Site icon Vistara News

Shoaib Malik: ಮ್ಯಾಚ್​ ಫಿಕ್ಸಿಂಗ್​ ಮಾಡಿದರೇ ಶೋಯೆಬ್ ಮಲಿಕ್?; ತಂಡದ ಮಾಲೀಕನ ಸ್ಪಷ್ಟನೆ ಏನು?

Shoaib Malik

ದುಬೈ: ಭಾರತದ ಟೆನಿಸ್‌ ತಾರೆ ಸಾನಿಯಾ ಮಿರ್ಜಾ(Sania Mirza) ಅವರಿಂದ ವಿಚ್ಛೇದನ ಪಡೆದು ಮೂರನೇ ಮದುವೆಯಾದ ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶೋಯೆಬ್ ಮಲಿಕ್(Shoaib Malik) ವಿರುದ್ಧದ ಮ್ಯಾಚ್ ಫಿಕ್ಸಿಂಗ್ ಆರೋಪ ಕೇಳಿ ಬಂದಿದೆ. ಅಲ್ಲದೆ ಬಾಂಗ್ಲಾದೇಶ ಪ್ರೀಮಿಯರ್ ಲೀಗ್​ನಿಂದ(BPL) ಅವರನ್ನು ಹೊರಹಾಕಲಾಗಿದೆ ಎಂದು ವರದಿಯಾಗಿದೆ.

ಆದರೆ, ಬಾಂಗ್ಲಾದೇಶ ಪ್ರೀಮಿಯರ್ ಲೀಗ್ ಫ್ರಾಂಚೈಸಿ(Bangladesh Premier League) ಫಾರ್ಚೂನ್ ಬಾರಿಶಾಲ್(Fortune Barishal) ಮಾಲೀಕ ಮಿಜಾನುರ್ ರೆಹಮಾನ್(Mizanur Rahman) ಶುಕ್ರವಾರ (ಜನವರಿ 26) ಶೋಯೆಬ್ ಮಲಿಕ್ ವಿರುದ್ಧದ ಮ್ಯಾಚ್ ಫಿಕ್ಸಿಂಗ್ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಮಲಿಕ್ ಯಾವುದೇ ಫಿಕ್ಸಿಂಗ್​ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಜತೆಗೆ ಈ ಆವೃತ್ತಿಯ ಟೂರ್ನಿಯಲ್ಲಿ ಮೊದಲ ಮೂರು ಪಂದ್ಯಗಳಲ್ಲಿ ತಂಡಕ್ಕೆ ಶೋಯೆಬ್ ಮಲಿಕ್ ನೀಡಿದ ಕೊಡುಗೆಯನ್ನು ಶ್ಲಾಘಿಸಿದ್ದಾರೆ.

ವಿಡಿಯೊ ಸಂದೇಶದ ಮೂಲಕ ಸ್ಪಷ್ಟನೆ ನೀಡಿದ ಮಿಜಾನುರ್ ರೆಹಮಾನ್, ‘ಶೋಯೆಬ್ ಮಲಿಕ್ ಕುರಿತ ವದಂತಿಯ ಬಗ್ಗೆ ನಾನು ತೀವ್ರವಾಗಿ ವಿಷಾದಿಸುತ್ತೇನೆ. ಅವರೊಬ್ಬ ಶ್ರೇಷ್ಠ ಆಟಗಾರ. ಅವರು ನಮಗೆ ಅತ್ಯುತ್ತಮವಾದದ್ದನ್ನು ನೀಡಿದ್ದಾರೆ. ಹಾಗಾಗಿ ನಾವು ಅದರ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡಬಾರದು. ನಾವು ಸತತ ಎರಡು ಪಂದ್ಯಗಳನ್ನು ಕಳೆದುಕೊಂಡಿದ್ದೇವೆ ಆದ್ದರಿಂದ ನಾವು ಮುಂಬರುವ ಪಂದ್ಯಗಳತ್ತ ಗಮನ ಹರಿಸಬೇಕು ಮತ್ತು ನಾವು ಮತ್ತೆ ಗೆಲುವಿನ ಹಳಿಗೆ ಮರಳುವ ವಿಶ್ವಾಸವಿದೆ” ಎಂದು ರೆಹಮಾನ್ ಹೇಳಿದ್ದಾರೆ.

