ಕರಾಚಿ: ಪಾಕಿಸ್ತಾನದ ಮಾಜಿ ವೇಗಿ ಶೋಯಿಬ್ ಅಖ್ತರ್(Shoaib Akhtar) ಅವರು ಮೂರನೇ ಮಗುವಿನ ತಂದೆಯಾಗಿದ್ದಾರೆ. ಅವರ ಪತ್ನಿ ರುಬಾಬ್ ಖಾನ್(Rubab Khan) ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ವಿಚಾರವನ್ನು ಅಖ್ತರ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯ ಮೂಲಕ ತಿಳಿಸಿದ್ದಾರೆ. ಮಗುವಿಗೆ ನೂರಾ ಅಲಿ ಅಖ್ತರ್ (Nooreh Ali Akhtar) ಎಂದು ಹೆಸರಿಡಲಾಗಿದೆ.
“ಮೈಕೇಲ್ ಮತ್ತು ಮುಜಾದಿದ್‌ಗೆ ಈಗ ಒಬ್ಬ ತಂಗಿ ಇದ್ದಾರೆ. ಅಲ್ಲಾಹು ನಮಗೆ ಹೆಣ್ಣು ಮಗುವನ್ನು ಅನುಗ್ರಹಿಸಿದ್ದಾನೆ. ನೂರಾ ಅಲಿ ಅಖ್ತರ್ ಅವರನ್ನು ಈ ಜಗತ್ತಿಗೆ ಸ್ವಾಗತಿಸಿದ್ದೇವೆ” ಎಂದು ಅಖ್ತರ್ ಮಗುವಿನ ಫೋಟೊದೊಂದಿಗೆ ಇನ್ಸ್ಟಾಗ್ರಾಮ್ನಲ್ಲಿ ಬರೆದಿದ್ದಾರೆ. ಮಾರ್ಚ್ 1ರಂದು ಮಗುವಿನ ಜನನವಾಗಿದೆ.
ಅಖ್ತರ್ಗೆ ಈಗಾಗಲೇ ಇಬ್ಬರು ಗಂಡು ಮಕ್ಕಳಿದ್ದಾರೆ. ಮೊದಲ ಮಗು ಮೊಹಮ್ಮದ್ ಮಿಕೈಲ್ ಅಲಿ 2016 ರಲ್ಲಿ ಜನಿಸಿದರೆ, ಎರಡನೇ ಮಗು ಮೊಹಮ್ಮದ್ ಮುಜದ್ದದ್ ಅಲಿ 2019 ರಲ್ಲಿ ಜನಿಸಿತ್ತು. ಇದೀಗ 48ನೇ ವಯಸ್ಸಿನಲ್ಲಿ ಮೂರನೇ ಮಗುವಿನ ತಂದೆಯಾಗಿದ್ದಾರೆ.
ಪಾಕ್ ವೇಗಿಗೆ ಭಾರತದಲ್ಲೂ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಪಾಕಿಸ್ತಾನದ ಪಂಜಾಬ್ ಪ್ರದೇಶದ ರಾವಲ್ಪಿಂಡಿಯಲ್ಲಿ ಜನಿಸಿದ ಅಖ್ತರ್ “ರಾವಲ್ಪಿಂಡಿ ಎಕ್ಸ್‌ಪ್ರೆಸ್” ಎಂದೇ ಕ್ರಿಕೆಟ್‌ನಲ್ಲಿ ಪ್ರಸಿದ್ಧಿ ಪಡೆದಿದ್ದಾರೆ. 2022ರಲ್ಲಿ ಅಖ್ತರ್ ಅವರು ‘ರಾವಲ್ಪಿಂಡಿ ಎಕ್ಸ್‌ಪ್ರೆಸ್; ರೇಸಿಂಗ್ ಎಗೇನ್ಸ್ಟ್ ದಿ ಆಡ್ಸ್’ ಎಂದ ಶೀರ್ಷಿಕೆಯ ತಮ್ಮ ಜೀವನಚರಿತ್ರೆಯ ಚಿತ್ರವನ್ನು ಘೋಷಣೆ ಮಾಡಿದ್ದರು. ಆದರೆ ಈ ಚಿತ್ರದ ನಿರ್ಮಾಣ ಆರಂಭವಾಗಿರುವ ಬಗ್ಗೆ ಸದ್ಯ ಇದುವರೆಗೆ ಯಾವುದೇ ಮಾಹಿತಿ ಇಲ್ಲ.
