ಬೆಂಗಳೂರು: ಕರ್ನಾಟಕದ ಉದಯೋನ್ಮುಖ ಕ್ರಿಕೆಟ್ ಆಟಗಾರ್ತಿ ಬಲಗೈ ಸ್ಪಿನ್ನರ್ ಆಗಿರುವ ಶ್ರೇಯಾಂಕಾ ಪಾಟೀಲ್(shreyanka patil) ಅವರು ಮಹಿಳಾ ಕೆರಿಬಿಯನ್ ಪ್ರೀಮಿಯರ್ ಲೀಗ್(ಸಿಪಿಎಲ್)ನಲ್ಲಿ(Caribbean Premier League) ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಜತೆಗೆ ಈ ಲೀಗ್‌ನಲ್ಲಿ ಆಡಲಿರುವ ಭಾರತದ ಮೊದಲ ಕ್ರಿಕೆಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
20 ವರ್ಷದ ಶ್ರೇಯಾಂಕ ಅವರನ್ನು ಗಯಾನ ಅಮೆಜಾನ್ ವಾರಿಯರ್ಸ್ ತಂಡಕ್ಕೆ ಸೇರಿಸಿಕೊಂಡಿದೆ. ಇದೇ ವರ್ಷ ಭಾರತದಲ್ಲಿ ನಡೆದ ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ ಆರ್‌ಸಿಬಿ ಪರ ಮಿಂಚಿದ ಇವರು ಎಲ್ಲರ ಗಮನ ಸೆಳೆದಿದ್ದರು. ಕಳೆದ ತಿಂಗಳು ನಡೆದಿದ್ದ ಮಹಿಳಾ ಎಮರ್ಜಿಂಗ್ ತಂಡಗಳ ಏಷ್ಯಾ ಕಪ್ ಕೂಟದಲ್ಲಿ ಭಾರತ ತಂಡ ಚಾಂಪಿಯನ್ ಆಗುವಲ್ಲಿ ಶ್ರೇಯಾಂಕಾ ಪ್ರಮುಖ ರೂವಾರಿಯಾಗಿದ್ದರು. ಅದರಲ್ಲೂ ಹಾಂಗ್ಕಾಂಗ್ ವಿರುದ್ಧದ ಮೊದಲ ಪಂದ್ಯದಲ್ಲಿ ಕೇವಲ 2 ರನ್ ನೀಡಿ 5 ವಿಕೆಟ್ ಉರುಳಿಸಿದ್ದರು. ಬಾಂಗ್ಲಾ ವಿರುದ್ಧದ ಫೈನಲ್ ಪಂದ್ಯದಲ್ಲಿಯೂ ಸ್ಪಿನ್ ಮ್ಯಾಜಿಕ್ ಮಾಡಿದ್ದ ಅವರು 4 ವಿಕೆಟ್ ಕೆಡವಿ ಭಾರತ ತಂಡ ಚಾಂಪಿನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರ ಈ ಪ್ರದರ್ಶನಕ್ಕೆ ಸರಣಿಶ್ರೆಷ್ಠ ಪ್ರಸಶ್ತಿಯೂ ಲಭಿಸಿತ್ತು.
ಈಗಾಗಲೇ ಭಾರತ ತಂಡದ ಭವಿಷ್ಯದ ಆಟಗಾರ್ತಿ ಎಂದೇ ಗುರುತಿಸಿಕೊಂಡಿರುವ ಅವರು ಸಿಕ್ಕ ಅವಕಾಶವನ್ನೆಲ್ಲಾ ಸದ್ಬಳಕೆ ಮಾಡಿಕೊಳ್ಳತ್ತಲೇ ಬರುತ್ತಿದ್ದಾರೆ. ಸದ್ಯದಲ್ಲೇ ಭಾರತ ಪ್ರಧಾನ ತಂಡಕ್ಕೆ ಪದಾರ್ಪಣೆ ಮಾಡಿದರೂ ಅಚ್ಚರಿಯಿಲ್ಲ. ಶ್ರೇಷ್ಠ ಪ್ರದರ್ಶನ ತೋರುವ ಮೂಲಕ ಗಮನ ಸೆಳೆಯುತ್ತಿರುವ ಅವರು ಮೊದಲ ಬಾರಿಗೆ ಕೆರಿಬಿಯನ್ ಮಹಿಳಾ ಲೀಗ್ ಆಡಲು ಎದುರು ನೋಡುತ್ತಿದ್ದಾರೆ.
