Site icon Vistara News

IPL 2024: ಐಪಿಎಲ್​ಗೂ ನೀರಿನ ಸಮಸ್ಯೆ ಬಿಸಿ; ಬೆಂಗಳೂರಿನ ಪಂದ್ಯಗಳು ಅನುಮಾನ!

m chinnaswamy

ಬೆಂಗಳೂರು: ಬೆಂಗಳೂರಲ್ಲಿ ನೀರಿನ ಸಮಸ್ಯೆ ತೀವ್ರಗೊಂಡಿರುವ(bangalore water crisis) ಹಿನ್ನೆಲೆ ಚಿನ್ನಸ್ವಾಮಿ(m chinnaswamy) ಕ್ರೀಡಾಂಗಣದಲ್ಲಿ ನಡೆಯುವ 17ನೇ ಆವೃತ್ತಿಯ ಐಪಿಎಲ್(IPL 2024) ಟೂರ್ನಿಯ​ ಪಂದ್ಯಾವಳಿಗಳನ್ನು ಬೇರೆ ರಾಜ್ಯಕ್ಕೆ ಸ್ಥಳಾಂತರಿಸುವಂತೆ ನೆಟ್ಟಿಗರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಈ ಕುರಿತು ಟ್ವಿಟರ್​ನಲ್ಲಿ ಅಭಿಯಾನವೊಂದು ಕೂಡ ಶರುವಾಗಿದೆ.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೊದಲ 21 ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಪ್ರಕಟಿಸಲಾಗಿದೆ. ಈ ಪೈಕಿ ಬೆಂಗಳೂರಿನಲ್ಲಿ ಮೂರು ಪಂದ್ಯಗಳು ನಡೆಯಲಿವೆ. ಅವುಗಳೆಂದರೆ, ಮಾರ್ಚ್ 25 ರಂದು ಆತಿಥೇಯ ಆರ್​ಸಿಬಿ ತಂಡವು ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ನಂತರ ಎರಡನೇ ಪಂದ್ಯವನ್ನು ಮಾರ್ಚ್ 29 ರಂದು ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ಮತ್ತು ಮೂರನೇ ಪಂದ್ಯವನ್ನು ಏಪ್ರಿಲ್ 2 ರಂದು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಆಡಲಾಗುತ್ತದೆ.

ಕ್ರಿಕೆಟ್ ಪಿಚ್ ನಿರ್ವಹಣೆಗೆ ನಿತ್ಯ 15-20 ಸಾವಿರ ಲೀಟರ್ ನೀರು ಬೇಕಾಗುತ್ತದೆ. ಮೂರು ಪಂದ್ಯಗಳಿಗೆ ಲೆಕ್ಕಾ ಹಾಕಿದರೆ ಇದು ದುಪ್ಪಟ್ಟಾಗುತ್ತದೆ. ಈಗಲೇ ಬೆಂಗಳೂರಿನ ಹಲವು ಕಡೆ ಜನರು ಕುಡಿಯುವ ನೀರಿಗಾಗಿ ಪರದಾಟ ನಡೆಸುತ್ತಿದ್ದಾರೆ. ಹೀಗಿರುವಾಗ ಪಂದ್ಯಗಳು ನಡೆಸಿದರೆ ಸ್ಥಿತಿ ಮತ್ತಷ್ಟು ಚಿಂತಾಜನಕವಾಗಲಿದೆ. ಹೀಗಾಗಿ ಇಲ್ಲಿನ ಪಂದ್ಯಗಳನ್ನು ಬೇರೆ ಕಡೆ ನಡೆಸಿ ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ. ಇನ್ನು ಕೆಲ ನೆಟ್ಟಿಗರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಹ್ಯಾಶ್​ ಟ್ಯಾಗ್​ ಮಾಡಿ ಮನವಿ ಮಾಡಿದ್ದಾರೆ.