ಇದನ್ನೂ ಓದಿ Shoaib Malik: ಮೂರನೇ ಮದುವೆಯಾದ ಶೋಯೆಬ್‌ ಮಲಿಕ್‌​ ಕಾಲೆಳೆದ ಶಾಹೀದ್ ಅಫ್ರಿದಿ

ಜನವರಿ 22 ರಂದು ಬಾರಿಶಾಲ್ ಮತ್ತು ಖುಲ್ನಾ ಟೈಗರ್ಸ್ ತಂಡಗಳ ನಡುವೆ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ಬಾರಿಶಾಲ್ ಪರ ಬೌಲಿಂಗ್ ದಾಳಿಗಿಳಿದ್ದ ಮಲಿಕ್ ಕೇವಲ ಒಂದು ಓವರ್ ಬೌಲ್ ಮಾಡಿ 18 ರನ್ ನೀಡಿದ್ದರು. ಈ ಓವರ್​ನಲ್ಲಿ ಮಲಿಕ್ ಬರೋಬ್ಬರಿ 3 ನೋ ಬಾಲ್‌ಗಳನ್ನು ಎಸೆದಿದ್ದರು. ಸಾಮಾನ್ಯವಾಗಿ ವೇಗಿಗಳು ಒಂದು ಓವರ್​ನಲ್ಲಿ ಮೂರು ನೋ ಬಾಲ್ ಎಸೆದರೆ ಯಾರಿಗೂ ಅಚ್ಚರಿಯಾಗುತ್ತಿರಲಿಲ್ಲ. ಆದರೆ ಸ್ಪಿನ್​ ಬೌಲರ್​ ಒಬ್ಬರು ಸತತ ಮೂರು ನೋಬಾಲ್​ ಎಸೆದದ್ದು ನೋಡಿ ಮಲಿಕ್​ ವಿರುದ್ಧ ಫಿಕ್ಸಿಂಗ್ ಆರೋಪ ಕೇಳಿ ಬಂದಿತ್ತು.​ ಇದಾದ ಬಳಿಕ ಶೋಯೆಬ್ ಮಲಿಕ್ ಇದ್ದಕ್ಕಿದ್ದಂತೆ ಪಂದ್ಯಾವಳಿಯನ್ನು ಮಧ್ಯದಲ್ಲಿ ತೊರೆದು ದುಬೈಗೆ ತೆರಳಿದ್ದಾರೆ ಎಂದು ವರದಿಯಾಗಿತ್ತು.

ಶೋಯೆಬ್ ಮಲಿಕ್ ಬಿಪಿಎಲ್ 2024 ರಲ್ಲಿ ಫಾರ್ಚೂನ್ ಬಾರಿಶಾಲ್ ಪರ 3 ಪಂದ್ಯಗಳನ್ನು ಆಡಿದ್ದರು. ಆದಾಗ್ಯೂ, ಫಾರ್ಚೂನ್ ಬಾರಿಶಾಲ್ ಶೋಯೆಬ್ ಮಲಿಕ್ ಬದಲಿಗೆ ಪಾಕಿಸ್ತಾನದ ಸಹ ಆಟಗಾರ ಅಹ್ಮದ್ ಶೆಹ್ಜಾದ್ ಅವರನ್ನು ಟೂರ್ನಿಯ ಉಳಿದ ಭಾಗಕ್ಕೆ ಸಹಿ ಹಾಕಿಸಿದ್ದಾರೆ ಎನ್ನಲಾಗಿದೆ. ಶೋಯೆಬ್ ಮಲಿಕ್ ಏಕದಿನ ಮತ್ತು ಟೆಸ್ಟ್ ಸ್ವರೂಪದಿಂದ ನಿವೃತ್ತರಾಗಿದ್ದಾರೆ. ಆದರೆ ಟಿ20 ಮಾದರಿಯಿಂದ ನಿವೃತ್ತಿಯಾಗಿಲ್ಲ.

Exit mobile version