Site icon Vistara News

Shreyas Iyer: 3ನೇ ಟೆಸ್ಟ್​ಗೂ ಮುನ್ನವೇ ಭಾರತಕ್ಕೆ ಆತಂಕ; ಸರಣಿಯಿಂದಲೇ ಹೊರಬಿದ್ದ ಅಯ್ಯರ್!

Shreyas Iyer

ಬೆಂಗಳೂರು: ಇಂಗ್ಲೆಂಡ್​ ವಿರುದ್ಧದ ಮೂರನೇ ಟೆಸ್ಟ್​ ಪಂದ್ಯಕ್ಕೂ ಮುನ್ನವೇ ಭಾರತ ತಂಡಕ್ಕೆ ದೊಡ್ಡ ಆತಂಕವೊಂದು ಎದುರಾಗಿದೆ. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್(Shreyas Iyer) ಗಾಯದಿಂದಾಗಿ ಇಂಗ್ಲೆಂಡ್ ವಿರುದ್ಧದ ಕೊನೆಯ ಮೂರು ಟೆಸ್ಟ್ ಪಂದ್ಯಗಳಿಂದ ಹೊರಗುಳಿಯುವ ಭೀತಿಯಲ್ಲಿದ್ದಾರೆ.

ಶ್ರೇಯಸ್​ ಅಯ್ಯರ್ ಅವರು ಬೆನ್ನು ಮತ್ತು ತೊಡೆಸಂದು ಗಾಯದಿಂದ(Shreyas Iyer back and groin pain) ಬಳಲುತ್ತಿದ್ದು ನೋವಿನ ಬಗ್ಗೆ ಆಯ್ಕೆ ಸಮಿತಿ ಹಾಗೂ ಬಿಸಿಸಿಐಗೆ ದೂರು ನೀಡಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್‌ ವರದಿ ಮಾಡಿದೆ. ಭಾರತ ಮತ್ತು ಇಂಗ್ಲೆಂಡ್​ ನಡುವಣ ಮೂರನೇ ಟೆಸ್ಟ್ ಪಂದ್ಯ ಫೆಬ್ರವರಿ 15 ರಂದು ಆರಂಭಗೊಳ್ಳಲಿದೆ. ಈ ಪಂದ್ಯಕ್ಕಾಗಿ ಬಿಸಿಸಿಐ ಇದುವರೆಗೂ ತಂಡವನ್ನು ಪ್ರಕಟಿಸಿಲ್ಲ ಇದರ ಬೆನ್ನಲ್ಲೇ ಅಯ್ಯರ್​ ತಮ್ಮ ಗಾಯದ ಬಗ್ಗೆ ದೂರು ನೀಡಿದ್ದಾರೆ.

ಈಗಾಗಲೇ ಕೆ.ಎಲ್​ ರಾಹುಲ್​, ರವೀಂದ್ರ ಜಡೇಜಾ, ಮೊಹಮ್ಮದ್​ ಶಮಿ ಗಾಯದಿಂದ ಬಳಲುತ್ತಿದ್ದಾರೆ. ಅತ್ತ ವಿರಾಟ್​ ಕೊಹ್ಲಿ ಅವರು ವೈಯಕ್ತಿಕ ಕಾರಣ ನೀಡಿ ಮೊದಲ 2 ಪಂದ್ಯಗಳಿಂದ ಹೊರಗುಳಿದ ಬಳಿಕ ಮುಂದಿನ ಪಂದ್ಯಗಳಿಗೆ ಲಭ್ಯವಿರುವ ಕುರಿತು ಯಾವಿದೇ ಅಪ್​ಡೇಟ್​ ನೀಡಿಲ್ಲ. ಇದೀಗ ಅಯ್ಯರ್​ ಕೂಡ ಗಾಯಗೊಂಡು ಅಲಭ್ಯರಾಗುವ ಸ್ಥಿತಿಯಲ್ಲಿದ್ದಾರೆ. ಒಟ್ಟಾರೆ ಆಯ್ಕೆ ಸಮಿತಿಗೆ ಆಟಗಾರರ ಗಾಯದ್ದೇ ದೊಡ್ಡ ಚಿಂತೆಯಾಗಿದೆ.

