ನವದೆಹಲಿ: ಏಕದಿನ ವಿಶ್ವಕಪ್(ICC World Cup 2023) ಟೂರ್ನಿಯಲ್ಲಿ ಭಾರತ ಮೊದಲ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ಆಡಲಿದೆ. ಈ ಪಂದ್ಯ ಅಕ್ಟೋಬರ್ 8ರಂದು ಚೆನ್ನೈಯಲ್ಲಿ ನಡೆಯಲಿದೆ. ವಿಶ್ವಕಪ್‌ನಲ್ಲಿ ಸ್ಥಾನ ಸಿಗದಿದ್ದರೂ ಎಡಗೈ ಬ್ಯಾಟರ್ ಶಿಖರ್ ಧವನ್(Shikhar Dhawan) ಅವರು ನಿಷ್ಕಲ್ಮಶ ಮನಸ್ಸಿನಿಂದ ಭಾರತ ತಂಡಕ್ಕೆ ಹಾರೈಸಿದ್ದಾರೆ. “ಚಕ್ ದೇ ಇಂಡಿಯಾ! ಜಗತ್ತನ್ನು ನೀಲಿ ಬಣ್ಣ ಮಾಡೋಣ ಹುಡುಗರೇ! ನಿಮ್ಮ ವಿಶ್ವಕಪ್ ಪಯಣಕ್ಕೆ ಶುಭವಾಗಲಿ. ಟ್ರೋಫಿಯನ್ನು ಮನೆಗೆ ತನ್ನಿ ಎಂದು ಟ್ವಿಟರ್ನಲ್ಲಿ ಬರೆದಿದ್ದಾರೆ. ಈ ಮೂಲಕ ಮತ್ತೊಮ್ಮೆ ಭಾರತೀಯರ ಹೃದಯ ಗೆದ್ದಿದ್ದಾರೆ.
ಉತ್ತಮ ಫಾರ್ಮ್ನಲ್ಲಿದ್ದರೂ ಕಳೆದ ಒಂದು ವರ್ಷಗಳಿಂದ ಧವನ್ ಅವರಿಗೆ ಭಾರತ ತಂಡದಲ್ಲಿ ಅವಕಾಶ ನೀಡದೆ ಕಡೆಗಣಿಸಲಾಗಿದೆ. ಆದರೂ ಈ ವಿಚಾರದ ಬಗ್ಗೆ ಧವನ್ ಇದುವರೆಗೆ ಆಯ್ಕೆ ಸಮಿತಿಯ ಬಗ್ಗೆಯಾಗಲಿ ಬಿಸಿಸಿಐ ವಿರುದ್ಧವೂ ಯಾವುದೇ ಆಕ್ಷೇಪ ಮತ್ತು ಆರೋಪವನ್ನು ಮಾಡಿಲ್ಲ. ಭಾರತ ತಂಡ ವಿಶ್ವಕಪ್ ಗೆಲ್ಲಬೇಕು ಎನ್ನುವುದು ಅವರ ಕನಸಗಿದೆ.
ದೇವರಲ್ಲಿ ಪ್ರಾರ್ಥನೆ
ಕೆಳವು ದಿನಗಳ ಹಿಂದೆ ಧವನ್ ಅವರು ಉಜ್ಜಯಿನಿಯ(Ujjain) ಬಾಬಾ ಮಹಾಕಾಳೇಶ್ವರದ ಜ್ಯೋತಿರ್ಲಿಂಗ (Mahakaleshwar Temple) ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದರು. ಪ್ರಾರ್ಥನೆ ಸಲ್ಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಧವನ್, “ನಾನು ದೇವರ ಆಶೀರ್ವಾದ ಪಡೆಯಲು ಬಂದಿದ್ದೇನೆ ಮತ್ತು ಮುಂಬರುವ ಏಕದಿನ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾದ ಯಶಸ್ಸಿಗೆ ಪ್ರಾರ್ಥಿಸಿದ್ದೇನೆ. ಭಾರತ ವಿಶ್ವಕಪ್ ಗೆಲ್ಲಲಿ ಎಂಬುದು ಎಲ್ಲರ ಆಶಯವಾಗಿದ್ದು, ನಾನು ಕೂಡ ಅದೇ ಹಾರೈಕೆಯನ್ನು ಮಾಡುತ್ತೇನೆ” ಎಂದು ಹೇಳಿದ್ದರು.
