Site icon Vistara News

Shikhar Dhawan: ಗಾಯಗೊಂಡ ಶಿಖರ್​ ಧವನ್​ ಕೆಲವು ಪಂದ್ಯಗಳಿಗೆ ಅನುಮಾನ

Shikhar Dhawan

ಮೊಹಾಲಿ: ಪಂಜಾಬ್ ಕಿಂಗ್ಸ್(Punjab Kings)​ ತಂಡಕ್ಕೆ ಸೋಲಿನ ಆಘಾತದ ಬೆನ್ನಲ್ಲೇ ಮತ್ತೊಂದು ಹಿನ್ನಡೆ ಉಂಟಾಗಿದೆ. ತಂಡದ ನಾಯಕ ಶಿಖರ್​ ಧವನ್​(Shikhar Dhawan) ಅವರು ಗಾಯದಿಂದಾಗಿ ಇನ್ನೂ ಕೆಲ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ ಎಂದು ವರದಿಯಾಗಿದೆ. ಭುಜದ ನೋವಿನಿಂದ ಬಳಲುತ್ತಿರುವ ಧವನ್ ಶನಿವಾರ ನಡೆದ ರಾಜಸ್ಥಾನ ರಾಯಲ್ಸ್( ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದರು. ಅವರ ಅನುಪಸ್ಥಿತಿಯಲ್ಲಿ ಸ್ಯಾಮ್ ಕರನ್​ ತಂಡವನ್ನು ಮುನ್ನಡೆಸಿದ್ದರು.

‘ಶಿಖರ್​ ಧವನ್​ ಚೇತರಿಕೆಗೆ ಇನ್ನೂ ಕನಿಷ್ಠ 10 ದಿನಗಳ ವಿಶ್ರಾಂತಿ ಬೇಕಾಗಿದೆ. ಹೀಗಾಗಿ ಮುಂದಿನ ಕೆಲ ಪಂದ್ಯಗಳಿಗೆ ಅವರು ಅಲಭ್ಯರಾಗಲಿದ್ದಾರೆ’ ಎಂದು ತಂಡದ ಮೂಲಗಳು ತಿಳಿಸಿರುವುದಾಗಿ ಎನ್​ಡಿಟಿವಿ ವರದಿ ಮಾಡಿದೆ. ತಂಡದ ನಿರ್ದೇಶಕ ಸಂಜಯ್ ಬಂಗಾರ್ ಕೂಡ “ಧವನ್ ಗಾಯದ ಬಗ್ಗೆ ಮಾಹಿತಿ ನೀಡಿದ್ದು, ಭುಜದ ಗಾಯದಿಂದ ಬಳಲುತ್ತಿರುವ ಧವನ್​ ಒಂದೆರಡು ಪಂದ್ಯಗಳಿಂದ ಹೊರಗುಳಿಯುವ ಸಾಧ್ಯತೆಯಿದೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ. ಧವನ್​ ಈ ಬಾರಿಯ ಐಪಿಎಲ್​ನಲ್ಲಿ 5 ಪಂದ್ಯಗಳನ್ನಾಡಿ 152 ರನ್​ ಬಾರಿಸಿದ್ದಾರೆ.

ಸದ್ಯ ಪಂಜಾಬ್​ ಆಡಿದ 6 ಪಂದ್ಯಗಳಲ್ಲಿ ಕೇವಲ 2 ಪಂದ್ಯ ಗೆದ್ದು 4 ಅಂಕದೊಂದಿಗೆ 8ನೇ ಸ್ಥಾನಿಯಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಪಂಜಾಬ್​ ಪ್ಲೇ ಆಫ್ ಹಾದಿ ಸಂಪೂರ್ಣ ಮುಚ್ಚಿಲ್ಲ. ಆದರೆ, ಸತತವಾಗಿ ಗೆಲ್ಲಬೇಕಾದ ಒತ್ತಡ ತಂಡದ ಮೇಲಿದೆ. ಜತೆಗೆ ಉಳಿದ ತಂಡಗಳ ಪ್ರದರ್ಶನವೂ ಪಂಜಾಬ್​ ಪ್ಲೇ ಆಫ್ ಹಾದಿಯ ಮೇಲೆ ಪರಿಣಾಮ ಬೀರಲಿದೆ. ಪಂಜಾಬ್​ ಮುಂದಿನ ಪಂದ್ಯದಲ್ಲಿ ಏಪ್ರಿಲ್​ 18ರಂದು ಮುಂಬಯಿ ಇಂಡಿಯನ್ಸ್​​ ವಿರುದ್ಧ ಆಡಿಲಿದೆ.

