ಕರಾಚಿ: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರ ಶೋಯೆಬ್ ಅಖ್ತರ್(Shoaib Akhtar) ಹಲವು ಬಾರಿ ಭಾರತ ಆಟಗಾರರ ಪರ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಇದೀಗ ಪಾಕಿಸ್ತಾನ ಕ್ರಿಕೆಟ್ ಆಟಗಾರರು ಭಾರತದ ಹಣದಿಂದ ಬುದುಕುತ್ತಿದ್ದಾರೆ ಎಂಬ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಏಷ್ಯಾ ಕಪ್(Asia Cup 2023) ಮತ್ತು ಏಕದಿನ ವಿಶ್ವಕಪ್ಗೆ(ICC World Cup 2023) ಕೆಲವೇ ದಿನಗಳು ಬಾಕಿ ಇರುವಾಗ ಅಖ್ತರ್ ಈ ಹೇಳಿಕೆ ನೀಡಿರುವುದು ಪಾಕಿಸ್ತಾನಕ್ಕೆ ಮುಜುಗರ ಉಂಟುಮಾಡಿದೆ. ಹಿರಿಯ ಕ್ರೀಡಾ ಪತ್ರಕರ್ತ ಬೋರಿಯಾ ಮಜುಂದಾರ್ ಅವರೊಂದಿನ ವಿಶೇಷ ಸಂದರ್ಶನವೊಂದರಲ್ಲಿ ಮಾತನಾಡಿದ ಅಖ್ತರ್, ಬಿಸಿಸಿಐ(BCCI) ಪ್ರಸ್ತುತ ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿಯಾಗಿದೆ. ಐಸಿಸಿಯ ಆದಾಯಕ್ಕೆ ಭಾರತೀಯ ಕ್ರಿಕೆಟ್ ಮಂಡಳಿ ಅತಿ ಹೆಚ್ಚು ಕೊಡುಗೆ ನೀಡುತ್ತಿದೆ. ಭಾರತದಿಂದ ಪಾಕಿಸ್ತಾನ ಮಾತ್ರವಲ್ಲದೆ ಹಲವು ಕ್ರಿಕೆಟ್ ಮಂಡಳಿಗಳು ನೆರವು ಪಡೆಯುತ್ತಿವೆ. ಹೀಗಾಗಿ ಪಾಕಿಸ್ತಾನದ ಆಟಗಾರರು ಭಾರತದ ಬಿಸಿಸಿಐಯಿಂದ ಬರುತ್ತಿರುವ ಹಣದಿಂದ ಬದುಕುತ್ತಿದ್ದಾರೆ ಎಂದಿದ್ದಾರೆ.
ಬಿಸಿಸಿಐ ದುಡ್ಡಿನಿಂದ ಪಾಕ್ನಲ್ಲಿ ದೇಶಿಯ ಕ್ರಿಕೆಟ್
ವಿಶ್ವ ಕ್ರಿಕೆಟ್‌ನಲ್ಲಿ ಬಿಸಿಸಿಐ ಎಷ್ಟು ಪ್ರಬಲವಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅಖ್ತರ್, ಭಾರತೀಯ ಕ್ರಿಕೆಟ್ ಮಂಡಳಿಯ ಮೂಲಕ ಐಸಿಸಿ ಗಳಿಸುವ ಆದಾಯದಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಪಾಲು ಪಡೆಯುತ್ತದೆ. ಐಸಿಸಿಯಿಂದ ಪಡೆದ ಈ ಹಣದಿಂದಾಗಿ ಪಾಕ್ ಕ್ರಿಕೆಟ್ ಮಂಡಳಿ ದೇಶೀಯ ಕ್ರಿಕೆಟಿಗರಿಗೆ ಪಂದ್ಯದ ಶುಲ್ಕವನ್ನು ಪಾವತಿಸಲು ಸಾಧ್ಯವಾಗುತ್ತದೆ. ಒಂದೊಮ್ಮೆ ಬಿಸಿಸಿಐ ಈ ನಿರ್ಧಾರದಿಂದ ಹಿಂದೆ ಸರಿದರೆ ಪಾಕ್ ಕ್ರಿಕೆಟ್ ಮಂಡಳಿಯ ಪರಿಸ್ಥಿತಿಯನ್ನು ಊಹಿಸಲು ಸಾಧ್ಯವಿಲ್ಲ. ನಾವು ಭಾರತವನ್ನು ಎಷ್ಟೇ ವಿರೋಧ ಮಾಡಿದರೂ ಅವರ ಋಣದಿಂದಲೇ ನಮ್ಮ ದೇಶದ ಕ್ರಿಕೆಟ್ ಜೀವಂತವಾಗಿದೆ ಎಂದು ಅಖ್ತರ್ ಹೇಳಿದರು.