Chak De India! 🇮🇳 Let's paint the world blue, boys! All the best on your World Cup journey. Bring that trophy home! 🏏🏆 #TeamIndia #WorldCup2023 pic.twitter.com/pjC78lle4v
— Shikhar Dhawan (@SDhawan25) October 5, 2023
ಕಳೆದ ವಿಶ್ವಕಪ್‌ನಲ್ಲಿ ಶತಕ
ಶಿಖರ್ ಧವನ್ ಅವರು 2013 ಹಾಗೂ 2017ರ ಚಾಂಪಿಯನ್ಸ್ ಟ್ರೋಫಿ, 2015ರ ವಿಶ್ವಕಪ್ ಟೂರ್ನಿ ಹಾಗೂ 2019ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ಪರ ಅಮೋಘ ಪ್ರದರ್ಶನ ತೋರಿದ್ದರು. 2019ರಲ್ಲಿ ಲಂಡನ್ನಲ್ಲಿ ನಡೆದ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸ್ಫೋಟಕ ಬ್ಯಾಟಿಂಗ್ ನಡೆಸಿ ಶತಕ ಬಾರಿಸಿದ್ದರು. ಆದರೆ ಅದೇ ಪಂದ್ಯದಲ್ಲಿ ಹೆಬ್ಬೆರಳಿಗೆ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದಿದ್ದರು. ಇದಾದ ಬಳಿಕ ಅವರಿಗೆ ಸರಿಯಾದ ಅವಕಾಶ ಸಿಗಲೇ ಇಲ್ಲ.
ಇದನ್ನೂ ಓದಿ ICC World Cup 2023: ಮಳೆ ಬಂದರೆ ವಿಶ್ವಕಪ್‌ನಲ್ಲಿ ಮೀಸಲು ದಿನ ಇದೆಯೇ? ಐಸಿಸಿ ಕೈಗೊಂಡ ನಿರ್ಧಾರ ಏನು?
ಶಿಖರ್ ಧವನ್ ಅವರು ಭಾರತ ಪರ ಒಟ್ಟು 167 ಏಕದಿನ ಪಂದ್ಯಗಳನ್ನು ಆಡಿದ್ದು, 6793 ರನ್ ಬಾರಿಸಿದ್ದಾರೆ. ಇದರಲ್ಲಿ 39 ಅಧರ್ಶತಕ ಮತ್ತು 17 ಶತಕ ಒಳಗೊಂಡಿದೆ. 143 ರನ್ ಅವರ ಗರಿಷ್ಠ ಮೊತ್ತವಾಗಿದೆ. ಟೆಸ್ಟ್ ಕ್ರಿಕೆಟ್ನಲ್ಲಿ 34 ಪಂದ್ಯ ಆಡಿ 2315 ಗಳಿಸಿದ್ದಾರೆ. 7 ಶತಕ ಮತ್ತು 5 ಅರ್ಧಶತಕ ಒಳಗೊಂಡಿದೆ. ಟಿ20ಯಲ್ಲಿ ಉತ್ತಮ ದಾಖಲೆ ಹೊಂದಿರುವ ಧವನ್ 68 ಪಂದ್ಯ ಆಡಿ 1759 ರನ್ ಕಲೆಹಾಕಿದ್ದಾರೆ. 11 ಅರ್ಧಶತಕ ಬಾರಿಸಿದ್ದಾರೆ.
ವಿಚ್ಛೇದನ ಪುರಸ್ಕರಿಸಿದ ದಿಲ್ಲಿ ಕೋರ್ಟ್
ಧವನ್ (Shikhar Dhawan) ಹಾಗೂ ಪತ್ನಿ ಆಯೆಷಾ ಮುಖರ್ಜಿ ನಡುವಿನ ವಿಚ್ಛೇದನ ಪ್ರಕರಣವನ್ನು ದೆಹಲಿಯ ಕೌಟುಂಬಿಕ ನ್ಯಾಯಾಲಯ ಪುರಸ್ಕರಿಸಿದೆ. ನ್ಯಾಯಾಧೀಶ ಹರೀಶ್ ಕುಮಾರ್ ಅವರು ಧವನ್ ತಮ್ಮ ಹೆಂಡತಿಯ ವಿರುದ್ಧದ ವಿಚ್ಛೇದನ ಅರ್ಜಿಯಲ್ಲಿ ಮಾಡಿದ ಎಲ್ಲ ಆರೋಪಗಳನ್ನು ಒಪ್ಪಿಕೊಂಡರು. ಪತ್ನಿ ಈ ಆರೋಪಗಳನ್ನು ಪ್ರಶ್ನಿಸಲಿಲ್ಲ ಮತ್ತು ತನ್ನನ್ನು ಸಮರ್ಥಿಸಿಕೊಳ್ಳಲು ವಿಫಲರಾಗಿರುವ ಕಾರಣ ನ್ಯಾಯಾಲಯ ಈ ಪ್ರಕರಣವನ್ನು ಪುರಸ್ಕರಿಸಿದೆ.