ಬೆಂಗಳೂರು: ಕರ್ನಾಟಕ ತಂಡ ತೊರೆದು ಕೇರಳ ತಂಡಕ್ಕೆ ಹೋಗಿದ್ದ ಶ್ರೇಯಸ್ ಗೋಪಾಲ್(Shreyas Gopal) ಮತ್ತೆ ತವರು ತಂಡಕ್ಕೆ ವಾಪಸ್ ಆಗಿದ್ದಾರೆ. ಕಳೆದ ವರ್ಷ ರಣಜಿ ಟೂರ್ನಿಯ ವೇಳೆ ಅವರು ಕೇರಳ ತಂಡ ಸೇರಿದ್ದರು. ರಾಜ್ಯ ತಂಡಕ್ಕೆ ಮರಳಿದ ವಿಚಾರವನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧಿಕಾರಿಗಳು ಖಚಿತಪಡಿಸಿದ್ದಾರೆ.
30 ವರ್ಷದ ಶ್ರೇಯಸ್ ಗೋಪಾಲ್ 2013ರಿಂದ 10 ವರ್ಷಗಳ ಕಾಲ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದರು. ಆದರೆ, ಕಳೆದ ವರ್ಷ ತಂಡದಲ್ಲಿ ಸರಿಯಾದ ಅವಕಾಶ ಸಿಗುತ್ತಿಲ್ಲ ಎನ್ನುವ ಕಾರಣದಿಂದ ಅವರು ರಾಜ್ಯ ತಂಡವನ್ನು ತೊರೆದು ಕೇರಳ ತಂಡಕ್ಕೆ ಸೇರ್ಪಡೆಗೊಂಡಿದ್ದರು. ಈ ಬಾರಿ ಮತ್ತೆ ಕರ್ನಾಟಕದ ಪರ ಆಡಲು ನಿರ್ಧರಿಸಿದ್ದಾರೆ. ಕೆರಳ ತಂಡದಿಂದ ನಿರಾಕ್ಷೇಪಣಾ ಪತ್ರವನ್ನು ಕೂಡ ಪಡೆದುಕೊಂಡಿದ್ದಾರೆ. ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಕೇರಳ ಪರ ಆಡಿದ್ದ ಅವರು ಕೇವಲ 7 ಪಂದ್ಯಗಳಲ್ಲಿ 12 ವಿಕೆಟ್ಗಳನ್ನು ಪಡೆದಿದ್ದರು.
ಇದನ್ನೂ ಓದಿ Ranji Trophy : ರಣಜಿ ಟ್ರೋಫಿಯಲ್ಲಿ ಕಳೆಗುಂದಿದ ಕರ್ನಾಟಕ ತಂಡ
ಶ್ರೇಯಸ್ ಗೋಪಾಲ್ ಇದುವರೆಗೆ 82 ಪ್ರಥಮ ದರ್ಜೆ, 65 ಲಿಸ್ಟ್ ‘ಎ’ ಹಾಗೂ 97 ಟಿ20 ಪಂದ್ಯ ಆಡಿದ್ದಾರೆ. ಪ್ರಸ್ತುತ ಸಾಗುತ್ತಿರುವ ಮಹಾರಾಜಾ ಟಿ20 ಟ್ರೋಫಿಯಲ್ಲಿ ಮಂಗಳೂರು ತಂಡದ ಪರ ಆಡುತ್ತಿದ್ದಾರೆ. ಶ್ರೇಯಸ್ ಗೋಪಾಲ್ ಅತ್ಯುತ್ತಮ ಲೆಗ್ ಸ್ಪಿನ್ನರ್. ವಿರಾಟ್ ಕೊಹ್ಲಿಗೂ ಅವರ ಎಸೆತವನ್ನು ಎದುರಿಸಲು ಕಷ್ಟವಾಗುತ್ತದೆ. ಐಪಿಎಲ್ನಲ್ಲಿ ಒಟ್ಟು ಮೂರು ಬಾರಿ ಕೊಹ್ಲಿಯನ್ನು ಔಟ್ ಮಾಡಿದ್ದಾರೆ.
ಆಫ್ಘನ್ ಕ್ರಿಕೆಟ್ ತಂಡಕ್ಕೆ ಶ್ರೀಧರ್ ಸಹಾಯಕ ಕೋಚ್
ಭಾರತ ತಂಡದ ಮಾಜಿ ಫೀಲ್ಡಿಂಗ್ ಕೋಚ್ ಆರ್.ಶ್ರೀಧರ್(R Sridhar) ಅವರು ಅಫಘಾನಿಸ್ತಾನ(Afghanistan) ಕ್ರಿಕೆಟ್ ತಂಡದ ಸಹಾಯಕ ಕೋಚ್ ಆಗಿ ನೇಮಕಗೊಂಡಿದ್ದಾರೆ. ನ್ಯೂಜಿಲ್ಯಾಂಡ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಮುಂಬರುವ ಸರಣಿಯಲ್ಲಿ ಶ್ರೀಧರ್ ಆಫ್ಘನ್ ತಂಡದ ಸಹಾಯಕ ಕೋಚ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.
ಶ್ರೀಧರ್ ಭಾರತ ಕ್ರಿಕೆಟ್ ತಂಡದಲ್ಲಿ 2014ರಿಂದ ಸತತ 7 ವರ್ಷಗಳ ಕಾಲ ಫೀಲ್ಡಿಂಗ್ ಕೋಚ್ ಆಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ರವಿಶಾಸ್ತ್ರಿ ಕೋಚ್ ಆಗಿದ್ದ ವೇಳೆ ಅವರ ಸಹಾಯಕ ಸಿಬ್ಬಂದಿಯ ಭಾಗವಾಗಿ ಕೆಲಸ ಮಾಡಿದ್ದರು. ನ್ಯೂಜಿಲ್ಯಾಂಡ್ ವಿರುದ್ಧ ಅಫಫ್ಘಾನಿಸ್ತಾನ ಒಂದು ಟೆಸ್ಟ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ.
ಹೈದರಾಬಾದ್ ಮೂಲದ ಆರ್.ಶ್ರೀಧರ್ 35 ಪ್ರಥಮ ದರ್ಜೆ ಮತ್ತು 15 ‘ಎ’ ದರ್ಜೆಯ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದಾರೆ. 2015 ಮತ್ತು 2019ರ ಏಕದಿನ ವಿಶ್ವಕಪ್ ಮತ್ತು 2016 ಮತ್ತು 2021ರ ಟಿ-20 ವಿಶ್ವಕಪ್ಗಳಲ್ಲಿ ಭಾರತ ತಂಡದ ಫೀಲ್ಡಿಂಗ್ ಕೋಚ್ ಆಗಿ ಸೇವೆ ಸಲ್ಲಿಸಿದ್ದರು.