Site icon Vistara News

Shivam Dube: ಯುವರಾಜ್​, ಕೊಹ್ಲಿ ಅವರಿದ್ದ ಎಲೈಟ್‌ ಕ್ಲಬ್‌ ಸೇರಿದ ಶಿವಂ ದುಬೆ

Shivam Dube

ಮೊಹಾಲಿ: ಗುರುವಾರ ನಡೆದ ಅಫಘಾನಿಸ್ತಾನ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ(India vs Afghanistan, 1st T20I) ಒಂದು ವಿಕೆಟ್ ಮತ್ತು ಅಜೇಯ ಅರ್ಧಶತಕ ಬಾರಿಸಿ ಭಾರತ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಶಿವಂ ದುಬೆ(Shivam Dube) ವಿಶೇಷ ದಾಖಲೆಯೊಂದನ್ನು ಬರೆದಿದ್ದಾರೆ. ಯುವರಾಜ್​ ಸಿಂಗ್(Yuvraj Singh)​ ಮತ್ತು ವಿರಾಟ್​ ಕೊಹ್ಲಿ(Virat Kohli) ಅವರಿದ್ದ ಎಲೈಟ್​ ಕ್ಲಬ್‌ ಸೇರಿದ್ದಾರೆ.

ಚೇಸಿಂಗ್​ ವೇಳೆ ದುಬೆ 40 ಎಸೆತಗಳನ್ನು ಎದುರಿಸಿ ಅಜೇಯ 60 ರನ್ ಗಳಿಸಿ ಭಾರತಕ್ಕೆ 6 ವಿಮಕೆಟ್​ಗಳ ಅಂತರದ ಗೆಲುವು ತಂದುಕೊಟ್ಟರು. ದುಬೆ ಅವರ ಮ್ಯಾಚ್​ ವಿನ್ನಿಂಗ್ ಇನ್ನಿಂಗ್ಸ್​ನಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್​ಗಳು ಸಿಡಿಯಿತು. ಬೌಲಿಂಗ್​ನಲ್ಲಿಯೂ ಮಿಂಚಿದ ದುಬೆ 2 ಓವರ್​ ಎಸೆದು ಕೇವಲ 9 ರನ್​ ಬಿಟ್ಟುಕೊಟ್ಟು 1 ವಿಕೆಟ್​ ಕಿತ್ತರು. ಈ ಸಾಧನೆಯೊಂದಿಗೆ ಭಾರತ ಪರ ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ಅರ್ಧಶತಕ ಹಾಗೂ ಒಂದು ವಿಕೆಟ್ ಪಡೆದ ನಾಲ್ಕನೇ ಆಟಗಾರ ಎನಿಸಿಕೊಂಡರು.

ಇದಕ್ಕೂ ಮುನ್ನ ಹಾರ್ದಿಕ್ ಪಾಂಡ್ಯ, ಯುವರಾಜ್ ಸಿಂಗ್ ಮತ್ತು ವಿರಾಟ್ ಕೊಹ್ಲಿ ಈ ಸಾಧನೆ ಮಾಡಿದ್ದರು. ಅತ್ಯಧಿಕ ಬಾರಿ ಭಾರತ ಪರ ಈ ದಾಖಲೆ ಮಾಡಿದ್ದು ಯುವರಾಜ್​ ಸಿಂಗ್​. ಒಟ್ಟು 3 ಬಾರಿ ಯುವಿ ಪಂದ್ಯವೊಂದರಲ್ಲಿ 50 ಪ್ಲಸ್​ ರನ್​ ಮತ್ತು ವಿಕೆಟ್​ ಕಿತ್ತ ಸಾಧನೆ ಮಾಡಿದ್ದಾರೆ. ಕಿಂಗ್​ ಖ್ಯಾತಿಯ ವಿರಾಟ್​ ಕೊಹ್ಲಿ 2 ಬಾರಿ ಮತ್ತು ಹಾರ್ದಿಕ್ ಪಾಂಡ್ಯ 1 ಬಾರಿ ಈ ಸಾಧನೆ ಮಾಡಿದ್ದಾರೆ. ಇದೀಗ ದುಬೆ ಕೂಡ 1 ಬಾರಿ ಈ ಸಾಧನೆ ಮಾಡಿ ಎಲೈಟ್​ ಪಟ್ಟಿಗೆ ಸೇರಿದ್ದಾರೆ.

ಇದನ್ನೂ ಓದಿ Rohit Sharma: ಬೇಜವಾಬ್ದಾರಿ ತೋರಿದ ಗಿಲ್​ಗೆ ಮೈದಾನದಲ್ಲೇ ಜಾಡಿಸಿದ ರೋಹಿತ್​; ವಿಡಿಯೊ ವೈರಲ್​

ಪಂದ್ಯದಲ್ಲಿ ಆಲ್​ರೌಂಡರ್​ ಪ್ರದರ್ಶನ ತೋರಿದ ಶಿವಂ ದುಬೆಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಕೂಡ ಒಲಿಯಿತು. ತಮ್ಮ ಈ ಬ್ಯಾಟಿಂಗ್​ ಪ್ರದರ್ಶನಕ್ಕೆ ಮಹೇಂದ್ರ ಸಿಂಗ್ ಧೋನಿ ನೀಡಿದ ಅತ್ಯಮೂಲ್ಯ ಸಲಹೆಯೇ ಕಾರಣ ಎಂದು ದುಬೆ ಪಂದ್ಯದ ಬಳಿಕ ಹೇಳಿದರು. ಕಳೆದ ವರ್ಷ ನಡೆದ ಐಪಿಎಲ್​ನಲ್ಲಿ ದುಬೆ ಚೆನ್ನೈ ತಂಡದ ಪರ ಶ್ರೇಷ್ಠ ಬ್ಯಾಟಿಂಗ್​ ಪ್ರದರ್ಶನ ತೋರುವ ಮೂಲಕ ಗಮನ ಸೆಳೆದಿದ್ದರು. ಅವರ ಈ ಪ್ರದರ್ಶನ ಕಂಡು ಏಷ್ಯನ್ ಗೇಮ್ಸ್ 2023ರ ಕ್ರಿಕೆಟ್​ ಸರಣಿಯಲ್ಲಿಯೂ ಅವಕಾಶ ನೀಡಲಾಗಿತ್ತು. ಇಲ್ಲಿಯೂ ನಿರೀಕ್ಷಿತಮಟ್ಟದ ಬ್ಯಾಟಿಂಗ್​ ತೋರ್ಪಡಿಸಿದ್ದರು.

ಪಂದ್ಯ ಗೆದ್ದ ಭಾರತ


ಬುಧವಾರ ಇಲ್ಲಿನ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್​ ಐಎಸ್​ ಬಿಂದ್ರಾ ಸ್ಟೇಡಿಯಮ್​ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದ ಭಾರತ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್​ ಮಾಡಿದ ಪ್ರವಾಸಿ ತಂಡ 5 ವಿಕೆಟ್​ಗೆ 158 ರನ್​ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಭಾರತ ತಂಡ ಇನ್ನೂ 15 ಎಸೆತಗಳು ಬಾಕಿ ಇರುವಂತೆಯೇ 4 ವಿಕೆಟ್​ ನಷ್ಟಕ್ಕೆ 159 ರನ್ ಬಾರಿಸಿ 6 ವಿಕೆಟ್​ಗಳ ಅಂತರದ ಗೆಲುವು ಸಾಧಿಸಿತು.

Exit mobile version