರ್​ಗಳಲ್ಲಿ ಒಬ್ಬರು. ಕೆಲವು ಅತ್ಯುತ್ತಮ ಆಟಗಾರರಿಗೆ ಮಾರ್ಗದರ್ಶನ ನೀಡಿದ ಅನುಭವ ಮತ್ತು ಜ್ಞಾನದ ಸಂಪತ್ತನ್ನು ತಮ್ಮೊಂದಿಗೆ ತರಲಿದ್ದಾರೆ. ಅವರು ಐಪಿಎಲ್ ಮತ್ತು ಭಾರತದಲ್ಲಿ ಹಲವಾರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಫ್ರಾಂಚೈಸಿ ವ್ಯವಸ್ಥೆಯಲ್ಲಿ ಒಳಗೊಂಡಿರುವ ಪ್ರಕ್ರಿಯೆಗಳ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದಾರೆ. ನಮ್ಮನ್ನು ಪ್ರಶಸ್ತಿ ವಿಜೇತ ತಂಡವಾಗಿ ರೂಪಿಸುವಲ್ಲಿ ಅವರು ಬೀರಬಹುದಾದ ಪರಿಣಾಮವನ್ನು ನೋಡಲು ಎದುರು ನೋಡುತ್ತಿದ್ದೇವೆ” ಎಂದು ಸಂಗಕ್ಕಾರ ಹೇಳಿಕೊಂಡಿದ್ದಾರೆ.

Exit mobile version