ಶೋಯೆಬ್ ಅಖ್ತರ್ 2011ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದರು. ಪಾಕ್ ಪರ 163 ಏಕ ದಿನ, 14 ಟಿ20 ಮತ್ತು 46 ಟೆಸ್ಟ್‌ಗಳಲ್ಲಿ ಕಣಕ್ಕಿಳಿದಿದ್ದಾರೆ. ಏಕ ದಿನ ಕ್ರಿಕೆಟ್‌ನಲ್ಲಿ 247 ಹಾಗೂ ಟಿ20ಯಲ್ಲಿ 19 ವಿಕೆಟ್‌ಗಳನ್ನು ಪಡೆದಿದ್ದಾರೆ.
ಇದನ್ನೂ ಓದಿ Shoaib Akhtar: ಭಾರತದ ಹಣದಿಂದ ಪಾಕ್ ಆಟಗಾರರು ಬದುಕುತ್ತಿದ್ದಾರೆ; ಅಖ್ತರ್ ಬೌನ್ಸರ್
ಕಳೆದ ವರ್ಷ ನಡೆದಿದ್ದ ಏಷ್ಯಾಕಪ್ನಲ್ಲಿ(Asia Cup 2023) ಪಾಕಿಸ್ತಾನ(IND vs PAK) ತಂಡವನ್ನು(IND vs PAK) ಫೈನಲ್ ರೇಸ್ನಿಂದ ಹೊರ ಹಾಕಲು ಭಾರತ ತಂಡ ಒಂದು ರೀತಿಯ ಫಿಕ್ಸಿಂಗ್ ನಡೆಸುತ್ತಿದೆ ಎಂದು ಹೇಳಿದ್ದ ನೆಟ್ಟಿಗರೊಬ್ಬರಿಗೆ ಶೋಯೆಬ್ ಅಖ್ತರ್ ಸರಿಯಾಗಿ ಜಾಡಿಸಿದ್ದರು. ಅಸಂಬದ್ಧ ಹೇಳಿಕೆ ನೀಡಿದರೆ ಜಾಗ್ರತೆ ಎಂದು ಎಚ್ಚರಿಸಿದ್ದರು.
ಭಾರತದ ಎದುರು ಪಾಕಿಸ್ತಾನ ಗೆಲ್ಲಲಿಲ್ಲ ಎಂಬ ಮಾತ್ರಕ್ಕೆ ಈ ಕೀಳುಮಟ್ಟದ ಹೇಳಿಕೆ ನೀಡುವುದು ಸರಿಯಲ್ಲ. ಇಂತಹ ಹೇಳಿಕೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಇನ್ನು ಮಂದೆ ನೀಡಿದರೆ ಎಚ್ಚರಿಕೆ. ಭಾರತ ತನ್ನ ಆಟದ ಸಾಮರ್ಥ್ಯದಿಂದ ಗೆದ್ದಿದೆ. ನಮ್ಮವರಿಗೆ ಇದು ಸಾಧ್ಯವಾಗಿಲ್ಲ. ಸೋಲು ಕಂಡ ಬಳಿಕ ಭಾರತದ ಮೇಲೆ ಸುಮ್ಮನೆ ಗೂಬೆ ಕೂರಿಸೋದು ಬಿಟ್ಟುಬಿಡಿ” ಎಂದು ಸರಿಯಾಗಿ ಜಾಡಿಸಿದ್ದರು. ಅಖ್ತರ್ ಭಾರತ ತಂಡದ ಬಗ್ಗೆ ಹಲವು ಬಾರಿ ಆರೋಪ ಮಾಡಿದ್ದರೂ ಕೂಡ ಕೆಲವೊಮ್ಮೆ ಬೆಂಬಲವನ್ನು ಸೂಚಿಸಿದ್ದಾರೆ.