ಇದನ್ನೂ ಓದಿ IPL 2024: ನೆಚ್ಚಿನ ವಾಂಖೆಡೆ ಸ್ಟೇಡಿಯಂನಲ್ಲಿ ಕೊನೆಯ ಪಂದ್ಯವನ್ನಾಡಲು ಸಜ್ಜಾದ ಧೋನಿ

ರಾಜಸ್ಥಾನ್​ ವಿರುದ್ಧ ಸೋಲು


ಮಹಾರಾಜ ಯಾದವೀಂದ್ರ ಸಿಂಗ್​​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಶನಿವಾರ ನಡೆದ ಹಣಾಹಣಿಯಲ್ಲಿ ಟಾಸ್​ ಗೆದ್ದ ರಾಜಸ್ಥಾನ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಪಂಜಾಬ ತಂಡ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ಗೆ 147 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ರಾಜಸ್ಥಾನ್​ ತಂಡ ಇನ್ನೊಂದು ಎಸೆತ ಬಾಕಿ ಇರುವಂತೆಯೇ 7 ವಿಕೆಟ್​ ನಷ್ಟ ಮಾಡಿಕೊಂಡು 152 ರನ್ ಬಾರಿಸಿ ಗೆಲುವು ಸಾಧಿಸಿತು.

ಸಾಧಾರಣ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ್​ ಮೊದಲ ವಿಕೆಟ್​ಗೆ 51 ರನ್ ಬಾರಿಸಿತು. ಬಳಿಕ ಯಶಸ್ವಿ ಜೈಸ್ವಾಲ್ 39 ರನ್ ಬಾರಿಸಿ ಔಟಾದರೆ ಉಡುಪಿ ಮೂಲದ ತನುಷ್ ಕೋಟ್ಯಾನ್​ 24 ರನ್ ಬಾರಿಸಿದರು. ಸಂಜು ಸ್ಯಾಮ್ಸನ್​ 18 ರನ್ ಗಳಿಸಿದರೆ ರಿಯಾನ್ ಪರಾಗ್​ 23 ರನ್ ಕೊಡುಗೆ ಕೊಟ್ಟರು. ದ್ರುವ್ ಜುರೆಲ್ 6 ರನ್​ಗೆ ಔಟಾದರೆ ಪೊವೆಲ್ 11 ರನ್​ ಗಳಿಸಿದರು. ಕೊನೆಯಲ್ಲಿ ಶಿಮ್ರೋನ್ ಹೆಟ್ಮಾಯರ್ 3 ಸಿಕ್ಸರ್ ಹಾಗೂ 1 ಫೋರ್​ ಸಮೇತ 27 ರನ್ ಬಾರಿಸಿ ತಂಡವನ್ನು ಗೆಲ್ಲಿಸಿದರು. ಕೊನೇ ಓವರ್​ನಲ್ಲಿ ರಾಜಸ್ಥಾನ್ ತಂಡಕ್ಕೆ 10 ರನ್ ಬೇಕಾಗಿತ್ತು. ಅರ್ಶ್​ ದೀಪ್ ಓವರ್​ ನಲ್ಲಿ ಈ ರನ್​ ಗಳಿಸಿದ ಹೆಟ್ಮಾಯರ್ ತಂಡಕ್ಕೆ ಗೆಲುವು ತಂದು ಕೊಟ್ಟರು.

Exit mobile version