ಬೆಂಗಳೂರು : ಸಾಕಷ್ಟು ಚರ್ಚೆಗಳ ನಂತರ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಸೆಪ್ಟೆಂಬರ್-ಅಕ್ಟೋಬರ್ನಲ್ಲಿ ಚೀನಾದ ಹ್ಯಾಂಗ್ಝೌನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ನಲ್ಲಿ (Asian Games) ಭಾಗವಹಿಸಲು ಪುರುಷರ ಮತ್ತು ಮಹಿಳಾ ತಂಡಗಳನ್ನು ಕಳುಹಿಸಲು ಒಪ್ಪಿಕೊಂಡಿದೆ. ಏತನ್ಮಧ್ಯೆ, ಅಕ್ಟೋಬರ್ ಆರಂಭದಲ್ಲಿ ಏಕದಿನ ವಿಶ್ವಕಪ್ ಪ್ರಾರಂಭವಾಗಲಿರುವುದರಿಂದ, ಬಿಸಿಸಿಐ ತನ್ನ ಪ್ರಮುಖ ತಂಡವನ್ನು ಕಳುಹಿಸಲು ಹಿಂಜರಿಯುತ್ತಿದೆ. ಪ್ರಮುಖ ಆಟಗಾರರು ಇಲ್ಲದ ಬಿ ತಂಡನ್ನು ಕಳುಹಿಸುವುದೇ ಬಿಸಿಸಿಐ ಉದ್ದೇಶವಾಗಿದೆ. ಹೀಗಾಗಿ, ಶಿಖರ್ ಧವನ್ ಅವರು ತಂಡಕ್ಕೆ ಮರಳುವ ಸಾಧ್ಯತೆಯಿದ್ದು, ಅವರು ಟೀಮ್ ಇಂಡಿಯಾವನ್ನು(Team India) ಮುನ್ನಡೆಸಲಿದ್ದಾರೆ ಎನ್ನಲಾಗಿದೆ. ಏತನ್ಮಧ್ಯೆ ಪೂರ್ಣ ಸಾಮರ್ಥ್ಯದ ಮಹಿಳಾ ತಂಡ ಏಷ್ಯನ್ ಗೇಮ್ಸ್ಗೆ ಪ್ರಯಾಣಿಸುವ ನಿರೀಕ್ಷೆಯಿದೆ.
ಶಿಖರ್ ಧವನ್ ಇನ್ನೂ ಫಾರ್ಮ್ನಲ್ಲಿದ್ದು ಉತ್ತಮವಾಗಿ ಬ್ಯಾಟ್ ಮಾಡುತ್ತಿದ್ದಾರೆ. ಆದರೆ ಕಳೆದೆರಡು ವರ್ಷದಿಂದ ಅವರನ್ನು ಪ್ರಮುಖ ತಂಡಕ್ಕೆ ಆಯ್ಕೆ ಮಾಡಲಾಗುತ್ತಿಲ್ಲ. ರೋಹಿತ್ ಶರ್ಮಾ. ವಿರಾಟ್ ಕೊಹ್ಲಿ ಅವರಂಥ ಪ್ರಮುಖ ಆಟಗಾರರು ಗೈರು ಹಾಜರಾದ ಸಂದರ್ಭದಲ್ಲಿ ಮಾತ್ರ ಎಡಗೈ ಬ್ಯಾಟರ್ಗೆ ಅವಕಾಶ ನೀಡಲಾಗುತ್ತಿದೆ. ರೋಹಿತ್ ಅನುಪಸ್ಥಿತಿಯಲ್ಲಿ ನಾಯಕತ್ವದ ಹೊಣೆಯನ್ನೂ ಹೊರಿಸಲಾಗಿತ್ತು. ಆದರೆ, ಎಲ್ಲವನ್ನೂ ಅವರು ಸಮರ್ಥವಾಗಿ ನಿಭಾಯಿಸಿದ್ದಾರೆ.
ಇದನ್ನೂ ಓದಿ : Viral News: 2019ರ ವಿಶ್ವಕಪ್ ಘಟನೆ ನೆನೆದ ಅಂಬಾಟಿ ರಾಯುಡು
ಜುಲೈನಲ್ಲಿ ಭಾರತ ತಂಡ ವೆಸ್ಟ್ ಇಂಡೀಸ್ಗೆ ಪ್ರವಾಸ ಹೋಗಲಿದ್ದು ಟೆಸ್ಟ್, ಏಕದಿನ ಹಾಗೂ ಟಿ20 ಪಂದ್ಯಗಳಲ್ಲಿ ಪಾಲ್ಗೊಳ್ಳಲಿದೆ. ಈ ಪ್ರವಾಸದ ಟೆಸ್ಟ್ ಹಾಗೂ ಏಕ ದಿನ ತಂಡವನ್ನು ಬಿಸಿಸಿಐ ಆಯ್ಕೆ ಸಮಿತಿ ಕೆಲವು ದಿನಗಳ ಹಿಂದೆ ಘೋಷಿಸಿದೆ. ಆದರೆ, ಅದರಲ್ಲೂ ಶಿಖರ್ ಧವನ್ಗೆ ಅವಕಾಶ ಕೊಟ್ಟಿಲ್ಲ. ಇದೀಗ ಅವರಿಗೆ ಏಷ್ಯಾ ಕಪ್ನಲ್ಲಿ ಆಡುವ ಅವಕಾಶ ಸಿಗಲಿದೆ ಎನ್ನಲಾಗಿದೆ.
