ಅಹಮದಾಬಾದ್: ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ಗೆ ಬೆನ್ನು ನೋವಿನ ಸಮಸ್ಯೆ ಎದುರಾಗಿದೆ. ಅವರೀಗ ಬಿಸಿಸಿಐ ವೈದ್ಯಕೀಯ ತಂಡದ ನಿಗಾದಲ್ಲಿದ್ದಾರೆ. ಅಹಮದಾಬಾದ್ನಲ್ಲಿ ನಡೆಯುತ್ತಿರುವ ಟೆಸ್ಟ್ ಸರಣಿಯ (INDvsAUS) ಕೊನೇ ಪಂದ್ಯದಲ್ಲಿ ಅವರು ಇನ್ನೂ ಬ್ಯಾಟ್ ಮಾಡಲು ಇಳಿದಿಲ್ಲ. ಒಂದು ವೇಳೆ ಸಮಸ್ಯೆ ಮುಂದುವರಿದರೆ ಭಾರತ ತಂಡಕ್ಕೆ ಹಿನ್ನಡೆಯಾಬಹುದು ಎಂದು ಅಂದಾಜಿಸಲಾಗಿದೆ.
ಶ್ರೇಯಸ್ ಅಯ್ಯರ್ ಕಳೆದ ಒಂದು ವರ್ಷದಿಂದ ಪದೇ ಪದೇ ಗಾಯದ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಹೀಗಾಗಿ ಅವರಿಗೆ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡುವ ಅವಕಾಶವೇ ಸಿಗುತ್ತಿಲ್ಲ. ಭಾರತ ತಂಡದ ಪರ ಮಧ್ಯಮ ಕ್ರಮಾಂಕದ ಆಧಾರ ಸ್ತಂಭ ಎನಿಸಿಕೊಂಡಿರುವ ಅವರನ್ನು ಮುಂಬರುವ ವಿಶ್ವ ಕಪ್ನಲ್ಲಿ ಆಡಿಸುವುದು ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಗುರಿಯಾಗಿದೆ. ಅದರೆ, ಗಾಯದ ಸಮಸ್ಯೆಯಿಂದ ಹೊರ ಬರಲು ಅವರಿಗೆ ಸಾಧ್ಯವೇ ಆಗುತ್ತಿಲ್ಲ.
ಇದನ್ನೂ ಓದಿ : IND VS AUS: ಆಸೀಸ್ ವಿರುದ್ಧದ ದ್ವಿತೀಯ ಟೆಸ್ಟ್ಗೂ ಶ್ರೇಯಸ್ ಅಯ್ಯರ್ ಅನುಮಾನ
ಶ್ರೇಯಸ್ ಅಯ್ಯರ್ ಟೆಸ್ಟ್ ಪಂದ್ಯದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಬರಬೇಕಾಗಿತ್ತು. ಆದರೆ, ಪಂದ್ಯದ ಮೂರನೇ ದಿನವಾದ ಶನಿವಾರ ಭಾರತ ತಂಡದ ಮೂರನೇ ವಿಕೆಟ್ ಪತನಗೊಂಡ ಬಳಿಕವೂ ಅಯ್ಯರ್ ಬ್ಯಾಟ್ ಹಿಡಿದು ಕ್ರೀಸ್ಗೆ ಬರಲಿಲ್ಲ. ಆಲ್ರೌಂಡರ್ ರವೀಂದ್ರ ಜಡೇಜಾ ಆಡಲು ಇಳಿದಿದ್ದರು. ಭಾನುವಾರ ಬೆಳಗ್ಗಿನ ಅವಧಿಯಲ್ಲಿ ಜಡೇಜಾ ಔಟಾದ ಬಳಿಕವೂ ಅಯ್ಯರ್ ಬರಲಿಲ್ಲ. ಕೆ. ಎಸ್ ಭರತ್ ಆಡಲು ಇಳಿದರು. ಈ ಮೂಲಕ ಅಯ್ಯರ್ಗೆ ದೊಡ್ಡ ಪ್ರಮಾಣದಲ್ಲಿ ಗಾಯ ಉಂಟಾಗಿರುವುದು ಬಹುತೇಕ ಖಚಿತಗೊಂಡಿದೆ.
ಶ್ರೇಯಸ್ ಅಯ್ಯರ್ ಕೆಳ ಬೆನ್ನು ನೋವಿನ ಸಮಸ್ಯೆ ಎದುರಿಸುತ್ತಿರುವ ಬಗ್ಗೆ ಬಿಸಿಸಿಐ ಮಾಹಿತಿ ನೀಡಿದೆ. ಅವರನ್ನು ವೈದ್ಯಕೀಯ ತಂಡ ಸ್ಕ್ಯಾನ್ ಮಾಡಲು ಕರೆದುಕೊಂಡು ಹೋಗಿದೆ ಎಂದು ತಿಳಿಸಲಾಗಿದೆ.