ಕೆರಿಬಿಯನ್ ಲೀಗ್‌ನಲ್ಲಿ ಆಡುವ ಕುರಿತು ಪ್ರತಿಕ್ರಿಯೆ ನೀಡಿರುವ ಶ್ರೇಯಾಂಕ, ವಿಶ್ವದ ಶ್ರೇಷ್ಠ ಆಟಗಾರ್ತಿಯರೊಂದಿಗೆ ಆಡುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ಈಗಾಗಲೇ ಮಹಿಳಾ ಐಪಿಎಲ್ನಲ್ಲಿ ಆರ್‌ಸಿಬಿ ಪರ ಆಡಿದ ಅನುಭವ ಹೊಂದಿದ್ದೇನೆ ಇದೀಗ ಮತ್ತೊಂದು ಲೀಗ್‌ನಲ್ಲಿ ಆಡುವ ಮೂಲಕ ನನ್ನ ಕ್ರಿಕೆಟ್ ಕೌಶಲವನ್ನು ಹೆಚ್ಚಿಸಲು ಇದು ಸಹಕಾರಿಯಾಗಲಿದೆ” ಎಂದರು. ಕೆಲ ದಿನಗಳ ಹಿಂದಷ್ಟೇ ಅವರು ಭಾರತ ವನಿತೆಯರ ತಂಡದಲ್ಲಿ ಆಡುವುದೇ ಪ್ರಮುಖ ಗುರಿ. ದೇಶಕ್ಕಾಗಿ ವಿಶ್ವಕಪ್ ಗೆಲ್ಲುವುದು, ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲುವುದು ತಮ್ಮ ಮಹದಾಸೆ ಎಂದು ಹೇಳಿಕೊಂಡಿದ್ದರು.
ಇದನ್ನೂ ಓದಿ Women’s Asia Cup 2023: ಭಾರತದ ವನಿತೆಯರ ತಂಡ ‘ಎ’ ಒನ್; ಬಾಂಗ್ಲಾ ಮಣಿಸಿ ಏಷ್ಯಾ ಕಪ್ ಚಾಂಪಿಯನ್ಸ್
To say I am super duper excited would be a massive understatement!! Look at that squad 😍 https://t.co/nCuRgPw7t5
— Shreyanka Patil (@shreyanka_patil) July 1, 2023
ಕೊಹ್ಲಿಯ ಅಪ್ಪಟ ಅಭಿಮಾನಿ
ಶ್ರೇಯಾಂಕಾ ಅವರು ವಿರಾಟ್ ಕೊಹ್ಲಿಯ ದೊಡ್ಡ ಅಭಿಮಾನಿಯಾಗಿದ್ದಾರೆ. ಈ ವಿಚಾರವನ್ನು ಅವರೇ ಸ್ವತಃ ಹೇಳಿಕೊಂಡಿದ್ದಾರೆ. ಕೊಹ್ಲಿ ಸರ್ ಅವರನ್ನು ಆನ್‌ಫೀಲ್ಡ್ ಹಾಗೂ ಆಫ್ ಫೀಲ್ಡ್‌ನಲ್ಲಿ ನೋಡುವುದೇ ತುಂಬಾ ಖುಷಿ. ಜತೆಗೆ ಅವರ ಅಗ್ರೆಸಿವ್ ತುಂಬಾ ಇಷ್ಟ ಎಂದು ಹೇಳಿದ್ದರು. ವುಮೆನ್ಸ್ ಪ್ರೀಮಿಯರ್ ಲೀಗ್ ವೇಳೆ ಕೊಹ್ಲಿಯ ಜತೆ ಫೋಟೊ ಕೂಡ ತೆಗೆಸಿಕೊಂಡು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಸದ್ಯ ಉತ್ತಮ ಪ್ರದರ್ಶನ ತೋರುತ್ತಿರುವ ಅವರು ಶೀಘ್ರದಲ್ಲೇ ಭಾರತ ತಂಡದ ಕದ ತಟ್ಟುವ ವಿಶ್ವಾಸದಲ್ಲಿದ್ದಾರೆ.