ನವದೆಹಲಿ: ಭಾರತ ಕ್ರಿಕೆಟ್ ತಂಡದ ಹಿರಿಯ ಆಟಗಾರ ಶಿಖರ್ ಧವನ್(Shikhar Dhawan) ಅವರ ವಿಚ್ಛೇದಿತ ಪತ್ನಿ, ಆಸ್ಟ್ರೇಲಿಯಾ ಪ್ರಜೆ ಆಯೆಷಾ ಮುಖರ್ಜಿ ಅವರಿಗೆ ದೆಹಲಿಯ ಪಟಿಯಾಲ ಹೌಸ್‌ನ ಕೌಟುಂಬಿಕ ನ್ಯಾಯಾಲಯ ಖಡಕ್ ಆದೇಶವೊಂದನ್ನು ಹಾಕುವುದರ ಜತೆಗೆ ಅವರ ವರ್ತನೆಗೆ ಛೀಮಾರಿ ಹಾಕಿದೆ. ಧವನ್ ಅವರ 9 ವರ್ಷದ ಮಗನನ್ನು ಭಾರತಕ್ಕೆ ಕರೆದುಕೊಂಡು ಬರಲು ಆಯೆಷಾ ಮುಖರ್ಜಿಗೆ ಕೋರ್ಟ್ ಸೂಚನೆ ನೀಡಿದೆ.
ಕುಟುಂಬದ ಕಾರ್ಯಕ್ರಮವೊಂದಕ್ಕೆ ಮಗನನ್ನು ಭಾರತಕ್ಕೆ ಕಳುಹಿಸುವಂತೆ ಧವನ್ ಅವರು ಆಯೆಷಾ ಮುಖರ್ಜಿಗೆ ಕೇಳಿಕೊಂಡಿದ್ದರು. ಆದರೆ ಪದೇಪದೆ ಇಲ್ಲ ಸಲ್ಲದ ಕಾರಣ ತಿಳಿಸಿ ಆಯೆಷಾ ಅವರು ಮಗನನ್ನು ಭಾರತಕ್ಕೆ ಕಳುಹಿಸಲು ಹಿಂದೇಟು ಹಾಕುತ್ತಿದ್ದರು. ಜತೆಗೆ ಈ ಕಾರ್ಯಕ್ರಮ ನಡೆಯಲು ಸಾಧ್ಯವಿಲ್ಲ ಎಂದು ಆಕ್ಷೇಪ ಕೂಡ ವ್ಯಕ್ತಪಡಿಸಿದ್ದರು. ಇದೇ ಕಾರಣಕ್ಕೆ ಧವನ್ ಅವರು ದಿಲ್ಲಿ ಕೌಟುಂಬಿಕ ನ್ಯಾಯಾಲದ ಮೊರೆ ಹೋಗಿದ್ದರು.
ದೂರಿನ ಅರ್ಜಿಯನ್ನು ಪರಿಶೀಲನೆ ನಡೆಸಿದ ಪಟಿಯಾಲ ಹೌಸ್ ಕೋರ್ಟ್, ಮಗುವಿನ ಮೇಲೆ ಕೇವಲ ತಾಯಿಗೆ ಮಾತ್ರ ಹಕ್ಕಿಲ್ಲ ಎಂದು ಆದೇಶ ಹೊರಡಿಸುವ ಮೂಲಕ ಮಗನನ್ನು ಧವನ್ ಅವರ ಕೌಟುಂಬಿಕ ಕಾರ್ಯಕ್ರಮಕ್ಕೆ ಭಾರತಕ್ಕೆ ಕರೆದುಕೊಂಡು ಬರಲು ಸೂಚನೆ ನೀಡಿದೆ.
ನ್ಯಾಯಮೂರ್ತಿ ಹರೀಶ್ ಕುಮಾರ್ ನೇತೃತ್ವದ ನಾಯಪೀಠವು, ಮಗುವನ್ನು ಭಾರತಕ್ಕೆ ಕರೆ ತರಲು ಆಕ್ಷೇಪ ವ್ಯಕ್ತಪಡಿಸಿದ ಆಯೆಷಾ ಮುಖರ್ಜಿಗೆ ಛೀಮಾರಿ ಹಾಕಿದೆ. ಶಿಖರ್ ಧವನ್ ಕುಟುಂಬಸ್ಥರು 2020ರ ಆಗಸ್ಟ್‌ನಿಂದಲೂ ಧವನ್ ಪುತ್ರನನ್ನು ನೋಡಿಲ್ಲ ಎಂದು ಕೋರ್ಟ್‌ಗೆ ತಿಳಿಸಿದರು.
ಅರ್ಜಿದಾರರ ಮಗು 2020ರ ಆಗಸ್ಟ್‌ನಿಂದ ಭಾರತಕ್ಕೆ ಬಂದಿಲ್ಲ. ಹೀಗಾಗಿ ಅರ್ಜಿದಾರರ ಪೋಷಕರು ಹಾಗೂ ಕುಟುಂಬದ ಸದಸ್ಯರು ಮಗುವನ್ನು ಭೇಟಿ ಮಾಡುವ ಅವಕಾಶ ಸಿಕ್ಕಿಲ್ಲ. ಅರ್ಜಿದಾರರ ಅಜ್ಜ ಹಾಗೂ ಅರ್ಜಿದಾರರ ಕುಟುಂಬಸ್ಥರು ಮಗುವನ್ನು ಭೇಟಿಯಾಗಬೇಕೆಂಬ ಬಯಕೆ ಅಸಮಂಜಸ ಎಂದು ಹೇಳುವುದು ಕಷ್ಟ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಇದನ್ನೂ ಓದಿ Shikhar Dhawan: ಪ್ರೀತಿ ಮಾಯೆ ಹುಷಾರು; ಶಿಖರ್ ಧವನ್ ಕಿವಿಮಾತು
ಈ ಹಿಂದೆಯೂ ದೆಹಲಿಯ ಪಟಿಯಾಲ ಹೌಸ್‌ನ ಕೌಟುಂಬಿಕ ನ್ಯಾಯಾಲಯ ಆಯೆಷಾ ಮುಖರ್ಜಿಗೆ ವಾರ್ನಿಂಗ್ ಒಂದನ್ನು ಮಾಡಿತ್ತು. ಧವನ್ ವಿರುದ್ಧದ ಯಾವುದೇ ಆರೋಪ, ವಿವಾದಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮ ಸೇರಿ ಇತರ ಯಾವುದೇ ವೇದಿಕೆಗಳಲ್ಲಿ ಮಾನಹಾನಿಕರ ಮತ್ತು ಸುಳ್ಳು ವಿಷಯವನ್ನು ಪ್ರಸಾರ ಮಾಡದಂತೆ ಕೋರ್ಟ್ ನಿರ್ಬಂಧ ಹೇರಿತ್ತು.