Site icon Vistara News

Swapnil Kusale : ಒಲಿಂಪಿಕ್ಸ್ ಪದಕ ಹೀರೋ ಸ್ವಪ್ನಿಲ್​ಗೆ ರೈಲ್ವೆಯ ಟಿಕೆಟ್ ಕಲೆಕ್ಟರ್​ ಹುದ್ದೆಯಿಂದ ಡಬಲ್​ ಪ್ರಮೋಷನ್​!

wapnil Kusale

ನವದೆಹಲಿ: ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ (Paris Olympics 2024) ಐತಿಹಾಸಿಕ ಕಂಚಿನ ಪದಕ ಗೆದ್ದಿರುವ ಭಾರತದ ಶೂಟರ್​​ ಸ್ವಪ್ನಿಲ್ ಕುಸಾಲೆ (Swapnil Kusale ) ಅವರಿಗೆ ತಾವು ಕೆಲಸ ಮಾಡುತ್ತಿರುವ ರೈಲ್ವೆ ಇಲಾಖೆಯಲ್ಲಿ ಡಬಲ್ ಪ್ರಮೋಷನ್ ಸಿಕ್ಕಿದೆ. ಅವರು ಟಿಕೆಟ್ ಕಲೆಕ್ಟರ್​ (ಟಿಟಿಇ) ಹುದ್ದೆಯಿಂದ ಮುಂಬೈನ ಕ್ರೀಡಾ ಸೆಲ್​​ನ ವಿಶೇಷ ಕರ್ತವ್ಯ ಅಧಿಕಾರಿ (ಒಎಸ್​ಡಿ) ಆಗಿ ಬಡ್ತಿ ಪಡೆದುಕೊಂಡಿದ್ದಾರೆ. ಕುಸಾಲೆ 50 ಮೀಟರ್ ರೈಫಲ್ 3 ಪೊಸಿಷನ್ಸ್ ಸ್ಪರ್ಧೆಯಲ್ಲಿ ಐತಿಹಾಸಿಕ ಪದಕ ಗೆದ್ದು ಭಾರತಕ್ಕೆ ಮೂರನೇ ಪದಕ ಗೆದ್ದುಕೊಟ್ಟರು. ಇದು ಶೂಟಿಂಗ್​ನಲ್ಲಿ ಭಾರತಕ್ಕೆ ದೊರೆತ ಮೂರನೇ ಪದಕವಾಗಿದೆ.

ಕುಸಾಲೆ 2015 ರಿಂದ ಕೇಂದ್ರ ರೈಲ್ವೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮಹಾರಾಷ್ಟ್ರದ ಕೊಲ್ಹಾಪುರ ಬಳಿಯ ಕಂಬಳ್ವಾಡಿ ಗ್ರಾಮದ 28 ವರ್ಷದ ಕುಸಾಸೆ 2012 ರಿಂದ ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಸ್ಪರ್ಧಿಸುತ್ತಿದ್ದಾರೆ. ಆದರೆ ಪ್ಯಾರಿಸ್ ಕ್ರೀಡಾಕೂಟದಲ್ಲಿ ಒಲಿಂಪಿಕ್ಸ್​ನಲ್ಲಿ ಪಾದಾರ್ಪಣೆ ಮಾಡಲು ಅವರು ಇನ್ನೂ 12 ವರ್ಷ ಕಾಯಬೇಕಾಯಿತು. ಗುರುವಾರ ಅವರು ಗೆದ್ದ ನಂತರ ಡಬಲ್ ಬಡ್ತಿ ಸಿಕ್ಕಿದೆ ಎಂದು ಈಗ ದೃಢಪಡಿಸಲಾಗಿದೆ.

1 ಕೋಟಿ ಬಹುಮಾನ ಪ್ರಕಟಿಸಿದ ಶಿಂಧೆ ಸರ್ಕಾರ

ಮುಂಬಯಿ: ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ(paris olympics 2024) ಗುರುವಾರ ನಡೆದಿದ್ದ ಪುರುಷರ 50 ಮೀ. ರೈಫಲ್​ 3 ಪೊಸಿಷನ್​ ಶೂಟಿಂಗ್​ನಲ್ಲಿ ಕಂಚಿನ ಪದಕ ಗೆದ್ದ ಮಹಾರಾಷ್ಟ್ರದ 28 ವರ್ಷದ ಸ್ವಪ್ನಿಲ್​ ಕುಸಾಲೆ(Swapnil Kusale) ಅವರ ಈ ಸಾಧನೆಯನ್ನು ಪರಿಗಣಿಸಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ(Eknath Shinde) 1 ಕೋಟಿ ಬಹುಮಾನ ಪ್ರಕಟಿಸಿದ್ದಾರೆ. ಕೊಲ್ಹಾಪುರ ಜಿಲ್ಲೆಯ ಕಂಬಲ ವಾಡಿಯವರಾದ ಸ್ವಪ್ನಿಲ್​, 2009ರಲ್ಲಿ ಮಹಾರಾಷ್ಟ್ರದ ಕ್ರೀಡಾ ಪ್ರಭೋದಿನಿ ಯೋಜನೆಯಡಿ ಕ್ರೀಡಾ ತರಬೇತಿಗೆ ಆಯ್ಕೆಯಾಗಿದ್ದರು.