ಏಷ್ಯನ್ ಗೇಮ್ಸ್ನಲ್ಲಿ ಕ್ರಿಕೆಟ್
2014ರಲ್ಲಿ ಇಂಚಿಯಾನ್ನಲ್ಲಿ ನಡೆದ ಏಷ್ಯನ್ ಗೇಮ್ಸ್ನಲ್ಲಿ ಕೊನೆಯ ಬಾರಿಗೆ ಕ್ರಿಕೆಟ್ ಸ್ಪರ್ಧೆಯ ಪಟ್ಟಿಯಲ್ಲಿತ್ತು. ಆಗ, ಭಾರತ ತಂಡವನ್ನು ಬಿಸಿಸಿಐ ಕಳುಹಿಸಿರಲಿಲ್ಲ. ತಡವಾಗಿ ಅಹ್ವಾನ ಬಂದಿತ್ತು ಎಂದು ಬಿಸಿಸಿಐ ಹೇಳಿತ್ತು. ಆದರೆ ಕಳೆದ ಒಂಬತ್ತು ವರ್ಷಗಳಲ್ಲಿ ವಿಷಯಗಳು ಬದಲಾಗಿವೆ. ಏಷ್ಯನ್ ಗೇಮ್ಗೆ ತಂಡವನ್ನು ಕಳುಹಿಸುವುದು ಬಿಸಿಸಿಐಗೆ ಅನಿವಾರ್ಯವಾಗಿದೆ. ಆರಂಭದಲ್ಲಿ ಕಳುಹಿಸುವುದಿಲ್ಲ ಎಂದು ಹೇಳುತ್ತಿದ್ದ ಬಿಸಿಸಿಐ ಕೊನೆಗೆ ಒಪ್ಪಿಕೊಂಡಿದೆ.
ಏಷ್ಯನ್ ಕ್ರೀಡಾಕೂಟದಲ್ಲಿ ಶಿಖರ್ ಧವನ್ ತಂಡ ಮುನ್ನಡೆಸುವ ನಿರ್ಧಾರ ಜುಲೈ 7 ರಂದು ಬಿಸಿಸಿಐನ ಸಭೆಯಲ್ಲಿ ನಿರ್ಧಾರವಾಘಲಿದೆ. ಇದಲ್ಲದೆ, ಮಂಡಳಿಯ ಸದಸ್ಯರು ‘ವಿದೇಶಿ ಲೀಗ್ಗಳಲ್ಲಿ ಭಾಗವಹಿಸುವ ನಿವೃತ್ತ ಆಟಗಾರರ ನೀತಿ’ ಬಗ್ಗೆಯೂ ಚರ್ಚೆ ಆಗಲಿದೆ. ಪ್ರಸ್ತುತ ನಿಯಮದ ಪ್ರಕಾರ, ಭಾರತೀಯ ಆಟಗಾರರಿಗೆ ಬಿಸಿಸಿಐ ಒಪ್ಪಂದ ಇರುವ ವೇಳೆ ವಿದೇಶಿ ಲೀಗ್ಗಳಲ್ಲಿ ಭಾಗವಹಿಸಲು ಅವಕಾಶವಿಲ್ಲ. ಹೀಗಾಗಿ ಇತರ ಟಿ20 ಲೀಗ್ ತಂಡಗಳಿಗೆ ಸೇರುವ ಸಲುವಾಗಿ ಆಟಗಾರರು ಬೇಗನೆ ನಿವೃತ್ತಿ ಪಡೆದ ಕೆಲವು ಸಂದರ್ಭಗಳಿವೆ. ಅಂಬಾಟಿ ರಾಯುಡು ಐಪಿಎಲ್ನಿಂದ ನಿವೃತ್ತರಾಗಿ ಮೇಜರ್ ಕ್ರಿಕೆಟ್ ಲೀಗ್ನ ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡ ಸೇರಿರುವುದು ಇದಕ್ಕೆ ಉತ್ತಮ ಉದಾಹರಣೆ.
ಸಭೆಯಲ್ಲಿ ಕ್ರಿಕೆಟ್ ಪಂದ್ಯಗಳ ನೇರ ಪ್ರಸಾರ ಹಕ್ಕುಗಳ ವಿತರಣೆ ಟೆಂಡರ್ ಮತ್ತು ಜೆರ್ಸಿ ಪ್ರಾಯೋಜಕತ್ವದ ಬಗ್ಗೆ ಮಂಡಳಿಯ ಸದಸ್ಯರು ಚರ್ಚೆ ನಡೆಸಲಿದ್ದಾರೆ. ತಂಡವು ಪ್ರಸ್ತುತ ತವರು ಋತುವಿಗೆ ಟಿವಿ ಪ್ರಸಾರಕರನ್ನು ಹೊಂದಿಲ್ಲ. ರೋಹಿತ್ ಶರ್ಮಾ ನೇತೃತ್ವದ ತಂಡವು ಜೆರ್ಸಿಗೆ ಪ್ರಮುಖ ಪ್ರಾಯೋಜಕರಿಲ್ಲದೆ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ನಲ್ಲಿ ಆಡಿತ್ತು. ಕಲಿಕಾ ಸಂಸ್ಥೆ ಬೈಜು ಅಕಾಲಿಕ ನಿರ್ಗಮನವು ಈ ಸಮಸ್ಯೆಗೆ ಕಾರಣ.
ಮುಂಬರುವ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಆಟದ ಪರಿಸ್ಥಿತಿಗಳನ್ನು ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ಅಂತಿಮಗೊಳಿಸಲಾಗುವುದು. ಮುಂಬರುವ ಋತುವಿನಲ್ಲಿ ಇಂಪ್ಯಾಕ್ಟ್ ಪ್ಲೇಯರ್ ನಿಯಮ ಜಾರಿಗೆ ಬರಬಹುದು. ಅದರ ಬಗ್ಗೆಯೂ ಚರ್ಚೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.