ನವದೆಹಲಿ: ಅಂತಾರಾಷ್ಟ್ರೀಯ ಮತ್ತು ದೇಶೀಯ ಕ್ರಿಕೆಟ್ ಟೂರ್ನಿಗೆ ವಿದಾಯ ಹೇಳಿದ ಟೀಮ್ ಇಂಡಿಯಾದ(Shikhar Dhawan Retirement) ಹಿರಿಯ ಆಟಗಾರ ಶಿಖರ್ ಧವನ್(Shikhar Dhawan) ತಮ್ಮ ಕ್ರಿಕೆಟ್ ವೃತ್ತಿ ಬದುಕನ್ನು ಆರಂಭಿಸಿದ್ದು ಕೀಪರ್ ಆಗಿ. ಆದರೆ, ಕೋಚ್ ಅವರ ಸಲಹೆಯ ಮೇರೆಗೆ ಬ್ಯಾಟರ್ ಆಗಿ ಪರಿವರ್ತನೆಗೊಂಡರು.ಧವನ್ ಕ್ರಿಕೆಟ್ ಜರ್ನಿಯ ಸಂಪೂರ್ಣ ಮಾಹಿತಿ ಇಲ್ಲಿದೆ.
ವಿಕೆಟ್ ಕೀಪರ್ ಆಗಿದ್ದ ಧವನ್
ಶಿಖರ್ ಧವನ್ ಡಿಸೆಂಬರ್ 5, 1985 ರಂದು ಭಾರತದ ದೆಹಲಿಯಲ್ಲಿ ಜನಿಸಿದರು. ತಂದೆ ಮಹೇಂದ್ರ ಪಾಲ್ ಧವನ್, ತಾಯಿ ಸುನೈನಾ. ದೆಹಲಿಯ ಮೀರಾ ಬಾಗ್‌ನಲ್ಲಿರುವ ಸೇಂಟ್ ಮಾರ್ಕ್ಸ್ ಸೀನಿಯರ್ ಸೆಕೆಂಡರಿ ಪಬ್ಲಿಕ್ ಸ್ಕೂಲ್‌ನಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ ಧವನ್ 12ನೇ ವಯಸ್ಸಿಗೆ ಬ್ಯಾಟ್ ಹಿಡಿದು ಕ್ರಿಕೆಟ್ ಅಂಗಳದಲ್ಲಿ ಮಿಂಚಲು ಆರಂಭಿಸಿದ್ದರು. ಸಾನೆಟ್ ಕ್ಲಬ್ನಲ್ಲಿ ಪ್ರಸಿದ್ಧ ಕ್ರಿಕೆಟ್ ತರಬೇತುದಾರ ತಾರಕ್ ಸಿನ್ಹಾ ಅವರಿಂದ ಮಾರ್ಗದರ್ಶನ ಪಡೆದರು. ಆರಂಭದಲ್ಲಿ ಧವನ್ ವಿಕೆಟ್ ಕೀಪರ್ ಆಗಿ ತಂಡವನ್ನು ಸೇರಿಕೊಂಡರು. ಆ ಬಳಿಕ ಕೋಚ್ ಅವರ ಸಲಹೆಯಂತೆ ಬ್ಯಾಟಿಂಗ್ ಕಡೆ ಗಮನ ಹರಿಸಿ ಬ್ಯಾಟರ್ ಆಗಿ ಮಿಂಚಿದರು.
ಶಿಖರ್ ಧವನ್ ಅವರ ಕ್ರಿಕೆಟ್ ಪ್ರಯಾಣ ಆರಂಭವಾದದ್ದು 1999ರಲ್ಲಿ. ವಿಜಯ್ ಮರ್ಚೆಂಟ್ ಟ್ರೋಫಿಯಲ್ಲಿ ದೆಹಲಿ ಅಂಡರ್-16 ತಂಡದ ಪರ ಆಡುವ ಮೂಲಕ ಪ್ರಾರಂಭವಾಯಿತು. 2000/01ನೇ ಸಾಲಿನ ಪಂದ್ಯಾವಳಿಯಲ್ಲಿ ಧವನ್ ಅಗ್ರ ಸ್ಕೋರರ್ ಆದರು. ದೆಹಲಿ ತಂಡ ಈ ಆವೃತ್ತಿಯಲ್ಲಿ ರನ್ನರ್ ಅಪ್ ಆಗಿತ್ತು. ಅಂಡರ್-16ನಲ್ಲಿ ಮಿಂಚಿದ್ದ ಧವನ್ ಬಳಿಕ ACC ಅಂಡರ್-17 ಏಷ್ಯಾ ಕಪ್‌ಗಾಗಿ ಭಾರತ ಅಂಡರ್-17 ತಂಡದಲ್ಲಿ ಸ್ಥಾನ ಗಳಿದರು.
