ಕರಾಚಿ: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶೋಯೆಬ್ ಮಲಿಕ್ ಮತ್ತು ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರು ತಮ್ಮ 12 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಲು ಮುಂದಾಗಿದ್ದಾರೆ. ಕೆಲ ಕಾನೂನು ಪ್ರಕ್ರಿಯೆಗಳು ಮುಗಿದ ಬಳಿಕ ವಿಚ್ಛೇದನದ ಮಾಹಿತಿಯನ್ನು ಅಧಿಕೃತವಾಗಿ ಘೋಷಿಸಲಿದ್ದಾರೆ ಎಂಬ ವದಂತಿಗಳು ಹರಿದಾಡಿದ್ದವು. ಈ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಚರ್ಚೆಯೂ ನಡೆದಿತ್ತು. ಆದರೆ ಇದೀಗ ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಒಟ್ಟಿಗೆ ಬರಲು ಸಜ್ಜಾಗುತ್ತಿದ್ದಾರೆ.
ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಡಿವೋರ್ಸ್ ವಿಚಾರವಾಗಿ ಕಳೆದ ವಾರ ಮೊದಲ ಬಾರಿ ಪ್ರತಿಕ್ರಿಯೆ ನೀಡಿದ್ದ ಮಲಿಕ್, ಇದು ನಮ್ಮ ವೈಯಕ್ತಿಕ ವಿಚಾರ. ಈ ಬಗ್ಗೆ ನಾನಾಗಲಿ, ನನ್ನ ಹೆಂಡತಿಯಾಗಲಿ ಇಲ್ಲಿಯವರೆಗೆ ಯಾವುದೇ ಹೇಳಿಕೆ ನೀಡಿಲ್ಲ. ಈ ವಿಚಾರವನ್ನು ಇಲ್ಲಿಯೇ ಬಿಟ್ಟುಬಿಡಿ ಎಂದು ಹೇಳಿದ್ದರು. ಆದರೂ ಸಾಮಾಜಿಕ ಜಾಲತಾಣದಲ್ಲಿ ಈ ಜೋಡಿ ಮಧ್ಯೆ ಎಲ್ಲವೂ ಸರಿಯಿಲ್ಲ ಎಂಬ ಸುದ್ದಿಯನ್ನೇ ಹಬ್ಬುತಿತ್ತು. ಇದೀಗ ಶೋಯೆಬ್ ಮಲಿಕ್ ಪತ್ನಿ ಸಾನಿಯಾ ಮಿರ್ಜಾ ಜತೆಗಿರುವ ವಿಡಿಯೊವೊಂದನ್ನು ಹಂಚಿಕೊಂಡಿದ್ದಾರೆ.
ಹೌದು ಸಾನಿಯಾ ಮಿರ್ಜಾ ಮತ್ತು ಮಲಿಕ್ ಜೋಡಿ ‘ದಿ ಮಿರ್ಜಾ ಮಲಿಕ್ ಶೋ’ ಎನ್ನುವ ಟಿವಿ ಕಾರ್ಯಕ್ರಮವೊಂದನ್ನು ನಡೆಸಿಕೊಡಲಿದ್ದಾರೆ. ಕಾರ್ಯಕ್ರಮದ ಪ್ರೋಮೊ ವಿಡಿಯೊವನ್ನು ಶೋಯೆಬ್ ಮಲಿಕ್ ಭಾನುವಾರ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಈ ಕಾರ್ಯಕ್ರಮ ಒಟಿಟಿ ಪ್ಲಾಟ್‌ಫಾರ್ಮ್ ಉರ್ದುಫ್ಲಿಕ್ಸ್ ನಲ್ಲಿ ಪ್ರಸಾರವಾಗಲಿದೆ. ಇದೀಗ ಈ ಜೋಡಿ ಜತೆಯಾಗಿ ಕಾಣಿಸಿಕೊಳ್ಳುವ ಮೂಲಕ ತಾವು ವಿಚ್ಛೇದನ ಪಡೆದಿಲ್ಲ ಎಂಬ ಸಂದೇಶ ನೀಡಿದಂತಿದೆ.
ಇದನ್ನೂ ಓದಿ | Sania Mirza | ನಮ್ಮನ್ನು ಸುಮ್ಮನೆ ಬಿಟ್ಟುಬಿಡಿ, ಡೈವೋರ್ಸ್ ಪ್ರಶ್ನೆಗೆ ಶೋಯೆಬ್ ಮಲಿಕ್ ಕೊಟ್ಟ ಉತ್ತರವಿದು