ಮುಂಬೈ ಪಂದ್ಯಗಳು ಶಿಫ್ಟ್​ ಆಗಿತ್ತು


2016ರಲ್ಲಿ ಮಹಾರಾಷ್ಟ್ರದಲ್ಲಿ ಬೀಕರ ಬರಗಾಲ ಬಂದ ಪರಿಣಾಮ ಇಲ್ಲಿ ಆಯೋಜನೆಗೊಂಡಿದ್ದ ಐಪಿಎಲ್​ ಪಂದ್ಯಗಳನ್ನು ಮಹಾರಾಷ್ಟ್ರ ಹೈಕೋರ್ಟ್ ಬೇರೆಡೆಗೆ ಶಿಫ್ಟ್​ ಮಾಡುವಂತೆ ಆದೇಶ ಹೊರಡಿಸಿತ್ತು. ಹೀಗಾಗಿ 7 ಪಂದ್ಯಗಳು ಬೆಂಗಳೂರಿಗೆ ಶಿಫ್ಟ್ ಆಗಿತ್ತು. ಇದೀಗ ಬೆಂಗಳೂರಿನ ಪಂದ್ಯಗಳು ಕೂಡ ಇದೇ ರೀತಿ ಬೇರೆ ರಾಜ್ಯಕ್ಕೆ ಶಿಫ್ಟ್​ ಆದರೆ ಅಚ್ಚರಿ ಪಡಬೇಕಿಲ್ಲ.

ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಕುಡಿಯುವ ನೀರಿನ ಸಮಸ್ಯೆ (Water crisis) ಎದುರಾಗಿದೆ. ಇಂತಹ ಭೀಕರ ಬರದಲ್ಲೂ ಸರ್ಕಾರವು ತಮಿಳುನಾಡಿಗೆ ಕಾವೇರಿ ನೀರು ಹರಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿದೆ. ಆದರೆ ಈ ಆರೋಪವನ್ನು ಕಾವೇರಿ ನಿಗಮವು (KRS Dam) ತಳ್ಳಿಹಾಕಿದೆ. ನೀರು ತಮಿಳುನಾಡಿಗೆ ಅಲ್ಲ ಬದಲಾಗಿ ಬೆಂಗಳೂರಿಗೆ ಬಿಡಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿದೆ.

5000 ರೂ. ದಂಡ! 


ಕರ್ನಾಟಕವು ಹಿಂದೆಂದೂ ಕಂಡರಿಯದ ಭೀಕರ ಬರಗಾಲಕ್ಕೆ ತುತ್ತಾಗಿದೆ. ಎಲ್ಲೆಲ್ಲೂ ನೀರಿಗೆ ಹಾಹಾಕಾರ (Water Crisis) ಶುರುವಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಈ ಸಮಸ್ಯೆ (Bangalore Water Problem) ಮತ್ತಷ್ಟು ಉಲ್ಬಣಿಸಿದೆ. ಈ ನಡುವೆ ನೀರಿನ ಸಮರ್ಪಕ ನಿರ್ವಹಣೆಗೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (Bangalore Water Supply and Sewerage Board – ಬಿಡಬ್ಲ್ಯುಎಸ್‌ಎಸ್‌ಬಿ) ಮುಂದಾಗಿದೆ. ನೀರಿನ ಬಳಕೆ ಹೇಗೆ ಮಾಡಬೇಕು ಎಂದು ಮಾರ್ಗಸೂಚಿಯನ್ನು ಹೊರಡಿಸಿದೆ. ಇದರ ಅನುಸಾರ ನೀರಿನ ಬಳಕೆ ಮಾಡಬೇಕು. ನಿಷೇಧಿತ ಆರು ಅಂಶಗಳ ಕಾರ್ಯಗಳಿಗೆ ನೀರು ಬಳಕೆ ಮಾಡಿದರೆ 5 ಸಾವಿರ ರೂಪಾಯಿ ದಂಡ ವಿಧಿಸಲು ಮುಂದಾಗಿದೆ. ಅಲ್ಲದೆ, ಇದಕ್ಕೆ ಸಾರ್ವಜನಿಕರ ಸಹಕಾರವನ್ನೂ ಕೋರಲಾಗಿದ್ದು, ನಿಯಮ ಉಲ್ಲಂಘನೆ ಕಂಡು ಬಂದರೆ 1916 ಸಂಖ್ಯೆಗೆ ಕರೆ ಮಾಡುವಂತೆ ಮನವಿ ಮಾಡಲಾಗಿದೆ.

Exit mobile version