ಅಕ್ಟೋಬರ್ 2002 ರಲ್ಲಿ, ಕೂಚ್ ಬೆಹಾರ್ ಟ್ರೋಫಿಗಾಗಿ ದೆಹಲಿ ಅಂಡರ್-19 ತಂಡಕ್ಕೆ ಆಯ್ಕೆಯಾದ ಧವನ್ ಆಡಿದ 8 ಇನ್ನಿಂಗ್ಸ್‌ಗಳಲ್ಲಿ 55.42 ಸರಾಸರಿಯಲ್ಲಿ ಎರಡು ಶತಕಗಳನ್ನು ಒಳಗೊಂಡಂತೆ 388 ರನ್ ಗಳಿಸಿದರು. ಅವರ ಸ್ಥಿರವಾದ ಫಾರ್ಮ್ 2003 ರಲ್ಲಿ ವಿನೂ ಮಂಕಡ್ ಟ್ರೋಫಿಗಾಗಿ ಉತ್ತರ ವಲಯದ ಅಂಡರ್-19 ತಂಡದಲ್ಲಿ ಸ್ಥಾನ ಪಡೆಯುವಂತೆ ಮಾಡಿತು. 2006-07 ರ ರಣಜಿ ಋತುವಿನಲ್ಲಿ ತಮಿಳುನಾಡು ವಿರುದ್ಧ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಧವನ್ ಶತಕ ಬಾರಿಸಿ ಸಂಭ್ರಮಿಸಿದ್ದರು.
ದೆಹಲಿ ತಂಡದ ನಾಯಕ
2007ರಲ್ಲಿ ರಣಜಿ ಟೂರ್ನಿಯಲ್ಲಿ ದೆಹಲಿ ತಂಡದ ನಾಯಕರಾದ ಧವನ್ ಶ್ರೇಷ್ಠ ಬ್ಯಾಟಿಂಗ್ ಪ್ರದರ್ಶನ ತೋರುವ ಮೂಲಕ ಗಮನಸೆಳೆದರು. 2007-2008 ರ ರಣಜಿ ಟ್ರೋಫಿ ಋತುವಿನಲ್ಲಿ ಅವರ ನಾಯಕತ್ವದಲ್ಲಿ ದೆಹಲಿ ತಂಡ ಗೆದ್ದುಕೊಂಡಿತು. ಧವನ್ 8 ಪಂದ್ಯಗಳಲ್ಲಿ 43.84 ರ ಸರಾಸರಿಯಲ್ಲಿ ದ್ವಿಶತಕ ಸೇರಿದಂತೆ 570 ರನ್ ಗಳಿಸಿದ್ದರು. ಇದಾದ ಬಳಿಕ ಉತ್ತರ ವಲಯಕ್ಕಾಗಿ ದುಲೀಪ್ ಟ್ರೋಫಿಯಲ್ಲಿ ಮೂರು ಪಂದ್ಯಗಳಲ್ಲಿ 42.25 ಸರಾಸರಿಯೊಂದಿಗೆ ಘನ ಪ್ರದರ್ಶನ ತೋರಿದ್ದರು.
ಇದನ್ನೂ ಓದಿ Shikhar Dhawan Retirement: ಟ್ಯಾಟೂ ಹಾಕಿಸಿ ಎಚ್ಐವಿ ಪರೀಕ್ಷೆ ಮಾಡಿಸಿಕೊಂಡಿದ್ದ ಧವನ್
2008 ರಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿಯಲ್ಲಿ ಧವನ್ 6 ಪಂದ್ಯಗಳಲ್ಲಿ 97.25 ರ ಸರಾಸರಿಯಲ್ಲಿ 389 ರನ್ ಗಳಿಸಿದರು, ಇದರಲ್ಲಿ ದ್ವಿಶತಕ ಮತ್ತು 100 ಸ್ಟ್ರೈಕ್ ರೇಟ್ ಸೇರಿದಂತೆ ಎರಡನೇ ಅತಿ ಹೆಚ್ಚು ರನ್ ಗಳಿಸಿದರು. ಅವರ ಈ ಪ್ರದರ್ಶನ ಕಂಡು ಐಪಿಎಲ್ನಲ್ಲಿಯೂ ಅವಕಾಶ ನೀಡಲಾಯಿತು. 2010ರಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದರು. ಭಾರತ ತಂಡದ ಹಂಗಾಮಿ ನಾಯಕನಾಗಿಯೂ ಹಲವು ಟ್ರೋಫಿಗಳನ್ನು ಗೆದ್ದಿದ್ದಾರೆ. 2013ರಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಶಿಖರ್ ಧವನ್ ಅವರು ಭಾರತ ಪರ ಒಟ್ಟು 167 ಏಕದಿನ ಪಂದ್ಯಗಳನ್ನು ಆಡಿದ್ದು, 6793 ರನ್ ಬಾರಿಸಿದ್ದಾರೆ. ಇದರಲ್ಲಿ 39 ಅಧರ್ಶತಕ ಮತ್ತು 17 ಶತಕ ಒಳಗೊಂಡಿದೆ. 143 ರನ್ ಅವರ ಗರಿಷ್ಠ ಮೊತ್ತವಾಗಿದೆ. ಟೆಸ್ಟ್ ಕ್ರಿಕೆಟ್ನಲ್ಲಿ 34 ಪಂದ್ಯ ಆಡಿ 2315 ಗಳಿಸಿದ್ದಾರೆ. 7 ಶತಕ ಮತ್ತು 5 ಅರ್ಧಶತಕ ಒಳಗೊಂಡಿದೆ. ಟಿ20ಯಲ್ಲಿ ಉತ್ತಮ ದಾಖಲೆ ಹೊಂದಿರುವ ಧವನ್ 68 ಪಂದ್ಯ ಆಡಿ 1759 ರನ್ ಕಲೆಹಾಕಿದ್ದಾರೆ. 11 ಅರ್ಧಶತಕ ಬಾರಿಸಿದ್ದಾರೆ.