ಒಲಿಂಪಿಕ್ಸ್​ನಲ್ಲಿ ಪುರುಷರ 50 ಮೀ. ರೈಫಲ್​ 3 ಪೊಸಿಷನ್​ ಸ್ಪರ್ಧೆಯಲ್ಲಿ ಪದಕ ಗೆದ್ದ ಮೊದಲ ಭಾರತೀಯ ಹಾಗೂ 3ನೇ ರೈಫಲ್​ ಶೂಟರ್​ ಎಂಬ ಇತಿಹಾಸ ಬರೆದಿದ್ದಾರೆ. ಗುರುವಾರ ನಡೆದ ಫೈನಲ್​ ಸ್ಪರ್ಧೆಯಲ್ಲಿ ಅವರು ಒಟ್ಟು 451.4 ಅಂಕ ಗಳಿಸುವ ಮೂಲಕ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದರು. ಸ್ವಪ್ನಿಲ್​ ಕುಸಾಲೆಗೆ ಮಹರಾಷ್ಟ್ರ ಸರ್ಕಾರದ ಬಹುಮಾನ ಮೊತ್ತದ ಹೊರತಾಗಿಯೂ ಕೇಂದ್ರ ಸರ್ಕಾರದಿಂದ 30 ಲಕ್ಷ ರೂ. ಮತ್ತು ಭಾರತೀಯ ಒಲಿಂಪಿಕ್ಸ್​ ಸಂಸ್ಥೆಯಿಂದ 50 ಲಕ್ಷ ರೂ. ಬಹುಮಾನ ಸಿಗಲಿದೆ.

ಇದನ್ನೂ ಓದಿ: Paris Olympics: ಆರ್ಚರಿ ಮಿಶ್ರ ತಂಡ ಸ್ಪರ್ಧೆಯಲ್ಲಿ ಕ್ವಾರ್ಟರ್​ ಫೈನಲ್​ ತಲುಪಿದ ಧೀರಜ್‌- ಅಂಕಿತಾ ಜೋಡಿ

ನೀತಾ ಅಂಬಾನಿ ಮೆಚ್ಚುಗೆ

ಒಲಿಂಪಿಕ್ಸ್​ ಪದಕ ಗೆಲ್ಲುವ ಮೂಲಕ ದೇಶಕ್ಕೆ ಮತ್ತು ರಾಜ್ಯಕ್ಕೆ ಕೀರ್ತಿ ತಂದ ಸ್ವಪ್ನಿಲ್​ ಕುಸಾಲೆಗೆ ರಿಲಯನ್ಸ್ ಫೌಂಡೇಶನ್ (Reliance Foundation) ಸಂಸ್ಥಾಪಕಿ ಹಾಗೂ ಅಂತಾರಾಷ್ಟ್ರೀಯ ಒಲಿಂಪಿಕ್ಸ್​ ಸಮಿತಿಯ(IOC) ಸದಸ್ಯೆಯಾಗಿರುವ ನೀತಾ ಅಂಬಾನಿ(Nita Ambani) ಅಭಿನಂದನೆ ಸಲ್ಲಿಸಿದ್ದಾರೆ. “ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದು ಇತಿಹಾಸ ನಿರ್ಮಿಸಿದ ಸ್ವಪ್ನಿಲ್ ಕುಸಾಲೆಗೆ ನನ್ನ ಅಭಿನಂದನೆಗಳು. ನಿಮ್ಮ ಈ ಸಾಧನೆಯಿಂದ ದೇಶವೇ ಹೆಮ್ಮೆಪಡುವಂತಾಗಿದೆ. ನಿಮ್ಮ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯ ಪ್ರತೀಕ ಈ ಗೆಲುವು. ಮುಂದೆಯೂ ಕೂಡ ದೇಶಕ್ಕಾಗಿ ಹಲವು ಪದಕ ಗೆಲ್ಲುವಂತಾಲಿ” ಎಂದು ನೀತಾ ಅಂಬಾನಿ ಹಾರೈಸಿದ್ದಾರೆ.

Exit mobile version