ಬೆಂಗಳೂರು: ಟೀಮ್ ಇಂಡಿಯಾದ (Team India) ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ ಗಾಯದ ಸಮಸ್ಯೆಗೆ ಒಳಗಾಗಿದ್ದಾರೆ. ಹೀಗಾಗಿ ಆಸ್ಟ್ರೇಲಿಯಾ ವಿರುದ್ಧದ ಏಕ ದಿನ ಸರಣಿಗೆ ಅವರು ಅಲಭ್ಯರಾಗಿದ್ದರು. ಹೀಗಾಗಿ ಅವರು ಮುಂದಿನ ಐಪಿಎಲ್ ಆಡುವರೇ ಎಂಬ ಚರ್ಚೆ ಆರಂಭಗೊಂಡಿದೆ. ಅದೇ ರೀತಿ ಮುಂದಿನ ಏಕ ದಿನ ವಿಶ್ವ ಕಪ್ ವೇಳೆಗೆ ಬೆನ್ನು ನೋವಿನ ಸಮಸ್ಯೆಯಿಂದ ಸಂಪೂರ್ಣ ಸುಧಾರಿಸುವರೇ ಎಂಬ ಕಡೆಗೂ ಚರ್ಚೆ ಸಾಗಿದೆ. ಏತನ್ಮಧ್ಯೆ, ವೈದ್ಯರು ಶ್ರೇಯಸ್ ಅಯ್ಯರ್ಗೆ ಸರ್ಜರಿಯ ಅಗತ್ಯವಿದೆ ಎಂದ ಸಲಹೆ ಕೊಟ್ಟಿದ್ದಾರೆ. ಇದೀಗ ಹೊಸ ವರ್ತಮಾನದ ಪ್ರಕಾರ ಶ್ರೇಯಸ್ ಸದ್ಯಕ್ಕೆ ಸರ್ಜರಿಗೆ ಒಳಗಾಗುತ್ತಿಲ್ಲ. ಬದಲಾಗಿ ಏಕ ದಿನ ವಿಶ್ವ ಕಪ್ ಮುಕ್ತಾಯಗೊಂಡ ಬಳಿಕ ಅಪರೇಷನ್ ಮಾಡಿಸಿಕೊಳ್ಳಲಿದ್ದಾರೆ. ಅಲ್ಲಿ ತನಕ ರೆಸ್ಟ್ ಹಾಗೂ ರಿಹ್ಯಾಬಿಲಿಟೇಷನ್ ಮೂಲಕ ಸುಧಾರಣೆ ಕಂಡುಕೊಳ್ಳಲಿದ್ದಾರೆ.
ಶ್ರೇಯಸ್ ಅಯ್ಯರ್ ಐಪಿಎಲ್ನಲ್ಲಿ ಕೋಲ್ಕೊತಾ ನೈಟ್ ರೈಡರ್ಸ್ ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ. ಆದರೆ, ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಕೊನೇ ಪಂದ್ಯದಲ್ಲಿ ಗಾಯಗೊಂಡಿದ್ದ ಅವರು ಬ್ಯಾಟ್ ಮಾಡಲೂ ಇಳಿದಿರಲಿಲ್ಲ. ನೇರವಾಗಿ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಸೇರಿಕೊಂಡು ಪುನಶ್ಚೇತನಕ್ಕೆ ಒಳಗಾಗಿದ್ದಾರೆ. ಏತನ್ಮಧ್ಯೆ ನುರಿತ ವೈದ್ಯರು ಶ್ರೇಯಸ್ ಅಯ್ಯರ್ ಸಂಪೂರ್ಣವಾಗಿ ನೋವಿನಿಂದ ಮುಕ್ತಿ ಪಡೆಯಲು ಸರ್ಜರಿಗೆ ಅಗತ್ಯವಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ, ಸದ್ಯದಲ್ಲೇ ಅವರು ಸರ್ಜರಿಗೆ ಒಳಗಾಗದಿರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಒಂದು ವೇಳೆ ಶ್ರೇಯಸ್ ಅಯ್ಯರ್ ಬೆನ್ನು ನೋವಿನ ಸಮಸ್ಯೆಗೆ ಆಪರೇಷನ್ ಮಾಡಿಕೊಂಡರೆ ಗುಣಮುಖರಾಗಿ ಸಂಪೂರ್ಣವಾಗಿ ಫಿಚ್ ಎನಿಸಲು ಏಳು ತಿಂಗಳು ಬೇಕಾಗಬಹುದು ಎಂದು ಹೇಳಲಾಗುತ್ತಿದೆ. ಅದಕ್ಕಿಂತ ಮೊದಲು ಭಾರತದ ಆತಿಥ್ಯದಲ್ಲಿ ಏಕ ದಿನ ವಿಶ್ವ ಕಪ್ ನಡೆಯಲಿದೆ. ಸರ್ಜರಿಗೆ ಒಳಗಾದರೆ ಅವರಿಗೆ ಏಕ ದಿನ ವಿಶ್ವ ಕಪ್ನಲ್ಲಿ ಆಡುವುದು ಕಷ್ಟ. ಹೀಗಾಗಿ ಪುನಶ್ಚೇತನ ಹಾಗೂ ವಿಶ್ರಾಂತಿ ಮೂಲಕ ವಿಶ್ವ ಕಪ್ಗೆ ಸಿದ್ಧಗೊಳಿಸುವುದು ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಸಲಹೆಯಾಗಿದೆ.