ಶ್ರೇಯಸ್​ ಅಯ್ಯರ್​ ಅವರು ಬೆನ್ನು ನೋವಿಗೆ ತುತ್ತಾಗಿರುವುದು ಇದೇ ಮೊದಲಲ್ಲ. ಕಳೆದ ವರ್ಷವೂ ಆಸ್ಟ್ರೇಲಿಯಾ ವಿರುದ್ಧದ ತವರಿನ ಬಾರ್ಡರ್​ ಗವಾಸ್ಕರ್ ಟೆಸ್ಟ್​ ಸರಣಿಯ ವೇಳೆಯೂ ಬೆನ್ನು ನೋವಿಗೆ ಸಿಲುಕಿ ಸುಮಾರು ಆರು ತಿಂಗಳು ಕ್ರಿಕೆಟ್​ನಿಂದ ದೂರ ಉಳಿದಿದ್ದರು. ಐಪಿಎಲ್ ಟೂರ್ನಿಯಿಂದಲೂ ಹೊರಬಿದ್ದಿದ್ದರು. ಸಂಪೂರ್ಣ ಚೇತರಿಕೆ ಕಾಣದ ಹೊರತಾಗಿಯೂ ಅವರನ್ನು ಏಕದಿನ ವಿಶ್ವಕಪ್​ ಸಲುವಾಗಿ ಏಷ್ಯಾಕಪ್​ನಲ್ಲಿ ಆಡಿಸಲಾಗಿತ್ತು. ಜತೆಗೆ ವಿಶ್ವಕಪ್​ನಲ್ಲಿಯೂ ಸ್ಥಾನ ನೀಡಲಾಗಿತ್ತು. ಕಳಪೆ ಫಾರ್ಮ್​ನಲ್ಲಿರುವ ಅವರು ಮತ್ತೆ ಬೆನ್ನು ನೋವಿಗೆ ತುತ್ತಾಗಿದ್ದಾರೆ.

ಇದನ್ನೂ ಓದಿ Shreyas Iyer : ಬೆನ್​ಸ್ಟೋಕ್ಸ್​​ಗೆ ಅವರದ್ದೇ ಶೈಲಿಯಲ್ಲಿ ಪ್ರತ್ಯುತ್ತರ ನೀಡಿದ ಶ್ರೇಯಸ್ ಅಯ್ಯರ್​!

​ಒಂದೊಮ್ಮೆ ಶ್ರೇಯಸ್​ ಅಯ್ಯರ್​ ಅವರು ಉಳಿದ ಮೂರು ಟೆಸ್ಟ್​ ಪಂದ್ಯಗಳಿಗೆ ಅಲಭ್ಯರಾದರೆ, ಅವರ ಸ್ಥಾನಕ್ಕೆ ಸರ್ಫರಾಜ್​ ಖಾನ್​ ಆಯ್ಕೆಯಾಗಬಹುದು. ಸರ್ಫರಾಜ್​ ಖಾನ್​ ದ್ವಿತೀಯ ಟೆಸ್ಟ್​ ಪಂದ್ಯಕ್ಕೂ ಆಯ್ಕೆಯಾಗಿದ್ದರು. ಆದರೆ ಆಡುವ ಅವಕಾಶ ಸಿಕ್ಕಿರಲಿಲ್ಲ. ದೇಶೀಯ ಕ್ರಿಕೆಟ್​ನಲ್ಲಿ ಉತ್ತಮ ಪ್ರದರ್ಶನ ತೋರಿರುವ ಸರ್ಫರಾಜ್​ ಮಧ್ಯಮ ಕ್ರಮಾಂಕಕ್ಕೆ ಸೂಕ್ತ ಆಟಗಾರನಾಗಿದ್ದಾರೆ. ಹೀಗಾಗಿ ಅಯ್ಯರ್​ ಅಲಭ್ಯರಾದರೆ ಸರ್ಫರಾಜ್​ಗೆ ಆಡುವ ಅವಕಾಶ ಸಿಗಲೂಬಹುದು.

“30ಕ್ಕೂ ಹೆಚ್ಚು ಎಸೆತಗಳನ್ನು ಆಡಿದ ನಂತರ ಬೆನ್ನು ನೋವು ಮತ್ತು ತೊಡೆಸಂದು ನೋವು ಕಾಣಿಸುತ್ತಿದೆ” ಎಂದು ಅಯ್ಯರ್ ಭಾರತೀಯ ತಂಡದ ಆಡಳಿತ ಮತ್ತು ವೈದ್ಯಕೀಯ ಸಿಬ್ಬಂದಿಗೆ ತಿಳಿಸಿದ್ದಾರೆ ಎಂದು ಮೂಲವೊಂದು ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದೆ. ಶಸ್ತ್ರಚಿಕಿತ್ಸೆಯ ನಂತರ, ಅವರು ಮೊದಲ ಬಾರಿಗೆ ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ, ಆದ್ದರಿಂದ ಅವರಿಗೆ ಕೆಲವು ವಾರಗಳ ಕಾಲ ವಿಶ್ರಾಂತಿ ಪಡೆಯಲು ಸಲಹೆ ನೀಡಲಾಗಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿಯಾಗಿದೆ.

Exit mobile version