ನವದೆಹಲಿ: ಭಾರತ ತಂಡದ ಹಿರಿಯ ಆಟಗಾರ, ಎಡಗೈ ಬ್ಯಾಟರ್, ಗಬ್ಬರ್ ಖ್ಯಾತಿಯ ಶಿಖರ್ ಧವನ್(Shikhar Dhawan retirement) ಶನಿವಾರ, (ಆಗಸ್ಟ್ 24) ಬೆಳಗ್ಗೆ ದಿಢೀರ್ ದೇಶೀಯ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. ಈ ಮೂಲಕ ತಮ್ಮ 14 ವರ್ಷಗಳ ಕ್ರಿಕೆಟ್ ವೃತ್ತಿಬದುಕಿಗೆ ತೆರೆ ಎಳೆದಿದ್ದಾರೆ. ನಿವೃತ್ತಿ ಘೋಷಿಸಿದ ಧವನ್ಗೆ ಸಚಿನ್ ತೆಂಡೂಲ್ಕರ್(sachin tendulkar), ವಿರಾಟ್ ಕೊಹ್ಲಿ(virat kohli), ಬಿಸಿಸಿಐ(BCCI) ಸೇರಿ ಹಲವು ಮಾಜಿ ಹಾಗೂ ಹಾಲಿ ಕ್ರಿಕೆಟಿಗರು ಶುಭ ಹಾರೈಸಿದ್ದಾರೆ. ಧವನ್(Shikhar Dhawan) ಐಪಿಎಲ್ನಲ್ಲಿ ತಮ್ಮ ಆಟ ಮುಂದುವರಿಸಲಿದ್ದಾರೆ.
ವಿಡಿಯೊ ಮೂಲಕ ನಿವೃತ್ತಿ ಘೋಷಿಸಿದ 38 ವರ್ಷದ ಧವನ್, “ಭಾರತಕ್ಕಾಗಿ ಆಡುವ ಗುರಿಯನ್ನು ನಾನು ಯಾವಾಗಲೂ ಮನಸ್ಸಿನಲ್ಲಿಟ್ಟುಕೊಂಡಿದ್ದೇನೆ ಮತ್ತು ಬಹಳಷ್ಟು ಜನರಿಗೆ ಧನ್ಯವಾದಗಳು ನಾನು ಅದನ್ನು ಸಾಧಿಸಿದೆ. ಮೊದಲನೆಯದಾಗಿ ನನ್ನ ಕುಟುಂಬ, ನನ್ನ ಬಾಲ್ಯದ ಕೋಚ್ ತಾರಕ್ ಸಿನ್ಹಾ ಮತ್ತು ಮದನ್ ಶರ್ಮಾ ಅವರ ಮಾರ್ಗದರ್ಶನದಲ್ಲಿ ನಾನು ಕ್ರಿಕೆಟ್ ಕಲಿತೆ. ನಂತರ ನಾನು ವರ್ಷಗಳ ಕಾಲ ಆಡಿದ ನನ್ನ ಇಡೀ ತಂಡವು ಮತ್ತೊಂದು ಕುಟುಂಬ, ಖ್ಯಾತಿ ಮತ್ತು ಎಲ್ಲರ ಪ್ರೀತಿ ಮತ್ತು ಬೆಂಬಲವನ್ನು ಪಡೆದುಕೊಂಡಿತು. ಕಥೆಯಲ್ಲಿ ಮುಂದುವರಿಯಲು ನೀವು ಪುಟಗಳನ್ನು ತಿರುಗಿಸಬೇಕು ಎಂದು ಹೇಳಲಾಗುತ್ತದೆ. ಹಾಗಾಗಿ, ನಾನು ಅದನ್ನು ಸಹ ಮಾಡುತ್ತಿದ್ದೇನೆ, ನಾನು ಅಂತಾರಾಷ್ಟ್ರೀಯ ಮತ್ತು ದೇಶೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುತ್ತಿದ್ದೇನೆ. ವೃತ್ತಿಜೀವನದುದ್ದಕ್ಕೂ ತೋರಿದ ಪ್ರೀತಿ ಮತ್ತು ಬೆಂಬಲಕ್ಕಾಗಿ ಧನ್ಯವಾದಗಳು” ಎಂದು ಧವನ್ ವಿಡಿಯೊದಲ್ಲಿ ಹೇಳಿದ್ದಾರೆ.
ಇದನ್ನೂ ಓದಿ Shikhar Dhawan: ಎಲ್ಲ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಶಿಖರ್ ಧವನ್
ಶಿಖರ್ ಧವನ್ ಅವರು 2013 ಹಾಗೂ 2017ರ ಚಾಂಪಿಯನ್ಸ್ ಟ್ರೋಫಿ, 2015ರ ವಿಶ್ವಕಪ್ ಟೂರ್ನಿ ಹಾಗೂ 2019ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ಪರ ಅಮೋಘ ಪ್ರದರ್ಶನ ತೋರಿದ್ದರು. 2019ರಲ್ಲಿ ಲಂಡನ್ನಲ್ಲಿ ನಡೆದ ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸ್ಫೋಟಕ ಬ್ಯಾಟಿಂಗ್ ನಡೆಸಿ ಶತಕ ಬಾರಿಸಿದ್ದರು. ಆದರೆ ಅದೇ ಪಂದ್ಯದಲ್ಲಿ ಹೆಬ್ಬೆರಳಿಗೆ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದಿದ್ದರು. ಇದಾದ ಬಳಿಕ ಅವರಿಗೆ ಸರಿಯಾದ ಅವಕಾಶ ಸಿಗಲೇ ಇಲ್ಲ. ಇವರ ಸ್ಥಾನದಲ್ಲಿ ಯುವ ಆಟಗಾರ ಶುಭಮನ್ ಗಿಲ್ ನಿರೀಕ್ಷಿತ ಪ್ರದರ್ಶನ ತೋರುತ್ತಾ ಬಂದ ಕಾರಣ ಧವನ್ ತಂಡಕ್ಕೆ ಆಯ್ಕೆಯಾಗಲೇ ಇಲ್ಲ.
ಶಿಖರ್ ಧವನ್ ಅವರು ಭಾರತ ಪರ ಒಟ್ಟು 167 ಏಕದಿನ ಪಂದ್ಯಗಳನ್ನು ಆಡಿದ್ದು, 6793 ರನ್ ಬಾರಿಸಿದ್ದಾರೆ. ಇದರಲ್ಲಿ 39 ಅಧರ್ಶತಕ ಮತ್ತು 17 ಶತಕ ಒಳಗೊಂಡಿದೆ. 143 ರನ್ ಅವರ ಗರಿಷ್ಠ ಮೊತ್ತವಾಗಿದೆ. ಟೆಸ್ಟ್ ಕ್ರಿಕೆಟ್ನಲ್ಲಿ 34 ಪಂದ್ಯ ಆಡಿ 2315 ಗಳಿಸಿದ್ದಾರೆ. 7 ಶತಕ ಮತ್ತು 5 ಅರ್ಧಶತಕ ಒಳಗೊಂಡಿದೆ. ಟಿ20ಯಲ್ಲಿ ಉತ್ತಮ ದಾಖಲೆ ಹೊಂದಿರುವ ಧವನ್ 68 ಪಂದ್ಯ ಆಡಿ 1759 ರನ್ ಕಲೆಹಾಕಿದ್ದಾರೆ. 11 ಅರ್ಧಶತಕ ಬಾರಿಸಿದ್ದಾರೆ.