ಶ್ರೇಯಸ್ ಅನಿವಾರ್ಯ
ಆಸ್ಟ್ರೇಲಿಯಾ ವಿರುದ್ಧದ ಏಕ ದಿನ ಸರಣಿಯ ಫಲಿತಾಂಶ ಗಮನಿಸಿದಾಗ ವಿಶ್ವ ಕಪ್ ತಂಡಕ್ಕೆ ಶ್ರೇಯಸ್ ಅಯ್ಯರ್ ಅನಿವಾರ್ಯ ಎನಿಸಿಕೊಂಡಿದ್ದಾರೆ. ಸರಣಿಯ ಮೂರು ಪಂದ್ಯದಲ್ಲಿ ಭಾರತ ತಂಡದ ಮಧ್ಯಮ ಕ್ರಮಾಂಕ ಸಂಪೂರ್ಣ ವೈಫಲ್ಯ ಕಂಡಿತ್ತು. ಅವರ ಬದಲಿಗೆ ಅವಕಾಶ ಪಡೆದುಕೊಂಡಿದ್ದ ಸೂರ್ಯಕುಮಾರ್ ಯಾದವ್ ಮೂರು ಪಂದ್ಯಗಳಲ್ಲಿ ಸೊನ್ನೆಗೆ ಔಟಾಗಿದ್ದರು. ಮಧ್ಯಮ ಕ್ರಮಾಂಕದ ವೈಫಲ್ಯದಿಂದಾಗಿ ಟೀಮ್ ಇಂಡಿಯಾದ 1-2 ಅಂತರದಿಂದ ಸರಣಿ ಕಳೆದುಕೊಂಡಿತ್ತು. ಹೀಗಾಗಿ ವಿಶ್ವ ಕಪ್ ತಂಡಕ್ಕೆ ಶ್ರೇಯಸ್ ಅಯ್ಯರ್ ಅತ್ಯಗತ್ಯ ಎನಿಸಿಕೊಂಡಿದ್ದಾರೆ.
ಕೋಲ್ಕೊತಾ ತಂಡಕ್ಕೆ ಸಮಸ್ಯೆ
ಐಪಿಎಲ್ನಲ್ಲಿ ಶ್ರೇಯಸ್ ಅಯ್ಯರ್ ಕೋಲ್ಕೊತಾ ನೈಟ್ ರೈಡರ್ಸ್ ತಂಡದ ಪರವಾಗಿ ಆಡಲಿದ್ದಾರೆ. ಅವರನ್ನು ತಂಡದ ನಾಯಕರನ್ನಾಗಿ ಮಾಡುವ ಉದ್ದೇಶವೂ ಫ್ರಾಂಚೈಸಿಗಿದೆ. ಆದರೆ, ಗಾಯದ ಸಮಸ್ಯೆಯಿಂದ ಶ್ರೇಯಸ್ ಆಡದೇ ಹೋದರೆ ಬೇರೆ ನಾಯಕರನ್ನು ಆಯ್ಕೆ ಮಾಡಬೇಕಾಗುತ್ತದೆ. ಒಂದು ವೇಳೆ ಅವರು ಲಭ್ಯರಾದರೂ ಟೂರ್ನಿಯ ಆರಂಭಿಕ ಹಂತದಲ್ಲಿ ಕಣಕ್ಕೆ ಇಳಿಯುವ ಸಾಧ್ಯತೆಗಳು ಇಲ್ಲ ಎಂದು ಹೇಳಲಾಗುತ್ತಿದೆ.