Site icon Vistara News

Shaun Marsh: 40ನೇ ವಯಸ್ಸಿನಲ್ಲಿ ಎಲ್ಲ ಮಾದರಿಯ ಕ್ರಿಕೆಟ್​ಗೆ ವಿದಾಯ ಹೇಳಿದ ಶಾನ್ ಮಾರ್ಷ್

Shaun Marsh

ಸಿಡ್ನಿ: ಆಸ್ಟ್ರೇಲಿಯಾದ ಹಿರಿಯ ಆಲ್​ರೌಂಡರ್​ ಶಾನ್ ಮಾರ್ಷ್(Shaun Marsh) ಅವರು ಎಲ್ಲ ಮಾದರಿಯ ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ. ಈ ಮೂಲಕ ತಮ್ಮ 23 ವರ್ಷಗಳ ಸುದೀರ್ಘ ಕ್ರಿಕೆಟ್​ ವೃತ್ತಿಜೀವನಕ್ಕೆ ತೆರೆ ಎಳೆದಿದ್ದಾರೆ. ಬಿಗ್ ಬ್ಯಾಷ್ ಲೀಗ್ (BBL) 2023-24 ರಲ್ಲಿ ಮೆಲ್ಬೋರ್ನ್ ರೆನೆಗೇಡ್ಸ್ ಪ್ಲೇ ಆಫ್‌ ಪ್ರವೇಶಿಸುವಲ್ಲಿ ವಿಫಲವಾದ ಬಳಿಕ ಅವರು ತನ್ನ ನಿವೃತ್ತಿ ನಿರ್ಧಾರ ಪ್ರಕಟಿಸಿದರು.

40 ವರ್ಷದ ಶಾನ್ ಮಾರ್ಷ್ ಅವರು ಮಿಚೆಲ್​ ಮಾರ್ಷ್​ ಅವರ ಸಹೋದರನಾಗಿದ್ದಾರೆ. “ನಾನು ರೆನೆಗೇಡ್ಸ್‌ ತಂಡದ ಪರ ಕಳೆದ ಐದು ವರ್ಷ ಆಡಿ ಹಲವರ ಸ್ನೇಹ ಸಂಪಾದಿಸಿದ್ದೇನೆ. ಈ ಪ್ರೀತಿ ಜೀವಿತಾವಧಿಯಲ್ಲಿ ಉಳಿಯಲಿದೆ” ಎಂದು ಮಾರ್ಷ್ ತಮ್ಮ ನಿವೃತ್ತಿ ನಿರ್ಧಾರದ ವೇಳೆ ಉಲ್ಲೇಖಿಸಿದ್ದಾರೆ.

2019 ರಲ್ಲಿ ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆದಿದ್ದ ಭಾರತದ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಕೊನೆಯ ಬಾರಿ ಆಸ್ಟ್ರೇಲಿಯಾ ತಂಡವನ್ನು ಪ್ರತಿನಿಧಿಸಿದ್ದರು. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಉದ್ಘಾಟನಾ ಆವೃತ್ತಿಯಲ್ಲಿ ಗರಿಷ್ಠ ರನ್​ ಗಳಿಸಿ ಆರೆಂಜ್​ ಕ್ಯಾಪ್​ ಪಡೆದಿದ್ದ ಮಾರ್ಷ್​ ಅದೇ ವರ್ಷ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಆಸ್ಟ್ರೇಲಿಯಾ ಪರ ಏಕದಿನ ಮತ್ತು ಟಿ20 ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು. ಅವರ ಕ್ರಿಕೆಟ್​ ಪ್ರತಿಭೆ ಅನಾವರಣಗೊಂಡಿದ್ದು ಐಪಿಎಲ್​ ಮೂಲಕ.

ಇದನ್ನೂ ಓದಿ IPL 2023: ಐಪಿಎಲ್​​ ಪ್ರತಿನಿಧಿಸಿದ ಮೊದಲ ಅವಳಿ ಸಹೋದರರು; ಯಾರಿದು?

ಐಪಿಎಲ್​ ಸ್ಟಾರ್​


2008 ರಲ್ಲಿ ನಡೆದ ಚೊಚ್ಚಲ ಐಪಿಎಲ್​ ಟೂರ್ನಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಕಣಕ್ಕಿಳಿದ್ದ ಶಾನ್​ ಮಾರ್ಷ್​ ತಮ್ಮ ಸ್ಫೋಟಕ ಬ್ಯಾಟಿಂಗ್​ ಮೂಲಕ ಗಮನಸೆಳೆದಿದ್ದರು. ಈ ಆವೃತ್ತಿಯಲ್ಲಿ ಗರಿಷ್ಠ ರನ್​ ಬಾರಿಸಿ ಆರೆಂಜ್ ಕ್ಯಾಪ್ ಗೆದ್ದು ಐಪಿಎಲ್​ ಇತಿಹಾಸದಲ್ಲಿ ಮೊದಲ ಆರಂಜ್​ ಕ್ಯಾಪ್​ ಗೆದ್ದ ಆಟಗಾರ ಎನ್ನುವ ಹಿರಿಮೆ ಹೊಂದಿದ್ದಾರೆ. ಚೊಚ್ಚಲ ಆವೃತ್ತಿಯಲ್ಲಿ 11 ಪಂದ್ಯಗಳನ್ನಾಡಿದ್ದ ಮಾರ್ಷ್ 1 ಶತಕ ಹಾಗೂ 5 ಅರ್ಧಶತಕಗಳೊಂದಿಗೆ ಒಟ್ಟು 616 ರನ್ ಬಾರಿಸಿದ್ದರು. ಈ ಮೂಲಕ ಐಪಿಎಲ್ ಸೀಸನ್​ವೊಂದರಲ್ಲಿ 600 ಪ್ಲಸ್​ ರನ್ ಕಲೆಹಾಕಿದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದರು.

ಆಸ್ಟ್ರೇಲಿಯಾ ಪರ 38 ಟೆಸ್ಟ್‌ಗಳು, 73 ಏಕದಿನ ಮತ್ತು 15 ಟಿ20 ಪಂದ್ಯಗಳಲ್ಲಿ ಆಡಿದ್ದಾರೆ. ಟೆಸ್ಟ್​ನಲ್ಲಿ 2265, ಏಕದಿನ 2773, ಮತ್ತು ಟಿ20ಯಲ್ಲಿ 255 ರನ್ ಗಳಿಸಿದ್ದಾರೆ. ಒಟ್ಟು 13 ಶತಕಗಳು ಮತ್ತು 25 ಅರ್ಧಶತಕಗಳು ಬಾರಿಸಿದ್ದಾರೆ. 17ನೇ ವಯಸ್ಸಿನಲ್ಲಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್​ ಪದಾರ್ಪಣೆ ಮಾಡಿದ್ದರು.

Exit mobile version