ವಿಶ್ವಕಪ್ ರೋಮಾಂಚನವಾಗಿ ಸಾಗಲಿದೆ
ಭಾರತ ಆತಿಥ್ಯದಲ್ಲಿ ನಡೆಯುವ ಏಕದಿನ ವಿಶ್ವಕಪ್ ಕುರಿತಾಗಿಯೂ ಮಾತನಾಡಿದ ಅಖ್ತರ್, ಈ ಬಾರಿಯ ವಿಶ್ವಕಪ್ ಟೂರ್ನಿ ಅತ್ಯಂತ ರೋಮಾಂಚಕಾರಿಯಾಗಿ ಮತ್ತು ಯಶಸ್ವಿಯಾಗಿ ನಡೆಯಲಿದೆ. ಈ ವಿಶ್ವಕಪ್‌ನಿಂದ ಬಿಸಿಸಿಐ ಮತ್ತು ಐಸಿಸಿ ಸಾಕಷ್ಟು ಹಣ ಗಳಿಸಲಿದೆ. ಇದರೊಂದಿಗೆ ಹಲವು ದೇಶದ ಕ್ರಿಕೆಟ್ ಮಂಡಳಿಗೆ ದೊಡ್ಡ ಮಟ್ಟದ ಹಣ ಹರಿದು ಬರಲಿದೆ. ಹಾಗಾಗಿ ಭಾರತ ಈ ಬಾರಿಯ ವಿಶ್ವಕಪ್‌ನಿಂದ ಸಾಕಷ್ಟು ಹಣ ಗಳಿಸಬೇಕೆಂದು ನಾನು ಬಯಸುತ್ತೇನೆ. ಅನೇಕರು ಇದನ್ನು ಹೇಳುವುದಿಲ್ಲ ಆದರೆ ಐಸಿಸಿಯಲ್ಲಿ ಭಾರತ ಗಳಿಸುವ ಪಾಲು ಪಾಕಿಸ್ತಾನಕ್ಕೂ ಸಿಗುತ್ತದೆ ಎಂದು ನಾನು ಹಿಂಜರಿಕೆಯಿಲ್ಲದೆ ಹೇಳುತ್ತೇನೆ ಎಂದು ಅವರು ಹೇಳಿದರು.
ಇದನ್ನೂ ಓದಿ Shoaib Akhtar : ಎಲ್ಲಿದ್ದಳು ಇಲ್ಲಿ ತನಕ; ಅಖ್ತರ್ ಪುತ್ರಿಯ ಚಿತ್ರ ನೋಡಿದ ನೆಟ್ಟಿಗರ ಅಚ್ಚರಿ!
ಪಾಕ್ ತಂಡಕ್ಕೆ ಹೆಚ್ಚುವರಿ ಭದ್ರತೆ ಇಲ್ಲ
ಅಕ್ಟೋಬರ್ 5ರಿಂದ ಭಾರತದಲ್ಲಿ ಆರಂಭಗೊಳ್ಳಲಿರುವ ಪ್ರತಿಷ್ಠಿತ ಏಕದಿನ ವಿಶ್ವಕಪ್ನಲ್ಲಿ(ICC World Cup 2023) ಪಾಕಿಸ್ತಾನದ ಭಾಗಿಯಾಗುವ ಕುರಿತಂತೆ ಇದ್ದ ಎಲ್ಲ ಅನುಮಾನಗಳು ಕಳೆದ ವಾರ ಇತ್ಯರ್ಥಗೊಂಡಿತ್ತು. ಪಾಕ್ ವಿದೇಶಾಂಗ ಇಲಾಖೆಯು ಪಾಕ್ ಕ್ರಿಕೆಟ್ ತಂಡಕ್ಕೆ ಭಾರತ ಪ್ರವಾಸ ಕೈಗೊಳ್ಳಲು ಅನುಮತಿ ನೀಡಿತ್ತು. ಇದೀಗ ಭಾರತಕ್ಕೆ ಬರುವ ಪಾಕಿಸ್ತಾನ ತಂಡಕ್ಕೆ ಹೆಚ್ಚುವರಿ ಭದ್ರತೆ ನೀಡಲಾಗುವುದಿಲ್ಲ ಎಂದು ಭಾರತ ಸರ್ಕಾರ ತಿಳಿಸಿದೆ.
ಯಾವುದೇ ಕಾರಣಕ್ಕೂ ಹೆಚ್ಚುವರಿ ಭದ್ರತೆ ಇಲ್ಲ
ಪಾಕಿಸ್ತಾನದ ಮನವಿಯ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ(Ministry of External Affairs of India) ಅರಿಂದಮ್ ಬಾಗ್ಚಿ(Arindam Bagchi), ವಿಶ್ವಕಪ್‌ಗಾಗಿ ಭಾರತಕ್ಕೆ ಬರುವ ಇತರ ಎಲ್ಲ ತಂಡಗಳಂತೆ ಪಾಕಿಸ್ತಾನ ತಂಡಕ್ಕೂ ಆತಿಥ್ಯ ನೀಡಲಾಗುತ್ತದೆ. ಯಾವುದೇ ವಿಶೇಷ ಭದ್ರತೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಪಾಕ್ನ ಕುತಂತ್ರದ ಮನವಿಗೆ ಹಿನ್ನಡೆಯಾಗಿದೆ.